ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ನೇತೃತ್ವದ ಕೇಂದ್ರ ಸರ್ಕಾರ ಜಾರಿಗೊಳಿಸಿರುವ ವಿವಿಧ ಸವಲತ್ತು ಹಾಗೂ ಯೋಜನೆಗಳನ್ನು ಅರ್ಹ ಜನರಿಗೆ ತಲುಪಿಸಲು ಜನಪ್ರತಿನಿಧಿಗಳು ಜವಾಬ್ದಾರಿ ವಹಿಸಬೇಕು. ಮೋದಿಯವರು ಜನಪರವಾದ ೧೯೭ಕ್ಕೂ ಹೆಚ್ಚು ವಿಶಿಷ್ಟ ಕಾರ್ಯಕ್ರಮಗಳನ್ನು ಜಾರಿಗೆ ತಂದಿದ್ದಾರೆ ಸಂಪೂರ್ಣ ಕಾರ್ಯಕ್ರಮಗಳ ಸಮರ್ಪಕ ಅನುಷ್ಠಾನ ಆಗಬೇಕು ಎಂದು ಸಂಸದ ಜಿ.ಎಸ್.ಬಸವರಾಜು ಹೇಳಿದರು.
ಶುಕ್ರವಾರ ನಗರದ ಸ್ನೇಹ ಸಂಗಮ ಸಭಾಂಗಣದಲ್ಲಿ ಬಿಜೆಪಿಯಿಂದ ಹಮ್ಮಿಕೊಂಡಿದ್ದ ಬೆಂಗಳೂರು ನಗರ ಹಾಗೂ ಗ್ರಾಮಾಂತರ, ದಾವಣಗೆರೆ ಮತ್ತು ಮೈಸೂರು ವಿಭಾಗದ ನಗರಸಭಾ ಸದಸ್ಯರ ಪ್ರಶಿಕ್ಷಣ ವರ್ಗ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಸಂಸದರು, ಜನಪ್ರತಿನಿಧಿಗಳು ಜನರೊಂದಿಗೆ ಬೆರೆಯಬೇಕು, ಅವರ ಸಮಸ್ಯೆಗಳನ್ನು ತಿಳಿದು ಸರ್ಕಾರದ ಗಮನಕ್ಕೆ ತಂದು ಬಗೆಹರಿಸುವ ಮೂಲಕ ಜನರ ಪ್ರೀತಿಗಳಿಸಿ, ಉತ್ತಮ ನಾಯಕರಾಗಿ ಬೆಳೆಯಲು ಅವಕಾಶವಿದೆ ಎಂದರು.
ನಗರ ಸಭೆಯಂತಹ ಸ್ಥಳೀಯ ಸಂಸ್ಥೆಗಳ ಪ್ರತಿನಿಧಿಗಳು ನಿತ್ಯ ಜನರ ಸಂಪರ್ಕದಲ್ಲಿರುತ್ತಾರೆ, ಜನರ ಸಮಸ್ಯೆಗಳ ನೇರ ಅರಿವಿರುತ್ತದೆ. ಅವರ ತೊಂದರೆ ನಿವಾರಣೆಗೆ ಸ್ಪಂದಿಸಿ ಕೆಲಸ ಮಾಡಬೇಕು. ಸಾಮಾಜಿಕ ಸಮಸ್ಯೆಗಳ ನಿವಾರಣೆಗೆ ಆದ್ಯತೆ ನೀಡಬೇಕು. ಕೇಂದ್ರ ಸರ್ಕಾರದ ಯೋಜನೆಗಳನ್ನು ಜನರಿಗೆ ತಲುಪಿಸುವ ಜೊತೆಗೆ ಸಾಮಾಜಿಕ ಸಮಸ್ಯೆಗಳನ್ನು ತೊಡೆದುಹಾಕಲು ಕಾಳಜಿ ವಹಿಸಬೇಕು. ಸ್ವಾತಂತ್ರö್ಯ ಬಂದು ಇಷ್ಟು ವರ್ಷವಾದರೂ ನಮ್ಮಲ್ಲಿ ಸ್ವಚ್ಛತೆಯ ಬಗ್ಗೆ ಅರಿವು ಸಾಲದು. ನಮ್ಮ ಪರಿಸರವನ್ನು ಸ್ವಚ್ಛವಾಗಿಟ್ಟುಕೊಳ್ಳಬೇಕು ಎಂಬ ಬಗ್ಗೆ ಜನಪ್ರತಿನಿಧಿಗಳು ಜನರಿಗೆ ಮನವರಿಕೆ ಮಾಡಬೇಕು. ನಮ್ಮ ಆತ್ಮಕ್ಕೆ ಒಪ್ಪಿಗೆಯಾಗುವ ರೀತಿಯಲ್ಲಿ ಕೆಲಸ ಮಾಡಬೇಕು ಎಂದು ಜಿ.ಎಸ್.ಬಸವರಾಜು ಸಲಹೆ ಮಾಡಿದರು.