ತುಮಕೂರು: ನಗರದ ಸಿದ್ಧಾರ್ಥ ದಂತ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಆಸ್ಪತ್ರೆಯ ಮಕ್ಕಳ ದಂತ ಚಿಕಿತ್ಸಾ ವಿಭಾಗದಿಂದ ವತಿಯಿಂದ ನಗರದ ಹೆಗ್ಗೆರೆಯಲ್ಲಿರುವ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯಲ್ಲಿ ‘ರಾಷ್ಟ್ರೀಯ ಹೆಣ್ಣು ಮಕ್ಕಳ ದಿನಾಚರಣೆ’ಯನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು.
ಶಾಲೆಯ ಆವರಣದಲ್ಲಿ ಏರ್ಪಡಿಸಲಾಗಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಶ್ರೀ ಸಿದ್ಧಾರ್ಥ ದಂತ ಮಹಾವಿದ್ಯಾಲಯದ ಮಕ್ಕಳ ದಂತ ರಕ್ಷಣಾ ವಿಭಾಗದ ಪ್ರಾಧ್ಯಾಪಕರು ಮತ್ತು ಮುಖ್ಯಸ್ಥರಾದ ಡಾ ಜ್ಯೋತ್ಸ್ನಾ ವಿ. ಶೆಟ್ಟಿ ಅವರು ಮಗುವಿನ ಹಲ್ಲುಗಳಿದ್ದರೂ ಸಹ ಬಾಯಿಯ ಆರೋಗ್ಯವು ಮುಖ್ಯವಾಗಿದೆ. ಮಕ್ಕಳ ಹಲ್ಲುಗಳು ಕಚ್ಚಲು ಮತ್ತು ಅಗಿಯಲು ಸಹಾಯ ಮಾಡುತ್ತದೆ. ಜೊತೆಗೆ ಮೌಖಿಕ ಸಂವಹನ ಮತ್ತು ಭಾಷೆಯ ಬೆಳವಣಿಗೆಯಲ್ಲಿ ಪ್ರಮುಖ ಪಾತ್ರ ವಹಿಸುವುದರಿಂದ ಬಾಯಿಯ ಆರೋಗ್ಯವನ್ನು ಕಾಪಾಡಿಕೊಂಡು ಹೋಗಲು ಶಾಲೆಯ ಮಕ್ಕಳಲ್ಲಿ ಮನವಿ ಮಾಡಿದರು.
ಬಾಯಿ, ಹಲ್ಲುಗಳು ಮತ್ತು ಮುಖದ ರಚನೆಯಲ್ಲಿ ದಂತ ಪ್ರಧಾನವಾಗಿದೆ. ತಿನ್ನುವುದು, ಉಸಿರಾಟ ಮತ್ತು ಮಾತನಾಡುವಂತಹ ಅಗತ್ಯ ಕಾರ್ಯಗಳನ್ನು ನಿರ್ವಹಿಸಲು ಅನುವು ಮಾಡಿಕೊಡುತ್ತದೆ. ಆದರೆ ಕಳಪೆ ಬಾಯಿಯ ಆರೋಗ್ಯವು, ಮಧುಮೇಹ ಮತ್ತು ಹೃದ್ರೋಗದಂತಹ ಇತರ ದೀರ್ಘಕಾಲದ ಕಾಯಿಲೆಗಳ ಆಪತ್ತು ತಂದೊಡ್ಡುವ ಸಾಧ್ಯತೆಗಳಿರುತ್ತವೆ. ತಂಬಾಕು ಬಳಕೆ ಮತ್ತು ಸಕ್ಕರೆ ಆಹಾರ ಮತ್ತು ರಾಸಾಯನಿಕಯುಕ್ತ ಪಾನೀಯಗಳ ಸೇವನೆಯಂತಹ ಅಪಾಯಕಾರಿ ನಡವಳಿಕೆಗಳೊಂದಿಗೆ ದಂತ ರೋಗವು ಭಾದಿಸುವ ಸಾಧ್ಯತೆಗಳಿರುವುದರಿಂದ ಮಕ್ಕಳ ಇದರ ಬಗ್ಗೆ ಎಚ್ಚರಿಕೆ ವಹಿಸಬೇಕಿದೆ ಎಂದು ದಂತ ವೈದ್ಯರುಗಳು ಈ ಸಂದರ್ಭದಲ್ಲಿ ಎಚ್ಚರಿಸಿದರು.
ಶಾಲಾ ಮಕ್ಕಳಿಗೆ ಸ್ಥಳದಲ್ಲಿಯೆ ಚಿತ್ರಬಿಡಿಸುವುದು, ಪ್ಯಾನ್ಸಿ ಡ್ರೆಸ್, ಸಾಂಸ್ಕೃತಿಕ ಕಾರ್ಯಕ್ರಮಗಳ ಮೂಲಕ ಮಕ್ಕಳಲ್ಲಿ ದಂತ ರಕ್ಷಣೆಯ ಬಗ್ಗೆ ಅರಿವು ಮೂಡಿಸಲಾಯಿತು. 100ಕ್ಕೂ ಹೆಚ್ಚು ಶಾಲಾ ಮಕ್ಕಳು ಕಾರ್ಯಕ್ರಮದಲ್ಲಿ ಭಾಗವಹಿಸಿ, ದಂತ ವೈದ್ಯರೊಂದಿಗೆ ಬೆರತರು. ಮಕ್ಕಳಿಗೆ ಪ್ರಮಾಣಪತ್ರ ವಿತರಿಸಲಾಯಿತು.
ಹೆಗ್ಗೆರೆಯ ಶಾಲಾ ಮುಖ್ಯಸ್ಥರಾದ ಎಂ.ಜಿ.ಶೈಲಜಾ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಮಕ್ಕಳ ದಂತ ರಕ್ಷಣಾ ವಿಭಾಗದ ಪ್ರಾಧ್ಯಾಪಕರು ಮತ್ತು ಮುಖ್ಯಸ್ಥರಾದ ಡಾ ಜ್ಯೋತ್ಸ್ನಾ ವಿ.ಸೆಟ್ಟಿ ಅವರ ಮೆಲ್ವಿಚಾರಣೆಯಲ್ಲಿ ನಡೆದ ಈ ದಂತ ರಕ್ಷಣೆ ಜಾಗೃತಿ ಕಾರ್ಯಕ್ರಮದಲ್ಲಿ ಸಿದ್ಧಾರ್ಥ ದಂತ ಕಾಲೇಜು ಮತ್ತು ಆಸ್ಪತ್ರೆಯ ವೈದ್ಯಾರಾದ ಡಾ.ವೀಣಾ, ಡಾ.ಕೆ.ಅಂಬಿಕಾ, ಮಹೇಶ್ ಕುಮಾರ್, ದಂತ ವೈದ್ಯಕೀಯ ವಿದ್ಯಾರ್ಥಿಗಳು ಮತ್ತು ಸಿಬ್ಬಂದಿ ವರ್ಗ ಪಾಲ್ಗೊಂಡಿತ್ತು.