ಸ್ಲಂ ಜನಾಂದೋಲನ ನಿಯೋಗದಿಂದ ಬಜೆಟ್ ಭಾಷಣದಲ್ಲಿ ಮುಖ್ಯಮಂತ್ರಿಗಳ ಗಮನ ಸೆಳೆಯಲು ವಸತಿ ಸಚಿವರಿಗೆ ಒತ್ತಾಯ -ಸಭೆ ಕರೆಯುವ ಭರವಸೆ.
ಆತ್ಮೀಯರೇ, ಇಂದು (21/2/2024) ನಡೆಯಬೇಕಿದ್ದ ಕೊಳಗೇರಿ ನಿವಾಸಿಗಳ ಜಂಟಿ ಹೋರಾಟದ ಭಾಗವಾಗಿ ವಸತಿ ಸಚಿವರಾದ ಬಿ.ಝಡ್ ಜಮೀರ್ ಅಹಮದ್ ಖಾನ್ ಅವರನ್ನು ಸ್ಲಂ ನಿವಾಸಿಗಳ ಜಂಟಿ ಹೋರಾಟ ಸಮಿತಿಯ ಕರ್ನಾಟಕ ನಿಯೋಗ ಭೇಟಿಯಾಗಿ ರಾಜ್ಯದ ಸ್ಲಂ ಜನರ ಹಕ್ಕೋತ್ತಾಯಗಳು ಮತ್ತು 2024-25ನೇ ಸಾಲಿನ ರಾಜ್ಯ ಬಜೆಟ್ ನಲ್ಲಿ ಸ್ಲಂಗಳ ಅಭಿವೃದ್ಧಿಗೆ ನೀಡಿರುವ 30 ಕೋಟಿ ಅನುದಾನ ಸಾಮಾಜಿಕ ನ್ಯಾಯಕ್ಕೆ ವಿರುದ್ಧವಾಗಿದ್ದು ಮುಖ್ಯಮಂತ್ರಿಗಳ ಬಜೆಟ್ ಭಾಷಣದ ಸಂದರ್ಭದಲ್ಲಿ ಗಮನ ಸೆಳೆದು ರಾಜ್ಯದ ಸ್ಲಂಗಳ ಅಭಿವೃದ್ಧಿಗೆ 500 ಕೋಟಿ ಅನುದಾನ ಪಡೆಯುವುದು ಸೇರಿದಂತೆ ರಾಜ್ಯದಲ್ಲಿ ವಸತಿ ಹಕ್ಕು ಕಾಯಿದೆ ಜಾರಿಯಾಗಬೇಕು, ಸ್ಲಂಗಳ ಸಮಗ್ರ ಅಭಿವೃದ್ಧಿ ಕಾಯಿದೆ 2018ರ ಕರಡನ್ನು ವಿಧಾನ ಸಭೆಯಲ್ಲಿ ಅನುಮೋದನೆ ಪಡೆಯಬೇಕು. ಖಾಸಗೀ ಮಾಲೀಕತ್ವದ ಕೊಳಚೆ ಪ್ರದೇಶಗಳ ಘೋಷಣೆಗೆ ಇತ್ತೀಚೆಗೆ ಹೊರಡಿಸಿರುವ ಸರ್ಕಾರಿ ಸುತ್ತೋಲೆಯನ್ನು ವಾಪಸ್ ಪಡೆದು ಈಗಾಗಲೇ ಘೋಷಣೆಯಾಗಿರುವ ಖಾಸಗಿ ಮಾಲೀಕತ್ವದ ಕೊಳಚೆ ಪ್ರದೇಶಗಳಿಗೆ ಮೂರು ಸೂತ್ರಗಳಲ್ಲಿ ಹಕ್ಕುಪತ್ರ ನೀಡಬೇಕು. ಸ್ಲಂ ಜನರಿಗೆ ನೀಡುವ ಹಕ್ಕುಪತ್ರದಲ್ಲಿ ಜನಪ್ರತಿನಿಧಿಗಳ ಫೋಟೋ ಹಾಕದೆ ಸರ್ಕಾರದ ಚಿನ್ಹೆ ಹಾಕಿ ವಿತರಣೆ ಮಾಡಬೇಕು. 2020ರ ಸರ್ಕಾರಿ ಆದೇಶದಂತೆ ವಿತರಣೆ ಮಾಡುತ್ತಿರುವ ಹಕ್ಕುಪತ್ರಗಳನ್ನು ಕ್ರಯ ಮಾಡಲು ಕಂದಾಯ ಇಲಾಖೆಯಿಂದ ಅದಾಲತ್ ಏರ್ಪಡಿಸಿಬೇಕು. ಪ್ರಧಾನ್ ಮಂತ್ರಿ ಅವಾಸ್ ಯೋಜನೆಯ 1 ಲಕ್ಷ ಫಲಾನುಭವಿ ವಂತಿಕೆಯನ್ನು ಪಾವಾಸ್ ಪಡೆದು 25 ಸಾವಿರ ವಂತಿಕೆಯನ್ನು ನಿಗಧಿಗೊಳಿಸಬೇಕು, ನಗರ ಲ್ಯಾಂಡ್ ಬ್ಯಾಂಕ್ ನೀತಿಯನ್ನು ಜಾರಿ ಮಾಡಿ ನಗರಾಭಿವೃದ್ಧಿ ಪ್ರಧಿಕಾರಗಳು ನಿರ್ಮಾಣ ಮಾಡುವ ಬಡಾವಣೆಗಳಲ್ಲಿ ಶೇ%10 ಸ್ಲಂ ನಿವಾಸಿಗಳಿಗೆ ಮೀಸಲಿಡಬೇಕು ಮತ್ತು ಬೆಂಗಳೂರು ನಗರದಲ್ಲಿ ರೂಪಾಂತರಗೊಂಡಿರುವ ನೆಲಬಾಡಿಗೆ ಸ್ಲಂಗಳಿಗೆ ನೀತಿ ರೂಪಿಸಬೇಕು. ಈ ಎಲ್ಲಾ ಹಕ್ಕೋತ್ತಾಯಗಳನ್ನು ಈಡೇರಿಸಲು ತುರ್ತಾಗಿ ಸಭೆ ಕರೆಯಬೇಕೆಂದು ನಿಯೋಗದ ಪರವಾಗಿ ಸ್ಲಂ ಜನಾಂದೋಲನ ಕರ್ನಾಟಕ ರಾಜ್ಯ ಸಂಚಾಲಕರಾದ ಎ.ನರಸಿಂಹಮೂರ್ತಿ ಮನವಿ ಸಲ್ಲಿಸಿದರು. ಜಂಟಿ ಹೋರಾಟ ಸಮಿತಿಯ ಪರವಾಗಿ ದಲಿತ ಸಮರ ಸೇನೆಯ ತಿಪ್ಪಣ್ಣ, ಸುಧೀರ್, ಸಾವಿತ್ರಿ ಬಾಯಿಪುಲೆ ಮಹಿಳಾ ಸಂಘಟನೆಯ ಸಂಚಾಲಕರಾದ ಚಂದ್ರಮ್ಮ, ಬೆಂಗಳೂರು ನಗರ ಸಮಿತಿಯ ಮಂಜುಬಾಯಿ, ರಾಮಕೃಷ್ಣಯ್ಯ, ಶಿವಕುಮಾರ್, ಹಣಮಂತ ಮತ್ತು ತೇಜಸ್ ಕುಮಾರ್ ನಿಯೋಗದಲ್ಲಿದ್ದರು.
ಮನವಿ ಸ್ವೀಕರಿಸಿ ಮಾತನಾಡಿದ ವಸತಿ ಸಚಿವ ಜಮೀರ್ ಅಹಮದ್ ಖಾನ್ ಈಗಾಗಲೇ ಮುಖ್ಯಮಂತ್ರಿಗಳು ಸ್ಲಂ ನಿವಾಸಿಗಳ ವಸತಿ ನಿರ್ಮಾಣಕ್ಕೆ 500 ಕೋಟಿ ಅನುದಾನವನ್ನು ಸಂಪುಟ ಸಭೆಯಲ್ಲಿ ಒಪ್ಪಿಗೆ ನೀಡಿ 2024-25ನೇ ಸಾಲಿನ ಬಜೆಟ್ ನಲ್ಲಿ 30 ಕೋಟಿ ಹಣ ನೀಡಿದ್ದು ಈ ಪ್ರಮಾಣವನ್ನು ಹೆಚ್ಚಿಸಲು ಮುಖ್ಯಮಂತ್ರಿಗಳ ಗಮನಕ್ಕೆ ತರಲಾಗುವುದು. ಉಳಿದ ಬೇಡಿಕೆಗಳನ್ನು ಚರ್ಚಿಸಲು ಬಜೆಟ್ ಅಧಿವೇಶನದ ನಂತರ ಸಭೆ ಕರೆದು ಚರ್ಚಿಸಲಾಗುವುದೆಂದರು.