ತುಮಕೂರು:ತುಮಕೂರು ಗ್ರಾಮಾಂತರ ಕ್ಷೇತ್ರದಲ್ಲಿ ವೀರಶೈವ-ಲಿಂಗಾಯಿತ ಸಮುದಾಯದ ಕ್ಷೇತ್ರದ ಸಮಗ್ರ ಅಭಿವೃದ್ದಿಗಾಗಿ ಬಿ.ಸುರೇಶಗೌಡರನ್ನು ಬೆಂಬಲಿಸುವಂತೆ ಸಂಸದ ಜಿ.ಎಸ್.ಬಸವರಾಜು ಮನವಿ ಮಾಡಿದ್ದಾರೆ.
ಗ್ರಾಮಾಂತರ ಬಿಜೆಪಿ ಕಚೇರಿ ಶಕ್ತಿಸೌಧದಲ್ಲಿ ಆಯೋಜಿಸಿದ್ದ ವೀರಶೈವ-ಲಿಂಗಾಯಿತ ಮುಖಂಡರ ಸಮಾವೇಶದಲ್ಲಿ ಭಾಗವಹಿಸಿ ಮಾತನಾಡುತಿದ್ದ ಅವರು,ಕಳೆದ ಚುನಾವಣೆಯಲ್ಲಿ ಕೆಲವರು ಮಾಡಿದ ಅಪಪ್ರಚಾರದಿಂದಾಗಿ ವೀರಶೈವ ಸಮಾಜ ಸುರೇಶಗೌಡ ಅವರನ್ನು ಕೈಬಿಟ್ಟ ಪರಿಣಾಮ ಸಾವಿರ ಮತಗಳ ಅಂತರದಿಂದ ಸೋಲು ಅನುಭವಿಸಬೇಕಾಯಿತು. ಈ ಬಾರಿ ಹಾಗಾಗದಂತೆ ಎಚ್ಚರಿಕೆ ವಹಿಸಬೇಕೆಂದರು.
ಶಾಸಕ ಬಿ.ಸುರೇಶಗೌಡ ಅವರು ತಮ್ಮ 10 ವರ್ಷಗಳ ಅವಧಿಯಲ್ಲಿ ಹಲವಾರು ಯೋಜನೆಗಳನ್ನು ತಂದು ಕೆಲಸ ಮಾಡಿದ್ದಾರೆ. ಜಾತ್ಯಾತೀತವಾಗಿ ಕೆಲಸ ಮಾಡಿ,ಪೈಲೆಟ್ ಪ್ರಾಜೆಕ್ಟ್ ಮೂಲಕ ಪ್ರತಿ ರೈತರ ಪಂಪ್ಸೆಟ್ಗೆ ಪ್ರತ್ಯೇಕ ಟಿ.ಸಿ., ಮನೆ ಮನೆಗೆ ಕುಡಿಯುವ ನೀರು,ರಸ್ತೆ,ಚರಂಡಿ ಕಾಮಗಾರಿ ಕೈಗೊಂಡು ಕ್ಷೇತ್ರವನ್ನು ಮಾದರಿಯಾಗಿ ಅಭಿವೃದ್ದಿ ಪಡಿಸಿದ್ದಾರೆ. ಹಾಗಾಗಿ ಅವರನ್ನು ವೀರಶೈವ-ಲಿಂಗಾಯಿತ ಸಮಾಜ ಈ ಬಾರಿ ಕೈ ಹಿಡಿದರೆ,ಶಾಸಕರಾಗಿ,ಮಂತ್ರಿಯೂ ಆಗುವ ಅವಕಾಶ ವಿದೆ ಎಂದು ಜಿ.ಎಸ್.ಬಸವರಾಜು ನುಡಿದರು.
ರವಿಶಂಕರ್ ಹೆಬ್ಬಾಕ ಮಾತನಾಡಿ,ಬಿಜೆಪಿ ಪಕ್ಷ ರಾಜ್ಯದಲ್ಲಿ,ರಾಷ್ಟ್ರದಲ್ಲಿ ಲಿಂಗಾಯಿತ,ವೀರಶೈವ ಸಮುದಾಯಕ್ಕೆ ಅತ್ಯಂತ ಜವಾಬ್ದಾರಿಯುತ ಸ್ಥಾನಗಳನ್ನು ನೀಡಿ,ರಾಜಕೀಯವಾಗಿ ಬೆಳೆಯಲು ಸಹಕಾರಿಯಾಗಿದೆ.ಬಿ.ಎಸ್.ಯಡಿಯೂರಪ್ಪ, ಜಗದೀಶ್ ಶೆಟ್ಟರ್,ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿಯಾದರೆ,ಹಲವರಿಗೆ ಕ್ಯಾಬಿನೇಟ್ ದರ್ಜೆ ಸಚಿವ ಸ್ಥಾನ ನೀಡಿದ್ದಲ್ಲದೆ, ಪಕ್ಷದಲ್ಲಿಯೂ ಪ್ರಮುಖ ಸ್ಥಾನ ನೀಡಿದೆ.ರಾಜ್ಯದಲ್ಲಿ ಬಿಜೆಪಿ ಎಂದರೆ ವೀರಶೈವ-ಲಿಂಗಾಯಿತರು ಎಂಬಂತಾಗಿದೆ. ಸುರೇಶಗೌಡರು ಗ್ರಾಮಾಂತರದಲ್ಲಿ ಜಿಲ್ಲಾ ಪಂಚಾಯಿತಿ, ತಾಲೂಕು ಪಂಚಾಯಿತಿ ಹಾಗೂ ಗ್ರಾಮಪಂಚಾಯಿತಿಗಳಲ್ಲಿ ನಮ್ಮ ಸಮುದಾಯದ ವ್ಯಕ್ತಿಗಳಿಗೆ ರಾಜಕೀಯ ಪ್ರಾತಿನಿಧ್ಯ ಒದಗಿಸಿದ್ದಾರೆ.ಹಾಗಾಗಿ ನಾವೆಲ್ಲರೂ ಗ್ರಾಮಾಂತರದಲ್ಲಿ ಸುರೇಶಗೌಡ ರನ್ನು ಬೆಂಬಲಿಸಬೇಕಿದೆ ಎಂದರು.
ಗ್ರಾಮಾಂತರ ಬಿಜೆಪಿ ಅಭ್ಯರ್ಥಿ ಬಿ.ಸುರೇಶಗೌಡ ಮಾತನಾಡಿ,ವಿದ್ಯಾರ್ಥಿ ದಿಸೆಯಿಂದಲೂ ನನಗೆ ರಾಜಕೀಯ ಶಕ್ತಿ ನೀಡಿದವರು ಬಿ.ಎಸ್.ಯಡಿಯೂರಪ್ಪನವರು. ಅವರಿಗೆ ನನ್ನ ತಂದೆಗಿಂತಲೂ ಹೆಚ್ಚಿನ ಸ್ಥಾನವನ್ನು ನೀಡಿದ್ದೇನೆ.ನಾನು ಶಾಸಕನಾಗಿದ್ದ ಕಾಲದಲ್ಲಿ ಸುಮಾರು ೧೫ ಬಾರಿ ಕ್ಷೇತ್ರಕ್ಕೆ ಬಂದ ಯಡಿಯೂರಪ್ಪ,ನನ್ನ ಪ್ರತಿ ಕಾರ್ಯಕ್ರಮಗಳಿಗೆ ಬೆಂಬಲವಾಗಿ ನಿಂತಿದ್ದಾರೆ.ಇದರ ಭಾಗವಾಗಿಯೇ ಹಲವಾರು ವರ್ಷಗಳಿಂದ ಆಗದ ಹೆಬ್ಬೂರು,ಗೂಳೂರು ಏತ ನೀರಾವರಿ ಯೋಜನೆ ಒಂದು ವರ್ಷದಲ್ಲಿಯೇ ಆಗಲು ಸಾಧ್ಯವಾಯಿತು.ನನ್ನ ಮೇಲೆ ನಂಬಿಕೆ ಇಟ್ಟು ನೀಡಿದ ಪೈಲೆಟ್ ಪ್ರಾಜೆಕ್ಟನ್ನು ಸಮರ್ಥವಾಗಿ ನಿಭಾಯಿಸಿ ಸುಮಾರು 25 ಸಾವಿರ ಟಿ.ಸಿ.ಗಳನ್ನು ರೈತರಿಗೆ ನೀಡಿದ್ದೇನೆ.ಜಲಜೀವನ್ ಮೀಷನ್ ಆರಂಭವಾಗುವ ಹತ್ತು ವರ್ಷ ಮೊದಲೇ ಮನೆ ಮನೆಗೆ ನೀರು ನೀಡಿದ್ದೇನೆ.ಕೆಲವರ ಅಪಪ್ರಚಾರದಿಂದ ಕಳೆದ ಚುನಾವಣೆಯಲ್ಲಿ ವೀರಶೈವ ಸಮಾಜದ ಕೆಲವರು ನನ್ನಿಂದ ದೂರ ಸರಿದ ಪರಿಣಾಮ ಸೋಲು ಕಾಣಬೇಕಾಯಿತು ಎಂದರು.