ತುಮಕೂರು : ಕರ್ನಾಟಕ ರಾಜ್ಯ ಸರ್ಕಾರ ಪ್ರಸ್ತುತ ರಾಜ್ಯದಲ್ಲಿರುವ ಸಂಘಟಿತ, ಅಸಂಘಟಿತ ಕಾರ್ಮಿಕ ವರ್ಗವನ್ನು ಸರ್ವತೋಮುಖವಾಗಿ ಅಭಿವೃದ್ಧಿಗೊಳಿಸುವ ನಿಟ್ಟಿನಲ್ಲಿ ಇಲಾಖೆಯ ವಿವಿಧ ಸೌಲಭ್ಯಗಳನ್ನು ಕಾರ್ಮಿಕರಿಗೆ ತಲುಪಿಸುವ ಸದುದ್ದೇಶದಿಂದ ಪ್ರತೀ ತಿಂಗಳ ಮೂರನೇ ಶುಕ್ರವಾರದಂದು “ಕಾರ್ಮಿಕ ಇಲಾಖೆಯ ನಡೆ ಕಾರ್ಮಿಕರ ಕಡೆ” ಎಂಬ ನೂತನ ಅಭಿಯಾನವನ್ನು ಹಮ್ಮಿಕೊಂಡಿರುವುದು ಶ್ಲಾಘನೀಯ ಎಂದು ನವ ಕರ್ನಾಟಕ ರಾಜ್ಯ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಒಕ್ಕೂಟದ ರಾಜ್ಯಾಧ್ಯಕ್ಷರಾದ ಎಸ್.ಡಿ.ನಾಗರಾಜು (ಸಿದ್ದನ ಕಟ್ಟೆ) ಅವರು ಅಭಿಪ್ರಾಯಪಟ್ಟಿದ್ದಾರೆ.
ತುಮಕೂರು ಜಿಲ್ಲೆಯ ಚಿಕ್ಕನಾಯಕನಹಳ್ಳಿ ತಾಲೂಕಿನ ಗೋಡೆಕೇರೆ ಗ್ರಾಮ ಪಂಚಾಯಿತಿ ಸಭಾಂಗಣದಲ್ಲಿ ಇಂದು ನಡೆದ ತಾಲೂಕು ಪಂಚಾಯಿತಿ, ಕಾರ್ಮಿಕ ಇಲಾಖೆ ಹಾಗೂ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿ, ರಾಜ್ಯ ಅಸಂಘಟಿತ ಕಾರ್ಮಿಕ ಭದ್ರತಾ ಮಂಡಳಿ ಹಾಗೂ ನವ ಕರ್ನಾಟಕ ರಾಜ್ಯ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಒಕ್ಕೂಟದ ವತಿಯಿಂದ ಕಟ್ಟಡ ಕಾರ್ಮಿಕರ ಇ-ಶ್ರಮ್ ನೊಂದಣಿ ಮತ್ತು ಸೌಲಭ್ಯಗಳ ಅರಿವು ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಕಾರ್ಮಿಕ ಇಲಾಖೆಯ ವತಿಯಿಂದ ವಿವಿಧ ಸೌಲಭ್ಯಗಳನ್ನು ಕಾರ್ಮಿಕರಿಗೆ ತಲುಪಿಸುವ ಸಲುವಾಗಿ ಹಲವಾರು ಯೋಜನೆಗಳ ಮೂಲಕ ಶೈಕ್ಷಣಿಕ, ಆರ್ಥಿಕ ಸಾಮಾಜಿಕವಾಗಿ ಸಹಾಯ ಮಾಡುತ್ತಿದ್ದು ಅರ್ಹ ಕಾರ್ಮಿಕರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದರು.
ಕಾರ್ಮಿಕ ಇಲಾಖೆಯ ಹೆಚ್.ಎನ್.ರಮೇಶ್ ಮಾತನಾಡುತ್ತಾ ಜಿಲ್ಲಾಧಿಕಾರಿಯವರ ಮಾರ್ಗದರ್ಶನದಂತೆ ಪ್ರತೀ ತಿಂಗಳ ೩ನೇ ಶುಕ್ರವಾರ ಕಾರ್ಮಿಕ ಇಲಾಖೆಯ ನಡೆ ಹಳ್ಳಿ ಕಡೆ ಕಾರ್ಯಕ್ರಮವನ್ನು ಜಿಲ್ಲೆಯ ವಿವಿಧ ಗ್ರಾಮ ಪಂಚಾಯತಿಗಳಲ್ಲಿ ಕಟ್ಟಡ ಕಾರ್ಮಿಕರ ಹಾಗೂ ಅಸಂಘಟಿತ ಕಾರ್ಮಿಕರ ನೋಂದಣಿ ಕಾರ್ಯಕ್ರಮವನ್ನು ಆಯೋಜಿಸಲಾಗುತ್ತಿದ್ದು ಪ್ರಸ್ತುತ ಈ ಮಾಹೆಯಲ್ಲಿ ತುಮಕೂರು ತಾಲ್ಲೂಕಿನ ಸ್ವಾಂದೇನಹಳ್ಳಿ ಗ್ರಾ.ಪಂ.ಯಲ್ಲಿ ೧೬೦, ತಿಪಟೂರು ತಾಲೂಕಿನ ಗಂಗಶೆಟ್ಟಿಹಳ್ಳಿ ಗ್ರಾ.ಪಂ. ೬೭, ಚಿ.ನಾ.ಹಳ್ಳಿ ಗೋಡೆಕೆರೆ ಗ್ರಾ.ಪಂ. ೮೧, ತುರುವೇಕೆರೆ ತಾಲ್ಲೂಕಿನ ಮುನಿಯೂರು ಗ್ರಾ.ಪಂ.೩೪, ಕುಣಿಗಲ್ ತಾಲ್ಲೂಕಿನ ಅಮೃತೂರು ಗ್ರಾ.ಪಂ. ೪೩, ಸೇರಿದಂತೆ ಗುಬ್ಬಿ ತಾಲ್ಲೂಕಿನ ಹಾಗಲವಾಡಿ ಗ್ರಾ.ಪಂ ಯಲ್ಲಿ. ೬೨ ಇ-ಶ್ರಮ್ ಕಾರ್ಡ್ ಗಳನ್ನು ನೋಂದಣಿ ಮಾಡಲಾಗಿದೆಂದು ತಿಳಿಸಿದರು.