ತುಮಕೂರು: ನಗರದ ಕಾಂಗ್ರೆಸ್ ಕಚೇರಿಯಲ್ಲಿ ನವ ನಿರ್ಮಾಣ ಕಟ್ಟಡ ಕಟ್ಟುವ ವರ ಮತ್ತು ಇತರೆ ನಿರ್ಮಾಣ ಕೂಲಿ ಕಾರ್ಮಿಕರ ಕರ್ನಾಟಕ ಸ್ಟೇಟ್ ಫೆಡರೇಷನ್ ವತಿಯಿಂದ ಪದಾಧಿಕಾರಿಗಳ ಸಭೆ ನಡೆಸಿ ಅಧಿಕೃತವಾಗಿ ಕೆಲಸ ಮಾಡುತ್ತಿರುವವರನ್ನು ವಿವಿಧ ತಾಲೂಕುಗಳಿಗೆ ಅಧ್ಯಕ್ಷರು ಹಾಗೂ ಪ್ರಧಾನ ಕಾರ್ಯದರ್ಶಿಗಳನ್ನಾಗಿ ನೇಮಕ ಮಾಡಲಾಯಿತು. ಇದೇ ಸಂದರ್ಭದಲ್ಲಿ ಅಧ್ಯಕ್ಷರಾದ ಹೆಚ್.ಸಿ. ಶಾಮಣ್ಣ ರೆಡ್ಡಿರವರು ಮಾತನಾಡುತ್ತಾ ನ. ೨೬, ೨೭, ಹಾಗೂ ೨೮ರಂದು ಮೂರು ದಿನಗಳ ಕಾಲ ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಐ.ಎನ್.ಟಿ.ಯು.ಸಿ ವತಿಯಿಂದ ಪ್ರತಿಭಟನೆಯನ್ನು ಹಮ್ಮಿಕೊಂಡಿದ್ದು ಈ ಪ್ರತಿಭಟನೆಯಲ್ಲಿ ಸುಮಾರು ೨ ಲಕ್ಷ ಜನ ಕಾರ್ಮಿಕರು ಭಾಗವಹಿಸಲಿದ್ದು ತುಮಕೂರು ಜಿಲ್ಲೆಯಿಂದ ಸುಮಾರು ೧೦ ಸಾವಿರ ಕಾರ್ಮಿಕರು ಆಗಮಿಸಲಿದ್ದಾರೆ ಎಂದು ತಿಳಿಸಿದರು.
ಪ್ರಧಾನ ಕಾರ್ಯದರ್ಶಿ ಯಲ್ಲಪ್ಪ ಮಾತನಾಡುತ್ತ ನ.೨೯ರಂದು ಬೆಂಗಳೂರಿನ ಬನ್ನೇರುಘಟ್ಟ ಸಮೀಪವಿರುವ ಕಾರ್ಮಿಕ ಕಲ್ಯಾಣ ಮಂಡಳಿಯ ಮುಂಭಾಗದಲ್ಲಿ ಸ್ಕಾಲರ್ ಶಿಪ್, ಹೆರಿಗೆ ಭತ್ಯೆ, ನೋಂದಣಿ ಮಾಡಿರುವ ಕಾರ್ಡ್ ಗಳನ್ನು ಬೋಗಸ್ ಕಾರ್ಡುಗಳೆಂದು ಸ್ಥಗಿತ ಮಾಡಿರುವುದನ್ನು ಖಂಡಿಸಿ ಸುಮಾರು ೨ ಸಾವಿರಕ್ಕೂ ಅಧಿಕ ಕಾರ್ಮಿಕರು ಪ್ರತಿಭಟನೆಯಲ್ಲಿ ಭಾಗವಹಿಸುವರು ಎಂದು ತಿಳಿಸಿದರು. ಈ ಸಂದರ್ಭದಲ್ಲಿ ನವ ನಿರ್ಮಾಣ ಕಟ್ಟಡ ಕಟ್ಟುವವರ ಮತ್ತು ಇತರೆ ನಿರ್ಮಾಣ ಕೂಲಿ ಕಾರ್ಮಿಕರ ಕರ್ನಾಟಕ ಸ್ಟೇಟ್ ಫೆಡರೇಷನ್ ಅಧ್ಯಕ್ಷರಾದ ಹೆಚ್. ಸಿ. ಶಾಮಣ್ಣ ರೆಡ್ಡಿ, ಪ್ರಧಾನ ಕಾರ್ಯದರ್ಶಿ ಯಲ್ಲಪ್ಪ, ಖಜಾಂಚಿ ಸೋಮಣ್ಣ, ತುಮಕೂರು ಜಿಲ್ಲಾಧ್ಯಕ್ಷರಾದ ಗೋವಿಂದರಾಜು ಮತ್ತಿತರರು ಹಾಜರಿದ್ದರು.