ಅಫಜಲಪೂರ: ಈ ಬಾರಿಯ ಲೋಕ ಸಭಾ ಚುನಾವಣೆಯಲ್ಲಿ ಕಲಬುರಗಿ ಲೋಕ ಸಭಾ ಕ್ಷೇತ್ರ ಅತ್ಯಂತ ಹೈ ವೋಲ್ಟೇಜ್ ಕ್ಷೇತ್ರಗಳಲ್ಲಿ ಒಂದಾಗಿತ್ತು, ರಾಷ್ಟ್ರಿಯ ಕಾಂಗ್ರೆಸ್ ಪಕ್ಷದ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅಳಿಯ ರಾಧ ಕೃಷ್ಣ ದೊಡ್ಡಮನಿ ಅಭ್ಯರ್ಥಿಯಾಗಿ ಸ್ಪರ್ಧಿಸಿ 28811 ಸಾವಿರ ಮತಗಳ ಅಂತರದಿಂದ ಭರ್ಜರಿ ಜಯಗಳಿಸಿದ್ದಾರೆ, ಜಿಲ್ಲೆಯಲ್ಲಿ ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಅತೀ ಹೆಚ್ಚು ಸದ್ದು ಮಾಡಲ್ಪಟ್ಟಿದ್ದು ಅಫಜಲಪುರ ವಿಧಾನಸಭಾ ಕ್ಷೇತ್ರ,ಏಕೆಂದರೆ ಲೋಕ ಸಭಾ ಚುನಾವಣೆಯು ಅಂತಿಮ ಹಂತಕ್ಕೆ ತಲುಪುವ ಘಟ್ಟದಲ್ಲಿ ಜಿಲ್ಲೆಯ ಬಿಜೆಪಿಯಲ್ಲಿನ ಅಸಮಾಧಾನದಿಂದ ಮತ್ತು ನಿತಿನ್ ಗುತ್ತೇದಾರ ಬಿಜೆಪಿಗೆ ಸೇರ್ಪಡೆಯಿಂದ ತೀವ್ರವಾಗಿ ಮುನಿಸಿಕೊಂಡು ಬಿಜೆಪಿಗೆ ಮಾಲೀಕಯ್ಯ ಗುತ್ತೇದಾರ ಗುಡ್ ಬೈ ಹೇಳಿ ಕಾಂಗ್ರೆಸ ಪಕ್ಷಕ್ಕೆ ಸೇರಿಕೊಂಡು ವಿರೋಧಿಗಳಿಗೆ ಮತ್ತು ಬಿಜೆಪಿಗೆ ದೊಡ್ಡ ಮಟ್ಟದಲ್ಲಿ ಶಾಕ್ ಕೊಟ್ಟಿದ್ದರು.ಮಾಲೀಕಯ್ಯ ಗುತ್ತೇದಾರ ಕಾಂಗ್ರೆಸ ಪಕ್ಷಕ್ಕೆ ಆಗಮನದಿಂದ ಎಲ್ಲರೂ ಈ ಬಾರಿ ಆಫ್ಜಲ್ಪುರ್ ಕ್ಷೇತ್ರದಿಂದ ಕಾಂಗ್ರೇಸ ಪಕ್ಷಕ್ಕೆ ಹೆಚ್ಚು ಮತಗಳ ಲೀಡ್ ನಿರೀಕ್ಷಿಸಿದ್ದರು, ಹಾಲಿ ಮಾಜಿಗಳ ದೋಸ್ತಿಯಿಂದ ನಿತೀನ್ ಗುತ್ತೇದಾರಗೆ ಬಹು ದೊಡ್ಡ ಹಿನ್ನಡೆಯಾಗುತ್ತದೆ ಎಂದು ಅನೇಕರು ಕೂಡ ಭಾವಿಸಿದರು, ಆದರೆ ಕೊನೆಗಳಿಗೆಯಲ್ಲಿ ಆಗಿದ್ದೆ ಬೇರೆ,ತಾಲೂಕಿನ ಜನತೆ ಸರಿ ಸುಮಾರು 20 ಸಾವಿರ ಮತಗಳಿಂದ ಬಿಜೆಪಿಗೆ ಲೀಡ್ ಕೊಟ್ಟು ಕಾಂಗ್ರೇಸ್ ಗೆ ದೊಡ್ಡ ಮಟ್ಟದಲ್ಲಿ ಶಾಕ್ ಕೊಟ್ಟರು. ಇದರಿಂದ ನಿತೀನ್ ಗುತ್ತೇದಾರ ಹಣೆದ ಬಲೆಗೆ ಇಬ್ಬರು ಘಟಾನು ಘಟಿ ನಾಯಕರು ಮಖಾಡೇ ಮಲಗಿದ್ದು ಕಾಂಗ್ರೆಸ್ ಪಾಳೆಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದ್ದಂತು ಸತ್ಯ. ಕಳೆದ ಲೋಕ ಸಭಾ ಚುನಾವಣೆಯಲ್ಲಿಯೂ ಕೂಡ ಬಿಜೆಪಿ ಪಕ್ಷಕ್ಕೆ ಅಫಜಲಪುರ ಮತ ಕ್ಷೇತ್ರ 36 ಸಾವಿರ ಮತಗಳ ಲೀಡ್ ಕೊಟ್ಟಿತ್ತು, ಈ ಬಾರಿ ಕಾಂಗ್ರೆಸ್ 36 ಸಾವಿರ ಮತಗಳ ಲೀಡ್ ಪಟ್ಟಿಯನ್ನು ಶತಾಯಗತವಾಗಿ ಅಳಿಸಿ ಹಾಕುವ ಎಲ್ಲ ಪ್ರಯತ್ನ ಮಾಡಿತ್ತು, ಜಿಲ್ಲೆಯಲ್ಲಿನ ತಾಲೂಕುಗಳಲ್ಲಿ ಅಫಜಲಪುರ ಕ್ಷೇತದಲ್ಲೆ ಅತೀ ಹೆಚ್ಚು ಚುನಾವಣಾ ಪ್ರಚಾರ ಸಭೆಗಳನ್ನು ಮಾಡಿತ್ತು, ಆದರು ಕೂಡ ಇದ್ಯಾವದಕ್ಕೂ ಮನ್ನಣೆ ನೀಡದ ತಾಲೂಕಿನ ಜನತೇ ಮತ್ತೆ ಬಿಜೆಪಿ ಪಕ್ಷಕ್ಕೆ 20 ಸಾವಿರ ಮತಗಳ ಲೀಡ್ ಕೊಟ್ಟು ಲೋಕ ಅಖಾಡದಲ್ಲಿ ಅಫಜಲಪುರ ಕ್ಷೇತ್ರ ಬಿಜೆಪಿಯ ಭದ್ರ ಕೋಟೆ ಎಂದು ಸಾಭಿತು ಪಡಿಸಿದರು.ಕಲಬುರ್ಗಿ ಲೋಕ ಸಭಾ ಅಖಾಡದಲ್ಲಿ ಕಾಂಗ್ರೇಸ ಪಕ್ಷ ಗೆದ್ದರು ಕೂಡ ಆಫ್ಜಲ್ಪುರದಲ್ಲಿ ನಿತೀನ್ ಗುತ್ತೇದಾರ ಎಂಬ ಯುವ ಸಾರಥಿಯನ್ನು ಕಟ್ಟಿ ಹಾಕುವಲ್ಲಿ ಹಾಲಿ ಹಾಗೂ ಮಾಜಿ ಶಾಸಕರು ವಿಫಲವಾಗಿದ್ದಾರೆ.20 ಸಾವಿರ ಮತಗಳ ಬಿಜೆಪಿ ಲೀಡ್ ಹಾಲಿ ಹಾಗೂ ಮಾಜಿ ಶಾಸಕರಿಗೆ ತೀವ್ರ ಮುಖಭಂಗವಾಗುವಂತೆ ಮಾಡಿದ್ದೂ ಕಾಂಗ್ರೆಸ ಪಾಳಯಕ್ಕೆ ಅರಗಿಸಿಕೊಳ್ಳದ ನುಂಗಲಾರದ ತುತ್ತಾಗಿದಂತೂ ಸತ್ಯ ಎನ್ನಲಾಗಿದೆ. ತಾಲೂಕಿನಲ್ಲಿ ಲೋಕಸಭಾ ಚುನಾವಣೆಲ್ಲಿ ದೊರೆತ ಮುನ್ನಡೆ ಮುಂಬರುವ ದಿನಗಳಲ್ಲಿ ನಿತೀನ್ ಗುತ್ತೇದಾರ ಎಂಬ ಯುವ ಸಾರಥಿಯ ರಾಜಕೀಯ ಭವಿಷ್ಯಕ್ಕೆ ಭದ್ರ ಬುನಾಧಿಯಾಗಿದೆ ಎಂದು ಹೇಳಲಾಗಿದ್ದು ವಿಪರ್ಯಾಸ ಎಂಬಂತೆ ತಾಲೂಕಿನ ಜನತೆ ಲೋಕ ಸಭಾ ಚುನಾವಣೆಯಲ್ಲಿ ಬಿಜೆಪಿಗೆ ಲೀಡ್ ಕೊಟ್ಟು ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸಗೆ ಜೈ ಎನ್ನುವರಾ ಅಥವಾ ಬಿಜೆಪಿಗೆ ಜೈ ಎನ್ನುವರಾ ಎಂಬುದು ಕೂಡ ಯಕ್ಷ ಪ್ರಶ್ನೆಯಾಗಿದೆ.ಏಕೆಂದರೆ ಕಳೆದ ಚುನಾವಣೆಯಲ್ಲಿ ಇದೆ ಮಾದರಿಯ ಫಲಿತಾಂಶ ತಾಲೂಕಿನಲ್ಲಿ ಬಂದಿದ್ದು ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೇಸಗೆ ಜೈ ಎಂದು ಲೋಕ ಅಖಾಡದಲ್ಲಿ ಬಿಜೆಪಿಗೆ ಲೀಡ್ ಕೊಟ್ಟಿದ್ದು ಮತದಾರ ಪ್ರಭುಗಳು ರಾಜಕೀಯ ನಾಯಕರನ್ನು ಚಿಂತೆಗಿಡಾಗುವಂತೆ ಮಾಡಿದ್ದಾರೆ.ಒಟ್ಟಾರೆಯಾಗಿ ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಅಫಜಲಪುರ ತಾಲೂಕಿನಲ್ಲಿ ಸಹೋದರರ ಸವಾಲಿನಲ್ಲಿ ನಿತೀನ್ ಗುತ್ತೇದಾರ ಎಂಬ ಯುವ ಸಾರಥಿಯು ಮೇಲುಗೈ ಸಾಧಿಸಿದ್ದು ತಾಲೂಕು ಬಿಜೆಪಿಗೆ ಮತ್ತು ಕಾರ್ಯಕರ್ತರಿಗೆ ಹುಮ್ಮಸ್ಸು ಮತ್ತಿಷ್ಟು ಇಮ್ಮಡಿಯಾಗಿದೆ ಎಂದು ಹೇಳಲಾಗಿದೆ.