ರೈತರಿಗೆ ನೀಡಿದ್ದ ಕೃಷಿ ಸಾಲ ವಸೂಲಾತಿಗೆ ಕರ್ನಾಟಕ ಗ್ರಾಮೀಣ ಬ್ಯಾಂಕ್ ರೈತರಿಗೆ ನೋಟಿಸ್ ಜಾರಿ ಮಾಡುತ್ತಿದ್ದು ಕೂಡಲೆ ಹಿಂಪಡೆಯಬೇಕು. ಈ ವರ್ಷ ಶೇ 50 ರಷ್ಟು ಮಾತ್ರ ಸಾಲ ಮರುಪಾವತಿಗೆ ಅನುವು ಮಾಡಿಕೊಡಬೇಕು ಎಂದು ಒತ್ತಾಯಿಸಿ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಕಾರ್ಯಕರ್ತರು ಕೆಜಿಬಿ ಹಾಗೂ ತಹಶೀಲ್ದಾರ ಕಚೇರಿ ಎದರು ಬುಧವಾರ ಪ್ರತಿಭಟನೆ ನಡೆಸಿದರು.
ರೈತ ಸಂಘದ ರಾಜ್ಯ ಘಟಕದ ಅಧ್ಯಕ್ಷ ದಯಾನಂದ ಪಾಟೀಲ ಮಾತನಾಡಿ ಕರ್ನಾಟಕ ಗ್ರಾಮೀಣ ಬ್ಯಾಂಕ್ ರೈತರನ್ನು ಯಾಮಾರಿಸಿ ಹೆಚ್ಚಿನ ಬಡ್ಡಿ, ಚಕ್ರ ಬಡ್ಡಿ, ಸುಸ್ತಿ ಬಡ್ಡಿ ವಿಧಿಸುವುದರಜೊತೆಗೆ ಇಲ್ಲದೊಂದು ನೆಪವೊಡ್ಡಿ ಹೆಚ್ಚು ಹಣ ಸುಲಿಗೆ ಮಾಡುತ್ತಿದೆ. ಬರದಿಂದ ತತ್ತರಿಸಿರುವ ರೈತರಿಗೆ ಸಾಲ ಮರುಪಾವತಿಗೆ ನೋಟೀಸ್ ಜಾರಿ ಮಾಡಿ ಕಿರುಕೊಳ ನೀಡುತ್ತಿದೆ. ರೈತರ ವಿರುದ್ಧ ನ್ಯಾಯಾಲಯಗಳಲ್ಲಿ ದಾವೆ ಹೂಡಿ ಅಲೆದಾಡಿಸುವ ಮೂಲಕ ಆತ್ಮಹತ್ಯೆಗೆ ಪ್ರೇರಣೆ ನೀಡುತ್ತಿದೆ. ಇತರೆ ರಾಷ್ಟ್ರೀಕೃತ ಬ್ಯಾಂಕಗಳು ಸಾಲ ಮರುಪಾವತಿಸಲಾಗದ ರೈತರಿಂದ ಕೇವಲ ಶೆ 10 ರಷ್ಟು ಮರುಪಾವತಿಸಿಕೊಂಡು ಸಾಲ ಮುಕ್ತಗೊಳಿಸಿವೆ. ಕೆಜಿಬಿ ಸಹ ಅಂತಹ ಸವಲತ್ತು ರೈತರಿಗೆ ನೀಡಬೇಕು. ವಿನಾ ಕಾರಣ ರೈತರಿಗೆ ರೈತ ಕುಟುಂಬಗಳಿಗೆ ತೊಂದರೆ ನೀಡಿದರೆ ರೈತ ಸಂಘದಿಂದ ಉಗ್ರ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಸಿದರು.
ಬ್ಯಾಂಕನ ಈ ರೈತ ವಿರೋಧಿ ಧೋರಣೆ ಖಂಡಿಸಿ ಒಂದು ತಿಂಗಳು ಪರ್ಯಂತ ರಾಜ್ಯದಂತ ರೈತರ ಸಂಕಲ್ಪ ಜಾಥಾ ನಡೆಸಿ ಮಾ. 28 ರಂದು ಕರ್ನಾಟಕ ಗ್ರಾಮೀಣ ಬ್ಯಾಂಕ್ ಕೇಂದ್ರ ಕಚೇರಿ ಎದುರು ಪ್ರತಿಭಟನೆ ನಡೆಸಲು ನಿರ್ಧರಿಸಲಾಗಿದೆ ಎಂದು ಅವರು ತಿಳಿಸಿದರು.
ಆರ್. ಮಾಧವರೆಡ್ಡಿ, ಬಳ್ಳಾರಿ ಜಿಲ್ಲಾ ಅಧ್ಯಕ್ಷ ಲೇಪಾಕ್ಷಿ, ಮುಖಂಡರಾದ ವಿರೂಪಾಕ್ಷಿ, ವಿಶ್ವನಾಥ, ಚಂದ್ರಕಾಂತ ಬಿರಾದಾರ, ಪಂಪಾಪತಿ, ವೀರೇಶ ಭೀಮಳ್ಳಿ, ಸಂತೋಷ ಪಾಟೀಲ ಮತ್ತಿತರರು ಹಾಜರಿದ್ದರು.