ತುಮಕೂರು: ಜಯ ಕರ್ನಾಟಕ ಸಂಘಟನೆ ನಗರದಲ್ಲಿ ಕನ್ನಡ ರಾಜ್ಯೋತ್ಸವ ಆಚರಣೆ ಹಾಗೂ ನಗರ ಘಟಕದ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಹಮ್ಮಿಕೊಂಡಿತ್ತು.
ಈ ವೇಳೆ ರಾಜ್ಯ ಸಂಘಟನಾ ಕಾರ್ಯದರ್ಶಿ ಸಿ.ಪಿ.ಸುಧೀರ್ ಮಾತನಾಡಿ, ಕನ್ನಡ ನಾಡು, ನುಡಿ, ನೆಲ, ಜಲ ಸಂರಕ್ಷಣೆ, ಅಸಹಾಯಕರಿಗೆ ಧ್ವನಿಯಾಗಿ ಅವರಿಗೆ ನೆರವಾಗುವ ಆಶಯದಿಂದ ಜಯಕರ್ನಾಟಕ ಸಂಘಟನೆ ಕಾರ್ಯನಿರ್ವಹಿಸುತ್ತಿದೆ. ನಾಡು, ನಾಡಿನ ಜನರ ಹಿತ ಕಾಯುವ ಸಂಕಲ್ಪ ಮಾಡಿ ಸಂಘಟನೆಗೆ ಬನ್ನಿ ಎಂದು ಹೇಳಿದರು.
ಸಂಘಟನೆಯಲ್ಲಿ ಜನಪರ ಕಾರ್ಯಕ್ರಮಗಳಲ್ಲಿ ತೊಡಗಿಕೊಳ್ಳುವ ಮೂಲಕ ನಾಯಕತ್ವ ರೂಪಿಸಿಕೊಳ್ಳಬಹುದು. ಸಮಾಜದಲ್ಲಿ ಹಲವರು ಸಮಸ್ಯೆಗಳಿವೆ. ಚುನಾಯಿತ ಪ್ರತಿನಿಧಿಗಳು ನಿರ್ಲಕ್ಷಿಸಿರುವ ಸಮಸ್ಯೆಗಳನ್ನು ಗುರುತಿಸಿ ಅವುಗಳ ನಿವಾರಣೆಗೆ ಸರ್ಕಾರದ ವಿರುದ್ಧ ಹೋರಾಟ ಮಾಡಿ ನ್ಯಾಯ ದೊರಕಿಸಿ ಜನರ ವಿಶ್ವಾಸ ಗಳಿಸಬೇಕು ಎಂದು ಹೇಳಿದರು.
ಜಿಲ್ಲಾ ಅಧ್ಯಕ್ಷ ಅನಿಲ್ ನಾಯಕ ಮಾತನಾಡಿ, ಯುವಕರು ರಾಜಕಾರಣಿಗಳ ಹಿಂದೆ ಹೋಗದೆ, ಸಂಘಟನೆಯಲ್ಲಿ ಜನರಿಗೆ ಹತ್ತಿರವಾಗಿ ಕೆಲಸ ಮಾಡಿ, ತಾವೇ ನಾಯಕರಾಗಿ ರೂಪುಗೊಂಡರೆ ರಾಜಕಾರಣಿಗಳೇ ನಿಮ್ಮ ಬಳಿಗೆ ಬರುತ್ತಾರೆ. ಸಂಘಟನೆಗೆ ಅಂತಹ ಶಕ್ತಿ ಇದೆ. ಆದರೆ ಸಂಘಟನೆಯಲ್ಲಿ ಶಿಸ್ತು, ಶ್ರದ್ಧೆ, ಪ್ರಮಾಣಿಕತೆಯಿಂದ ಕಾರ್ಯ ನಿರ್ವಹಿಸಬೇಕು ಎಂದರು.
ರಾಜ್ಯ ಕಾರ್ಯದರ್ಶಿ ದಿವ್ಯಾ ಸೋಮಶೇಖರ್ ಮಾತನಾಡಿ, ನೊಂದವರಿಗೆ ಧ್ವನಿಯಾಗಿ, ಅವರ ಸಂಕಷ್ಟಕ್ಕೆ ಸ್ಪಂದಿಸುವ ಹಾಗೂ ನಾಡು, ನುಡಿ ರಕ್ಷಣೆ ಮಾಡುವ ಆಶಯದಿಂದ ಮುತ್ತಪ್ಪ ರೈ ಅವರು ಜಯ ಕರ್ನಾಟಕ ಸಂಘಟನೆ ಸ್ಥಾಪನೆ ಮಾಡಿದರು. ಅವರ ಆಶಯದಂತೆ ಎಲ್ಲರೂ ಕೆಲಸ ಮಾಡೋಣ ಎಂದರು.
ಈ ಸಂದರ್ಭದಲ್ಲಿ ಸಂಘಟನೆಯ ನಗರ ಅಧ್ಯಕ್ಷ ಡಿ.ಜಯಣ್ಣ, ಉಪಾಧ್ಯಕ್ಷರಾದ ಜಿ.ಅಶ್ವತ್ಥ್, ರಾಕೇಶ್, ಅರುಣ್, ಪ್ರಧಾನ ಕಾರ್ಯದರ್ಶಿ ಮಂಜುನಾಥ್ ಮತ್ತಿತರರು ಅಧಿಕಾರ ವಹಿಸಿಕೊಂಡರು.
ಸAಘಟನೆಯ ಜಿಲ್ಲಾ ಗೌರವಾಧ್ಯಕ್ಷ ಸ್ಯಾಮ್ಯುಯಲ್ ವಿಕ್ಟರ್, ಪ್ರಧಾನ ಕಾರ್ಯದರ್ಶಿ ಕೆ.ಆರ್.ಗುರುಸ್ವಾಮಿ, ಕಾನೂನು ಘಟಕದ ಶಿವಕುಮಾರ್ ಇತರರು ಹಾಜರಿದ್ದರು.
ಜಯಕರ್ನಾಟಕದಿಂದ ರಾಜ್ಯೋತ್ಸವ ಆಚರಣೆ, ಹಾಗೂ ನೂತನ ಪದಾಧಿಕಾರಿಗಳ
Leave a comment
Leave a comment