ಕನ್ನಡಿಗರ ಸ್ವಾಭಿಮಾನದ ಪ್ರತೀಕವಾಗಿ 1915ರಲ್ಲಿ ಹುಟ್ಟಿದ ಕನ್ನಡ ಸಾಹಿತ್ಯ ಪರಿಷತ್ತು ನಮ್ಮ ದೇಶದ ಅತ್ಯಂತ ಪುರಾತನ ಸಂಸ್ಥೆಯಾಗಿದ್ದು ಐದು ಲಕ್ಷಕ್ಕೂ ಹೆಚ್ಚು ಸದಸ್ಯರನ್ನು ಹೊಂದಿದ್ದು ಅದನ್ನು ಒಂದು ಕೋಟಿಗೆ ಹೆಚ್ಚಿಸುವ ಗುರಿಯನ್ನು ಹೊಂದಿದೆ ಎಂದು ತುಮಕೂರು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಕೆ.ಎಸ್.ಸಿದ್ಧಲಿಂಗಪ್ಪ ನುಡಿದರು.
ಅವರು ನಗರದ ಕನ್ನಡ ಭವನದಲ್ಲಿ ಏರ್ಪಡಿಸಿದ್ದ ಕನ್ನಡ ಸಾಹಿತ್ಯ ಪರಿಷತ್ತಿನ ಸಂಸ್ಥಾಪನಾ ದಿನಾಚರಣೆ ಹಾಗೂ ಮಡಿವಾಳ ಮಾಚಿದೇವರ ದತ್ತಿ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದರು.
ಕನ್ನಡ ಸಾಹಿತ್ಯ ಪರಿಷತ್ತಿನ ಉದಯ ಮತ್ತು ವಿಕಾಸದ ಬಗ್ಗೆ ಮಾತನಾಡಿದ ಡಾ. ಡಿ.ಎನ್.ಯೋಗೀಶ್ವರಪ್ಪನವರು ಕನ್ನಡ ಭಾಷಾ ಪ್ರದೇಶಗಳು ವಿವಿಧ ಭಾಷಿಕರ ಆಡಳಿತದಲ್ಲಿ ಹಂಚಿಹೋಗಿದ್ದ ಕಾಲದಲ್ಲಿ ನಾಲ್ವಡಿ ಕೃಷ್ಣರಾಜ ಒಡೆಯರ್ ಆಡಳಿತ ನಡೆಸುತ್ತಿದ್ದಾಗ ಸರ್ ಎಂ.ವಿಶ್ವೇಶ್ವರಯ್ಯನವರು ಮೈಸೂರು ಸಂಪದಭ್ಯುದಯ ಸಮಾಜವು ಕನ್ನಡ ಭಾಷೆ, ಸಂಸ್ಕೃತಿ, ಸಾಹಿತ್ಯವನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಒಂದು ಸಂಸ್ಥೆಯ ಅಗತ್ಯತೆಯನ್ನು ಮನಗಂಡು 05 ಮೇ, 1915ರಂದು ಬೆಂಗಳೂರಿನ ಸರ್ಕಾರಿ ಹೈಸ್ಕೂಲಿನಲ್ಲಿ ನಡೆದ ವಾರ್ಷಿಕ ಸಭೆಯಲ್ಲಿ ಕರ್ನಾಟಕ ಸಾಹಿತ್ಯ ಪರಿಷತ್ತು ಉದಯವಾಗಿ ಆನಂತರ 1935ರಲ್ಲಿ ಕನ್ನಡ ಸಾಹಿತ್ಯ ಪರಿಷತ್ತೆಂದು ನಾಮಕರಣ ಹೊಂದಿತು ಎಂದು ತಿಳಿಸಿದರು.
ಕನ್ನಡ ಸಾಹಿತ್ಯ ಪರಿಷತ್ತು ನಾಲ್ವಡಿ ಕೃಷ್ಣರಾಜ ಒಡೆಯರ್ರವರ ದೂರದೃಷ್ಟಿಯ ಫಲವಾಗಿ ಹುಟ್ಟಿ ಅದನ್ನು ಸರ್ ಎಂ.ವಿಶ್ವೇಶ್ವರಯ್ಯ ಕಾಂತರಾಜೇ ಆರಸ್, ಮಿರ್ಜಾ ಇಸ್ಮಾಯಿಲ್ ಅದರ ಬೆಳವಣಿಗೆಗೆ ಶ್ರಮಿಸಿದ ಮಹಾನ್ ಚೇತನಗಳು ಎಂದು ಸ್ವರಿಸಿದ ಅವರು ಇಂದು ಅವರ ಶ್ರಮದ ಫಲವಾಗಿ ಜಿಲ್ಲಾ, ತಾಲ್ಲೂಕು ಮತ್ತು ಹೋಬಳಿ ಘಟಕಗಳನ್ನು ಹೊಂದಿದೆ. ಆದರೆ ಕನ್ನಡ ಸಾಹಿತ್ಯ ಪರಿಷತ್ತು ಹುಟ್ಟಿದ ಬೆಂಗಳೂರಿನಲ್ಲೇ ಕನ್ನಡ ಭಾಷಿಕರು ಅಲ್ಪಸಂಖ್ಯಾತರಾಗುತ್ತಿರುವುದು ಅತ್ಯಂತ ಆತಂಕಕಾರಿಯಾದ ವಿಷಯ. ಬೆಂಗಳೂರಿಗೆ ಉದ್ಯೋಗ ಅರಸಿ ಬಂದ ಅನ್ಯ ಭಾಷಿಕರಿಗೆಲ್ಲ ಜರ್ಮನ್ ದೇಶದಲ್ಲಿ ಇರುವಂತೆ ಕಡ್ಡಾಯವಾಗಿ ರಾಜ್ಯಭಾಷೆಯನ್ನು ಕಲಿಯುವ ಕಾಯ್ದೆಯನ್ನು ರೂಪಿಸಿದರೆ ಮಾತ್ರ ಬೆಂಗಳೂರಿನಲ್ಲಿ ಕನ್ನಡ ಭಾಷೆ ಮತ್ತು ಸಂಸ್ಕೃತಿ ಉಳಿಯಲು ಸಾಧ್ಯ ಎಂದರು.
ಕನ್ನಡಿಗರ ಸ್ವಾಭಿಮಾನದ ಪ್ರತೀಕ ಕನ್ನಡ ಸಾಹಿತ್ಯ ಪರಿಷತ್ತು”
Leave a comment
Leave a comment