ನಮ್ಮ ವಿದ್ಯಾರ್ಥಿ ನಮ್ಮ ಹೆಮ್ಮೆ:
ವಿದ್ಯಾನಿಧಿ ಸಾಧಕ ವಿದ್ಯಾರ್ಥಿಗಳಿಗೆ ಲ್ಯಾಪ್ಟಾಪ್ ಸಹಿತ ಪ್ರತಿಭಾ ಪುರಸ್ಕಾರ
ಯಶಸ್ಸಿಗೆ ಇರುವ ಮೂರು ಸೂತ್ರಗಳೆಂದರೆ ಒಳ್ಳೆಯದನ್ನು ಸ್ವೀಕರಿಸುವ ಮನೋಭಾವ, ನಮ್ಮಲ್ಲಿನ ಸಾಮರ್ಥ್ಯ, ದೌರ್ಬಲ್ಯಗಳನ್ನು ಅರ್ಥ ಮಾಡಿಕೊಳ್ಳುವ ಬುದ್ಧಿವಂತಿಕೆ, ಗುರಿಯೆಡೆಗೆ ಕಾರ್ಯೋನ್ಮುಖವಾಗುವ ದೃಢ ಮನಸ್ಸು ಎಂದು ವಿದ್ಯಾವಾಹಿನಿ ಸಮೂಹ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಎನ್.ಬಿ.ಪ್ರದೀಪ್ ಕುಮಾರ್ ಹೇಳಿದರು.
ಅವರು ನಗರದ ಗುಬ್ಬಿ ವೀರಣ್ಣ ಕಲಾಕ್ಷೇತ್ರದಲ್ಲಿ ವಿದ್ಯಾನಿಧಿ ಕಾಲೇಜು ವತಿಯಿಂದ ನಡೆದ ‘ನಮ್ಮ ವಿದ್ಯಾರ್ಥಿ ನಮ್ಮ ಹೆಮ್ಮೆ’ ಕಾರ್ಯಕ್ರಮದಲ್ಲಿ ಪ್ರತಿಭಾವಂತ, ಸಾಧಕ ವಿದ್ಯಾರ್ಥಿಗಳನ್ನು ಪುರಸ್ಕರಿಸಿ ಮಾತನಾಡುತ್ತಿದ್ದರು.
ವಿದ್ಯಾನಿಧಿ ಕಾಲೇಜಿನ ಕುರಿತು ಪೋಷಕರು ಅಪಾರವಾದ ಅಭಿಮಾನವನ್ನು ಹೊಂದಿರುವುದು ನಮಗೆ ಸ್ಪೂರ್ತಿಯಾಗಿದೆ. ಪದವಿಪೂರ್ವ ಶಿಕ್ಷಣ ಹಂತದಲ್ಲಿ ಮಕ್ಕಳು ಏರಬೇಕಾದ ಎತ್ತರ ಹೆಚ್ಚಿನದ್ದೇ ಆಗಿದೆ. ಬೋಧನೆಯನ್ನು ಪ್ರೀತಿಸುವ ಉಪನ್ಯಾಸಕ ವೃಂದ, ಶ್ರದ್ಧೆಯಿಂದ ಕಲಿಯುವ ವಿದ್ಯಾರ್ಥಿಗಳು ನಮ್ಮೊಡನಿರುವುದು ಕಾಲೇಜನ್ನು ಔನ್ನತ್ಯಕ್ಕೇರಿಸಿದೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಸಂಖ್ಯೆಯ ಮಕ್ಕಳು ಈ ಪುರಸ್ಕಾರಕ್ಕೆ ಭಾಜನರಾಗಲಿ ಎಂದು ಅವರು ಹಾರೈಸಿದರು.
ಕೆ-ಸಿಇಟಿಯಲ್ಲಿ ರಾಜ್ಯಕ್ಕೆ ೮೩ನೇ ರ್ಯಾಂಕ್ ಪಡೆದ ವರುಣ್ ಗೌಡ, ನೀಟ್ ಪರೀಕ್ಷೆಯಲ್ಲಿ ೫೭೭ ಅಂಕಗಳನ್ನು ಗಳಿಸಿದ ಸುಜನ್ ಜೈನ್, ವಿಜ್ಞಾನ ವಿಭಾಗದಲ್ಲಿ ರಾಜ್ಯಕ್ಕೆ ಆರನೇ ರ್ಯಾಂಕ್ ಗಳಿಸಿದ ಸಂಜಯ್ ಜೆ., ವಾಣಿಜ್ಯ ವಿಭಾಗದಲ್ಲಿ ರಾಜ್ಯಕ್ಕೆ ಮೂರನೇ ರ್ಯಾಂಕ್ ಪಡೆದ ಚಿನ್ಮಯಿ, ಗೀತಾ ಇ., ಖುಷಿ ಕೊಂಡ ಅವರಿಗೆ ಲ್ಯಾಪ್ ಟಾಪ್ಗಳ ಸಹಿತ ಪ್ರತಿಭಾ ಪುರಸ್ಕಾರವನ್ನು ನೆರವೇರಿಸಲಾಯಿತು. ಪಿಯುಸಿ ಮತ್ತು ಇತರ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಅತ್ಯುನ್ನತ ಸಾಧನೆಯನ್ನು ತೋರಿದ ವಿದ್ಯಾರ್ಥಿಗಳನ್ನು ಮತ್ತು ಅವರ ಪೋಷಕರನ್ನು ಅಭಿನಂದಿಸಲಾಯಿತು.
ವಿದ್ಯಾರ್ಥಿಗಳ ಸಾಧನೆಯನ್ನು ಶ್ಲಾಘಿಸಿ ಮಾತನಾಡಿದ ಕಾಲೇಜಿನ ಪ್ರಾಂಶುಪಾಲ ಸಿದ್ಧೇಶ್ವರ ಸ್ವಾಮಿ ಎಸ್.ಆರ್. ಧನಾತ್ಮಕ ಚಿಂತನೆ ಮತ್ತು ಕಾರ್ಯಪ್ರವೃತ್ತಿಯಿಂದ ಈ ವಿದ್ಯಾರ್ಥಿಗಳು ಕಾಲೇಜಿನ ಹೆಮ್ಮೆಯನ್ನು ಹೆಚ್ಚಿಸಿದ್ದಾರೆ. ಮುಂಬರುವ ವರ್ಷಗಳಲ್ಲಿ ಉಪನ್ಯಾಸಕರ ಮತ್ತು ವಿದ್ಯಾರ್ಥಿಗಳ ಹೊಣೆಗಾರಿಕೆ ಇನ್ನಷ್ಟು ಹೆಚ್ಚಿದೆ. ಪ್ರತಿಯೊಬ್ಬ ವಿದ್ಯಾರ್ಥಿಯೂ ಮನಸ್ಸು ಮಾಡಿದರೆ ಹೆಚ್ಚಿನದನ್ನು ಸಾಧಿಸಲು ಸಾಧ್ಯ ಎಂದರು.
ವಿದ್ಯಾರ್ಥಿನಿ ವಿಭಾ ಪ್ರಾರ್ಥಿಸಿದರು. ಉಪನ್ಯಾಸಕಿ ಗಾಯತ್ರಿ ದಿಲೀಪ್ ಸ್ವಾಗತಿಸಿ ಉಪನ್ಯಾಸಕ ಸಂತೋಷ್ ವಂದಿಸಿದರು. ವಿ-ಟೆಕ್ನೋ ಸಂಯೋಜಕಿ ನಂದಿನಿ ಪ್ರತಿಭಾ ಪುರಸ್ಕೃತರನ್ನು ಪರಿಚಯಿಸಿದರು. ಆರತಿ ಪಟ್ರಮೆ ವಿದ್ಯಾರ್ಥಿಗಳಿಗೆ ಪ್ರತಿಜ್ಞಾ ವಿಧಿ ಬೋಧಿಸಿ ಕಾರ್ಯಕ್ರಮ ನಿರ್ವಹಿಸಿದರು.
ಬೋಧಕ ಮತ್ತು ಬೋಧಕೇತರ ಸಿಬ್ಬಂದಿವರ್ಗದವರು ಹಾಗೂ ಪ್ರಸ್ತುತ ದ್ವಿತೀಯ ಪಿಯುಸಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳು ಈ ಸಂಭ್ರಮಕ್ಕೆ ಸಾಕ್ಷಿಯಾದರು.