ಮಸ್ಕಲ್ ಗ್ರಾ.ಪಂ. ಅಧ್ಯಕ್ಷರಾಗಿ ಸುನಂದಮ್ಮ ಆಯ್ಕೆ
ತುಮಕೂರು- ತಾಲ್ಲೂಕಿನ ಮಸ್ಕಲ್ ಗ್ರಾಮ ಪಂಚಾಯ್ತಿಗೆ ೨ನೇ ಅವಧಿಗೆ ನಡೆದ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಚುನಾವಣೆಯಲ್ಲಿ ನೂತನ ಅಧ್ಯಕ್ಷರಾಗಿ ಸುನಂದಮ್ಮ ಹಾಗೂ ಉಪಾಧ್ಯಕ್ಷರಾಗಿ ರಾಜು ಆಯ್ಕೆಯಾಗಿದ್ದಾರೆ.
೨ನೇ ಅವಧಿಗೆ ನಡೆದ ಅಧ್ಯಕ್ಷ-ಉಪಾಧ್ಯಕ್ಷರ ಚುನಾವಣೆಯಲ್ಲಿ ಬಿಜೆಪಿ ಬೆಂಬಲಿತ ಸದಸ್ಯರುಗಳು ಅಧ್ಯಕ್ಷ – ಉಪಾಧ್ಯಕ್ಷರಾಗಿ ಆಯ್ಕೆಯಾಗುವ ಮೂಲಕ ಮಸ್ಕಲ್ ಗ್ರಾಮ ಪಂಚಾಯ್ತಿ ಆಡಳಿತ ಬಿಜೆಪಿ ಪಾಲಾಗಿದೆ.
ಒಟ್ಟು ೧೫ ಸದಸ್ಯರ ಬಲ ಹೊಂದಿರುವ ಮಸ್ಕಲ್ ಗ್ರಾಮ ಪಂಚಾಯ್ತಿಯಲ್ಲಿ ೯ ಮಂದಿ ಬಿಜೆಪಿ ಹಾಗೂ ೬ ಮಂದಿ ಜೆಡಿಎಸ್ ಸದಸ್ಯರಿದ್ದು, ಅಧ್ಯಕ್ಷ ಸ್ಥಾನಕ್ಕೆ ಬಿಜೆಪಿಯಿಂದ ಸುನಂದಮ್ಮ, ಜೆಡಿಎಸ್ನಿಂದ ಪುಷ್ಪ, ಉಮಾದೇವಿ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಬಿಜೆಪಿಯಿಂದ ಕುರುಗುಂದ ರಾಜು, ಜೆಡಿಎಸ್ನಿಂದ ಸೂರಪ್ಪ ಅವರು ನಾಮಪತ್ರ ಸಲ್ಲಿಸಿದ್ದರು.
ಅಧ್ಯಕ್ಷ ಸ್ಥಾನಕ್ಕೆ ನಾಮಪತ್ರ ಸಲ್ಲಿಸಿದ್ದ ಜೆಡಿಎಸ್ನ ಇಬ್ಬರು ಸದಸ್ಯರು ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ನಾಮಪತ್ರ ಹಾಕಿದ್ದ ಜೆಡಿಎಸ್ನ ಓರ್ವ ಸದಸ್ಯ ಮಧ್ಯಾಹ್ನ ೧ ಗಂಟೆಯಾದರೂ ನಾಮಪತ್ರ ವಾಪಸ್ ಪಡೆಯಲು ಸಹ ಗ್ರಾಮ ಪಂಚಾಯ್ತಿ ಕಚೇರಿ ಆಗಮಿಸದ ಕಾರಣ ಚುನಾವಣಾಧಿಕಾರಿ ಶ್ರೀನಿವಾಸ್ ಅವರು ಚುನಾವಣಾ ಪ್ರಕ್ರಿಯೆ ಆರಂಭಿಸಿದರು.
ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದ ಬಿಜೆಪಿ ಬೆಂಬಲಿತ ಸುನಂದಮ್ಮ ಅವರು ೯ ಮತ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದ ಕುರುಗುಂದ ರಾಜು ಅವರು ೯ ಮತ ಪಡೆದರು. ಜೆಡಿಎಸ್ ಬೆಂಬಲಿತ ಸದಸ್ಯರುಗಳು ಯಾರೂ ಸಹ ಚುನಾವಣಾ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳದೆ ಗೈರು ಹಾಜರಾದ ಹಿನ್ನೆಲೆಯಲ್ಲಿ ಅಧ್ಯಕ್ಷರಾಗಿ ಸುನಂದಮ್ಮ ಹಾಗೂ ಉಪಾಧ್ಯಕ್ಷರಾಗಿ ಕುರುಗುಂದ ರಾಜು ಅವರು ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿ ಘೋಷಿಸಿದರು.
ನಂತರ ಮಾತನಾಡಿದ ನೂತನ ಅಧ್ಯಕ್ಷೆ ಸುನಂದಮ್ಮ ಅವರು, ಮಸ್ಕಲ್ ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ಕುಡಿಯುವ ನೀರು, ರಸ್ತೆ, ಚರಂಡಿ ಸೇರಿದಂತೆ ಮೂಲಭೂತ ಸೌಕರ್ಯ ಕಲ್ಪಿಸಲು ಒತ್ತು ನೀಡಲಾಗುವುದು. ಎಲ್ಲ ಸದಸ್ಯರುಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ಅಭಿವೃದ್ಧಿ ವಿಚಾರದಲ್ಲಿ ಅವರ ಸಲಹೆ, ಸಹಕಾರ ಪಡೆದು ಕಾರ್ಯನಿರ್ವಹಿಸುವುದಾಗಿ ತಿಳಿಸಿದರು.
ನಾನು ಅಧ್ಯಕ್ಷರಾಗಿ ಆಯ್ಕೆಯಾಗಲು ಸಹಕರಿಸಿದ ಶಾಸಕ ಸುರೇಶ್ಗೌಡರು, ಮುಖಂಡರಾದ ಸಿದ್ದೇಗೌಡ ಹಾಗೂ ಪಂಚಾಯ್ತಿಯ ಎಲ್ಲ ಸದಸ್ಯರುಗಳಿಗೆ ಕೃತಜ್ಞತೆ ಸಲ್ಲಿಸುವುದಾಗಿ ಅವರು ಹೇಳಿದರು.
ನೂತನ ಉಪಾಧ್ಯಕ್ಷ ರಾಜು ಮಾತನಾಡಿ, ನನ್ನ ಅಧಿಕಾರಾವಧಿಯಲ್ಲಿ ಪಂಚಾಯ್ತಿ ವ್ಯಾಪ್ತಿಯಲ್ಲಿ ಯಾವುದೇ ರೀತಿಯಲ್ಲೂ ಅಭಿವೃದ್ಧಿ ಕಾರ್ಯಗಳಿಗೆ ತೊಡಕಾಗದಂತೆ ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಕೆಲಸ ಮಾಡುತ್ತೇನೆ ಎಂದರು.
ಇದೇ ಸಂದರ್ಭದಲ್ಲಿ ನೂತನ ಅಧ್ಯಕ್ಷೆ ಸುನಂದಮ್ಮ ಹಾಗೂ ಉಪಾಧ್ಯಕ್ಷ ರಾಜು ಅವರನ್ನು ಸದಸ್ಯರುಗಳು, ಪಂಚಾಯ್ತಿ ಸಿಬ್ಬಂದಿ ಅಭಿನಂದಿಸಿದರು.
ಈ ಸಂದರ್ಭದಲ್ಲಿ ಬಿಜೆಪಿ ಮುಖಂಡ ಸಿದ್ದೇಗೌಡ ಹಾಗೂ ಗ್ರಾ.ಪಂ. ಸದಸ್ಯರುಗಳು ಭಾಗವಹಿಸಿದ್ದರು.
ಮಸ್ಕಲ್ ಗ್ರಾ.ಪಂ. ಅಧ್ಯಕ್ಷರಾಗಿ ಸುನಂದಮ್ಮ ಆಯ್ಕೆ
Leave a comment
Leave a comment