ಕಲಬುರಗಿ:ಕೃಷಿ ಸಚಿವರಿಂದ ಪ್ರಗತಿ ಪರಿಶೀಲನಾ ಸಭೆ:ಕೇಂದ್ರ ಅಧ್ಯಯನಕ್ಕೆ ತಂಡಕ್ಕೆ ವಾಸ್ತವ ಬೆಳೆ ಸ್ಥಿತಿ ಮನವರಿಕೆ ಮಾಡಿಸಿ-ಎನ್.ಚಲುವರಾಯಸ್ವಾಮಿ
ಕಲಬುರಗಿರಾಜ್ಯದಲ್ಲಿ ಅನಾವೃಷ್ಠಿ ಹಿನ್ನೆಲೆಯಲ್ಲಿ 195 ತಾಲೂಕುಗಳನ್ನು ಬರಪೀಡಿತ ತಾಲೂಕುಗಳೆಂದು ಘೋಷಣೆ ಮಾಡಿದ್ದು, ಮುಂದಿನ ವಾರದಲ್ಲಿ ರಾಜ್ಯಕ್ಕೆ ಬರುವ ಕೇಂದ್ರ ಅಧ್ಯಯನ ತಂಡಕ್ಕೆ ಬೆಳೆ ಮತ್ತು ಬರಗಾಲದ ವಾಸ್ತವ ಸ್ಥಿತಿ ಮನದಟ್ಟು ಮಾಡಿಸುವ ಕೆಲಸ ಕೃಷಿ ಅಧಿಕಾರಿಗಳು ಮಾಡಬೇಕು ಎಂದು ಕೃಷಿ ಸಚಿವ ಎನ್. ಚಲುವರಾಯಸ್ವಾಮಿ ಅವರು ಅಧಿಕಾರಿಗಳಿಗೆ ಸೂಚಿಸಿದರು.
ಮಂಗಳವಾರ ಇಲ್ಲಿನ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಕಲಬುರಗಿ ವಿಭಾಗದ ಕಲಬುರಗಿ, ಬೀದರ, ರಾಯಚೂರು, ಯಾದಗಿರಿ, ಬಳ್ಳಾರಿ, ಕೊಪ್ಪಳ ಹಾಗೂ ವಿಜಯನಗರ ಜಿಲ್ಲೆಗಳ ಕೃಷಿ ಅಧಿಕಾರಿಗಳೊಂದಿಗೆ ಇಲಾಖೆಯ ಪ್ರಗತಿ ಪರಿಶೀಲನೆ ಸಭೆ ನಡೆಸಿ ಮಾತನಾಡಿದರು.
ಈ ಬಾರಿಯ ಬರಗಾಲ ಒಂದು ರೀತಿಯ ಹಸಿ ಬರಗಾಲವಾಗಿದೆ. ಸರಿಯಾದ ಸಮಯಕ್ಕೆ ಮಳೆ ಬಾರದ ಕಾರಣ ಬೆಳೆ ಬಿತ್ತನೆಯಾದರು ಇಳುವರಿ ತೀರಾ ಕಡಿಮೆ ಬರುವ ಸಾಧ್ಯತೆ ಇದೆ. ಹೀಗಾಗಿ ಕೇಂದ್ರದ ಅಧ್ಯಯನ ತಂಡ ಬರುವ ಮುನ್ನವೆ ಬೆಳೆ ಹಾನಿ ಸರ್ವೆ ಕಾರ್ಯ ಮುಗಿಸಿ ತಂಡಕ್ಕೆ ವಾಸ್ತವ ಸ್ಥಿತಿ ಮನವರಿಕೆ ಮಾಡಿಸಬೇಕು. ರೈತರಿಗೆ ನ್ಯಾಯುಯುತ ಪರಿಹಾರಕ್ಕೆ ಒದಗಿಸಲು ಅಧಿಕಾರಿಗಳು ಮುಂದಾಗಬೇಕು ಎಂದರು.
ಜಿಲ್ಲಾವಾರು ಇಲಾಖಾ ಯೋಜನೆಗಳ ಪರಿಶೀಲನಾ ವೇಳೆಯಲ್ಲಿ ಕೃಷಿ ಆಯುಕ್ತ ವೈ.ಎಸ್.ಪಾಟೀಲ ಮಾತನಾಡಿ, ಇಲಾಖೆಯ ನಿಯಮಿತ ಯೋಜನೆಗಳ ಅನುಷ್ಠಾನಕ್ಕೆ ಬಿಡುಗಡೆ ಮಾಡಲಾದ ಅನುದಾನದಲ್ಲಿ ಯಾದಗಿರಿ ಜಿಲ್ಲೆಯಲ್ಲಿ ಬಿಡುಗಡೆ ಮಾಡಲಾದ 388.95 ಲಕ್ಷ ರೂ. ಗಳಲ್ಲಿ 83.19 ಲಕ್ಷ ರೂ. ಮಾತ್ರ, ರಾಯಚೂರು ಜಿಲ್ಲೆಯಲ್ಲಿ 828 ಲಕ್ಷ ರೂ. ಪೈಕಿ 478 ಲಕ್ಷ ರೂ. ಮಾತ್ರ ಖರ್ಚು ಮಾಡಿದ್ದು, ಇದು ವಿಭಾಗದಲ್ಲಿಯೇ ಕಡಿಮೆಯಾಗಿದೆ. ಏಕೆ ಹಣ ಖರ್ಚು ಮಾಡಿಲ್ಲ ಎಂದು ಅಧಿಕಾರಿಗಳನ್ನು ಪ್ರಶ್ನಿಸಿದರು. ಸಚಿವ ಎನ್. ಚಲುವರಾಯಸ್ವಾಮಿ ಅವರು ಮಾತನಾಡಿ, ಅನುದಾನ ಖರ್ಚು ಮಾಡದಿದ್ದಕ್ಕೆ ಬೇಸರ ವ್ಯಕ್ತಪಡಿಸುತ್ತಾ, ರೈತರ ಕಲ್ಯಾಣಕ್ಕೆ ನಮ್ಮ ಸರ್ಕಾರ ಬದ್ದತೆಯಿಂದ ಕೆಲಸ ಮಾಡುತ್ತಿದೆ. ಹೀಗೆ ಅನ್ನದಾತರ ಶ್ರೇಯೋಭಿವೃದ್ಧಿಗೆ ಶೇ.100ರಷ್ಟು ಅನುದಾನ ಖರ್ಚು ಮಾಡಿ ಆರ್ಥಿಕ ಮತ್ತು ಭೌತಿಕ ಪ್ರಗತಿ ಸಾಧಿಸಬೇಕು ಎಂದು ಅಧಿಕಾರಿಗೆ ತಾಕೀತು ಮಾಡಿದರು.
ರೈತರು ಸರ್ಕಾರಿ ಯೋಜನೆಗಳ ಸೌಲಭ್ಯ ಪಡೆಯಲು ಕೆ.ವೈ.ಸಿ ಕಾರ್ಯ ಪ್ರಮುಖವಾಗಿದೆ. ಜಿಲ್ಲೆಯಲ್ಲಿ ಡಿ.ಸಿ, ಜಿಲ್ಲಾ ಪಂಚಾಯತ್ ಸಿ.ಇ.ಓ ಅವರ ಸಹಕಾರ ಪಡೆದು ಶೇ.100 ರಷ್ಟು ಪ್ರಗತಿ ಸಾಧಿಸಬೇಕು. ಹಿಂಗಾರು ಬೆಳೆಗೆ ಬೇಕಾದ ಬೀಜ, ರಸಗೊಬ್ಬರ ದಾಸ್ತಾನು ರಾಜ್ಯದಲ್ಲಿ ಸಾಕಷ್ಟಿದ್ದು, ಯಾವುದೇ ಕೊರತೆ ಇಲ್ಲ. ಜಂಟಿ ಕೃಷಿ ನಿರ್ದೇಶಕರು ಸ್ಥಳೀಯ ಶಾಸಕರ ಅಭಿಪ್ರಾಯ, ಸಕಹೆ ಪರಿಗಣಿಸಿ ಕಾರ್ಯನಿರ್ವಹಿಸಬೇಕು ಎಂದು ನಿರ್ದೇಶನ ನೀಡಿದ ಸಚಿವರು, ಇನ್ನು ಜಲಾನಯನ ಇಲಾಖೆಯ ಯೋಜನೆಗಳು ಕಾಲಮಿತಿಯಲ್ಲಿ ಅನುಷ್ಟಾನಕ್ಕೆ ಅಧಿಕಾರಿಗಳಿಗೆ ಸೂಚಿಸಿದರು.
ನೆಟೆ ರೋಗಕ್ಕೆ ನಿಯಂತ್ರಣ, ನಕಲಿ ಬೀಜ ಎಚ್ಚರಿಕೆ ವಹಿಸಿ:
ಕಳೆದ ವರ್ಷ ನೆಟೆ ರೋಗದಿಂದ ಇಲ್ಲಿನ ಪ್ರಮುಖ ಬೆಳೆ ತೊಗರಿ ಹಾಳಾಗಿದೆ. ಎರಡು ಹಂತದಲ್ಲಿ ಈಗಾಗಲೆ 123 ಕೋಟಿ ರೂ. ಪರಿಹಾರ ನಮ್ಮ ಸರ್ಕಾರ ನೀಡಿದೆ. ಮುಂದೆ ಈ ರೋಗ ಕಂಡುಬಂದಲ್ಲಿ ಅದರ ನಿಯಂತ್ರಣಕ್ಕೆ ಈಗಿನಿಂದಲೆ ತಯ್ಯಾರಿ ಮಾಡಿಕೊಳ್ಳಬೇಕು. ನಕಲಿ ಬೀಜ, ರಸಗೊಬ್ಬರ ಪೂರೈಕೆಯಾಗದಂತೆ ಜಾಗೃತ ಕೋಶ ಕಾರ್ಯನಿರ್ವಹಿಸಬೇಕು. ದಾಳಿ ಮಾಡುವದು ಒಂದು ಕ್ರಮವಾದರೆ, ಅದನ್ನು ಪೂರೈಕೆಯಾಗದಂತೆ ಕಡಿವಾಣ ಹಾಕುವುದು ತುಂಬಾನೆ ಮುಖ್ಯ ಎಂದು ಸಚಿವರು ತಿಳಿಸಿದರು.
ಇಳುವರಿ ಕಡಿಮೆ, ರೈತರಿಗೆ ನ್ಯಾಯ ಒದಗಿಸಿ:
ವಿಧಾನ ಪರಿಷತ್ ಶಾಸಕ ತಿಪ್ಪಣಪ್ಪ ಕಮಕನೂರ ಮಾತನಾಡಿ, ಮಳೆ ಕೊರತೆಯಿಂದ ನವಣಿ, ಅಲಸಂದಿ ಹೀಗೆ ಅಲ್ವಾವಧಿ ಬೆಳೆ ಇಲ್ಲಿನ ರೈತರು ಬೆಳೆದಿಲ್ಲ, ಅನ್ನದಾತರು ಕಂಗಾಲಾಗಿದ್ದಾರೆ. ಅವರ ನೆರವಿಗೆ ಧಾವಿಸಬೇಕು ಎಂದರು. ಇದಕ್ಕೆ ಧ್ವನಿಗೂಡಿಸಿದ ಶಾಸಕ ಅಲ್ಲಮಪ್ರಭು ಪಾಟೀಲ ಅವರು, ಪ್ರತಿ ವರ್ಷ ಎಕರೆಗೆ 7-8 ಕ್ವಿಂಟಾಲ್ ಬರುವ ತೊಗರಿ ಇದೀಗ 2 ಕ್ವಿಂಟಾಲ್ ಬರುವಂತಿದೆ. ಕಣ್ಣಿಗೆ ಹಸಿರು ಕಂಡರೂ, ಇಳುವರಿ ಮಾತ್ರ ತುಂಬಾ ಕಡಿಮೆ ಇದೆ. ಕೇಂದ್ರ ಅಧ್ಯಯನ ತಂಡಕ್ಕೆ ಕೃಷಿ ಇಲಾಖೆ ವಾಸ್ತವ ಸ್ಥಿತಿ ಮನವರಿಕೆ ಮಾಡಿಕೊಡುವ ಮೂಲಕ ರೈತರಿಗೆ ನ್ಯಾಯ ಒದಗಿಸಬೇಕು. ಬರಗಾಲ ಘೋಷಣೆಯ ಪರಿಹಾರ ಸಿಗುವಂತಾಗಬೇಕು ಎಂದರು.
ಶಾಸಕ ಬಿ.ಆರ್.ಪಾಟೀಲ ಮಾತನಾಡಿ, ಆಳಂದ ತಾಲೂಕಿನಲ್ಲಿ ಸೂರ್ಯಕಾಂತಿ ಬೆಳೆ ಪ್ರದೇಶ ಕಡಿಮೆಯಾಗಿದೆ. ಅಂತರ್ಜಲ ಕುಸಿತ ಕಂಡಿದೆ. ತೊಗರಿ ಬೆಳೆಯುವ ರೈತರಿಗೆ ಹೆಚ್ಚಿನ ಪರಿಹಾರ ಸಿಗಬೇಕು ಎಂದರು.
ಇದೇ ಸಂದರ್ಭದಲ್ಲಿ ವಿಭಾಗದ 7 ಜಿಲ್ಲೆಗಳಲ್ಲಿ ಬಿತ್ತನೆ, ಬೆಳೆ ಹಾನಿ, ಕುಡಿಯುವ ನೀರಿ, ನೆಟೆ ರೋಗ ಪರಿಹಾರ ವಿತರಣೆ ಕುರಿತು ಸುದೀರ್ಘವಾಗಿ ಚರ್ಚಿಸಲಾಯಿತು. ಅಯಾ ಜಿಲ್ಲೆಯ ಜಂಟಿ ಕೃಷಿ ನಿರ್ದೇಶಕರು ಸಚಿವರ ಮುಂದೆ ಜಿಲ್ಲೆಯ ಸಂಪುರ್ಣ ಪ್ರಗತಿ ವರದಿ ಮಂಡಿಸಿದರು.
ಸಭೆಯಲ್ಲಿ ಶಾಸಕ ಎಂ.ವೈ.ಪಾಟೀಲ, ಜಿಲ್ಲಾ ಪಂಚಾಯತ್ ಸಿ.ಇ.ಓ ಭಂವರ್ ಸಿಂಗ್ ಮೀನಾ, ಕೃಷಿ ನಿರ್ದೇಶಕ ಜಿ.ಟಿ.ಪುತ್ರ, ಅಪರ ಕೃಷಿ ನಿರ್ದೇಶಕ (ಸಾವಯವ ವಿಭಾಗ) ವೆಂಟರಾಮ ರೆಡ್ಡಿ, ಅಪರ ಕೃಷಿ ನಿರ್ದೇಶಕ (ಮಾಹಿತಿ ಮತ್ತು ಸಂವಹನ ತಂತ್ರಜ್ಞಾನಗಳು) ಅಂಥೋನಿ ಅಮಿನ್ಯೂಯಲ್, ಜಂಟಿ ಕೃಷಿ ನಿರ್ದೇಶಕ (ಜಾಗೃತ ಕೋಶ) ಜಿಯಾವುಲ್ಲಾ, ವಿಭಾಗದ ಜಿಲ್ಲೆಗಳ ಜಂಟಿ ನಿರ್ದೇಶಕರಾದ ಸಮದ್ ಪಟೇಲ್, ಶರಣಪ್ಪ ಮುದಗಲ್, ರತೇಂದ್ರನಾಥ ಸುಗೂರು, ದೇವಿಕಾ, ಮುತ್ತುರಾಜ, ರುದ್ರೇಶಪ್ಪ, ಮಲ್ಲಿಕಾರ್ಜುನ ಸೇರಿದಂತೆ ಕೃಷಿ ಇಲಾಖೆಯ ಇನ್ನಿತರ ಅಧಿಕಾರಿಗಳು ಇದ್ದರು.