ತುಮಕೂರು: ಕನ್ನಡ ಸಾಹಿತ್ಯ ಲೋಕದಲ್ಲಿ ಎಲ್. ಎಸ್. ಶೇಷಗಿರಿ ರಾವ್ ಅವರಷ್ಟು ಸಾಹಿತ್ಯ ಯೋಜನೆಗಳನ್ನು ಯಶಸ್ವಿಯಾಗಿ ಜಾರಿಗೊಳಿಸಿದವರು ವಿರಳ ಎಂದು ಆದಿಚುಂಚನಗಿರಿ ವಿಶ್ವವಿದ್ಯಾನಿಲಯದ ಸಹಾಯಕ ಪ್ರಾಧ್ಯಾಪಕ ಡಾ. ಟಿ. ಎನ್. ವಾಸುದೇವಮೂರ್ತಿ ಅಭಿಪ್ರಾಯ ವ್ಯಕ್ತಪಡಿಸಿದರು.
ವಿಶ್ವವಿದ್ಯಾನಿಲಯ ಕಲಾ ಕಾಲೇಜಿನ ಕನ್ನಡ ವಿಭಾಗವು ಬೆಂಗಳೂರಿನ ಕನ್ನಡ ಗೆಳೆಯರ ಬಳಗದ ಸಹಯೋಗದೊಂದಿಗೆ ಪ್ರೊ. ಎಲ್. ಎಸ್. ಶೇಷಗಿರಿರಾವ್ ಅವರ ಜನ್ಮಶತಮಾನೋತ್ಸವದ ಅಂಗವಾಗಿ ಮಂಗಳವಾರ ಆಯೋಜಿಸಿದ್ದ ಪ್ರೊ. ಎಲ್. ಎಸ್. ಎಸ್. ಸಾಹಿತ್ಯ ಸಾಧನೆಯ ಕುರಿತ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದರು.
ಪ್ರೊ. ಎಲ್. ಎಸ್. ಎಸ್. ಮೌಲ್ಯಗಳಿಗೆ ಬದ್ಧವಾಗಿ ಜೀವನ ನಡೆಸಿರುವುದಲ್ಲದೆ, ಯಾವುದೇ ಆಮಿಷಗಳಿಗೆ ಒಳಗಾಗದೆ ನಿಷ್ಠೆಯಿಂದ ಜೀವನ ಸವೆಸಿದವರು. ಕನ್ನಡದಲ್ಲಿ ಒಂದು ವರ್ಷಕ್ಕೆ 6000ಕ್ಕೂ ಹೆಚ್ಚು ಪುಸ್ತಕಗಳು ಬಿಡುಗಡೆಯಾಗುತ್ತಿವೆ, ಅದರಲ್ಲಿ ಯಾವ ಪುಸ್ತಕ ಉಪಯುಕ್ತ ಎಂದು ತಿಳಿಯಬೇಕಾದರೆ ಎಲ್. ಎಸ್.ಎಸ್. ರಂತಹ ವಿಮರ್ಶಕರು ಅನಿವಾರ್ಯ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಪ್ರೊ. ಬಿ ಕರಿಯಣ್ಣ ಕನ್ನಡ ಸಾಹಿತ್ಯ ಲೋಕದಲ್ಲಿ ಸಾಹಿತಿಗಳಾಗಿ, ವಿಮರ್ಶಕರಾಗಿ ಗುರುತಿಸಿಕೊಂಡವರು ಎಲ್. ಎಸ್. ಎಸ್, ಅಂಥವರ ಪುಸ್ತಕಗಳನ್ನ ಓದಿ ವಿಮರ್ಶಾ ದೃಷ್ಟಿಕೋನವನ್ನು ಬೆಳೆಸಿಕೊಳ್ಳಿ ಎಂದು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.
ಕನ್ನಡಪರ ಹೋರಾಟಗಾರರಾದ ರಾ. ನಂ. ಚಂದ್ರಶೇಖರ ಬೆಂಗಳೂರಿನಲ್ಲಿ ಎನ್ನಡ ಎಕ್ಕಡ ಎಂಬ ಮಾತಿನ ನಡುವೆ ಕನ್ನಡ ಅನಾಥವಾಗಿ ಮತ್ತು ಕನ್ನಡಿಗ ಪರಕೀಯನಾಗಿದ್ದ ಕಾಲದಲ್ಲಿ ಕನ್ನಡ ಸಾಹಿತ್ಯಕ್ಕೆ ಅಪಾರವಾದ ಕೊಡುಗೆ ನೀಡಿದವರು ಎಲ್. ಎಸ್. ಶೇಷಗಿರಿ ರಾವ್. ವೃತ್ತಿ ಯಾವುದೇ ಇರಲಿ ಕನ್ನಡವನ್ನು ಕಟ್ಟುವ ಕೆಲಸ ಹೇಗೆ ಮಾಡಬೇಕು ಎಂಬುದನ್ನು ಅವರು ತಿಳಿಸಿಕೊಟ್ಟರು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಕನ್ನಡ ವಿಭಾಗದ ಮುಖ್ಯಸ್ಥ ಡಾ. ಎಸ್. ಶಿವಣ್ಣ ಬೆಳವಾಡಿ, ಸಾಹಿತಿ ಬಾ. ಹ. ರಮಾಕುಮಾರಿ, ಬಾ. ಹ. ಉಪೇಂದ್ರ ಮತ್ತಿತರರು ಉಪಸ್ಥಿತರಿದ್ದರು.
ಕನ್ನಡ ಸಾಹಿತ್ಯ ಕ್ಷೇತ್ರಕ್ಕೆ ಎಲ್. ಎಸ್. ಎಸ್. ಕೊಡುಗೆ ಅಪಾರ’
Leave a comment
Leave a comment