ತುಮಕೂರು : ಹೆಣ್ಣು ಮಕ್ಕಳು ಉತ್ತಮ ವಿದ್ಯಾಭ್ಯಾಸ, ಆರೋಗ್ಯ ಹಾಗೂ ಆರ್ಥಿಕವಾಗಿ ಸ್ವಾವಲಂಬಿಯಾಗಿ ಮಹತ್ತರ ಸಾಧನೆ ಮಾಡುವತ್ತ ಗಮನಹರಿಸಬೇಕು ಎಂದು ದೊಡ್ಡಬಳ್ಳಾಪುರದ ಎಕೋ ಪ್ಯಾಲೆಟ್ನ ವ್ಯವಸ್ಥಾಪಕ ನಿರ್ದೇಶಕರಾದ ಪ್ರಿಯ ಪ್ರಕಾಶ್ ತಿಳಿಸಿದರು.
ಶ್ರೀ ಸಿದ್ಧಾರ್ಥ ತಾಂತ್ರಿಕ ಮಹಾವಿದ್ಯಾಲಯದ ಪಿಜಿ ಸೆಮಿನಾರ್ ಹಾಲ್ನಲ್ಲಿ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಮಾತನಾಡಿದ ಅವರು, ಹೆಣ್ಣು ಮನೆಯ ಯಜಮಾನಿದ್ದಂತೆ. ಅಪ್ಪ, ಸಹೋದರರ ಮೇಲೆ ಅವಲಂಬಿತರಾಗಬಾರದು ಎಂದರು.
ಮಹಿಳೆ ಇಂದು ಕೇವಲ ಚಿಕ್ಕ ಕ್ಷೇತ್ರದಲ್ಲಿ ಮಾತ್ರವಲ್ಲ. ದೊಡ್ದ ದೊಡ್ದ ಕ್ಷೇತ್ರದಲ್ಲಿ ಸಾಧನೆ ಮಾಡುತ್ತಿದ್ದಾರೆ. ಹೆಣ್ಣು ಮಕ್ಕಳು ಮುಂದಿನ ಭವಿಷ್ಯದ ಬಗ್ಗೆ ಆಲೋಚಿಸಬೇಕು. ತಮಗೆ ಎದುರಾಗುವ ಎಲ್ಲ ಸಮಸ್ಯೆಗಳನ್ನು ಮೆಟ್ಟಿ ನಿಂತು ದೊಡ್ದ ದೊಡ್ದ ಕನಸುಗಳನ್ನು ಕಂಡು, ಸಾಧನೆ ಮಾಡಬೇಕು ಎಂದು ಪ್ರಿಯ ಪ್ರಕಾಶ್ ತಿಳಿಸಿದರು.
ಸಾಹೇ ವಿಶ್ವವಿದ್ಯಾಲಯದ ಉಪ ಕುಲಪತಿಗಳಾದ ಡಾ. ಕೆ ಬಿ ಲಿಂಗೇಗೌಡ ಅವರು ಮಾತನಾಡಿ, ಹೆಣ್ಣು ಮಕ್ಕಳು ಯಾವ ಸಮಸ್ಯೆಗಳನ್ನು ನೇರವಾಗಿ ಹೇಳಿಕೊಳ್ಳುವುದಿಲ್ಲ, ಆರೋಗ್ಯದ ಸಮಸ್ಯೆಗಳನ್ನು ತಮ್ಮೊಳೆಗೆ ನುಂಗಿಕೊಳ್ಳುತ್ತಾರೆ. ಇತ್ತೀಚೆಗೆ ಹೆಣ್ಣು ಮಕ್ಕಳಲ್ಲಿ ಇತ್ತೀಚಿಗೆ ಹೆಚ್ಚಾಗುತ್ತಿರುವ ಸ್ತನ ಕ್ಯಾನ್ಸರ್, ಅವರ ಬದುಕಿಗೆ ಕಂಟಕವಾಗುತ್ತಿದೆ. ಇದಕ್ಕೆ ಅಂಜದ ವೈದ್ಯಕೀಯ ನೆರವು ಪಡೆದು ಜಾಗೃತರಾಗಿರಲು ಮಹಿಳೆಯರಿಗೆ ಸಲಹೆಗಳನ್ನು ನೀಡಿದರು.
ಸಾಹೇ ರಿಜಿಸ್ಟಾರ್ ಡಾ.ಎಂ.ಜೆಡ್.ಕುರಿಯನ್ ಮಾತನಾಡಿ, ಹೆಣ್ಣಿಗೆ ದುಃಖವನ್ನೂ ಸಹಿಸುವ ಶಕ್ತಿಯಿದೆ. ಅವಳು ಸೂಕ್ಷ್ಮ ಸ್ವಭಾವದಳಾದರೂ ತುಂಬಾ ಶಕ್ತಿವಂತೆ. ಹೆಣ್ಣಿಗೆ ಸಂತೋಷದಲ್ಲಿಯೂ ನೋವಿನಲ್ಲಿಯೂ ಪ್ರೀತಿಯಲ್ಲಿಯೂ ದುಃಖವೇ ಮೊದಲು. ಜೊತೆಗೆ ಎಷ್ಟೇ ನೋವುಗಳಿದ್ದರೂ ಮನಸ್ಸಿನಲ್ಲಿಯೇ ಇಟ್ಟುಕೊಳ್ಳುತ್ತಾಳೆ. ಯಾರ ಮುಂದೆಯೂ ಆಕೆ ತೋರಿಸಿಕೊಳ್ಳುವುದಿಲ್ಲ. ಅವಳಲ್ಲಿ ಅಪರಿಮಿತವಾದ ಪ್ರೀತಿ ತುಂಬಿದೆ. ಇಂದು ಹೆಣ್ಣು ಸಾಮರ್ಥ್ಯ ಮೀರಿ ಸಾಧನೆ ಮಾಡುತ್ತಿದ್ದಾಳೆ ಎಂದರು.
ಪ್ರಾoಶುಪಾಲರಾದ ಡಾ.ಎಂ.ಎಸ್.ರವಿಪ್ರಕಾಶ್ ಮಾತನಾಡಿ, ಪ್ರಸ್ತುತ ದಿನಮಾನಗಳಲ್ಲಿ ಹೆಣ್ಣಿಗೆ ಆಗುತ್ತಿರುವಂತಹ ಶೋಷಣೆಯ ವಿರುದ್ಧ ನಾವೆಲ್ಲರೂ ಹೋರಾಡಬೇಕು. ಎಲ್ಲಾ ಪುರಾಣಗಳಲ್ಲೂ ಸ್ತ್ರೀಯರಿಗೆ ಉತ್ತಮ ಸ್ಥಾನ ಮಾನ ನೀಡಿರುವ ಪ್ರಕಾರ ಪ್ರಸ್ತುತ ದಿನಗಳಲ್ಲಿಯೂ ಸ್ತ್ರೀಯರಿಗೆ ಸಮಾನತೆಯ ಜೊತೆಗೆ ಗೌರವವನ್ನು ನೀಡುವ ಪ್ರಯತ್ನವನ್ನು ಮಾಡಬೇಕು. ಸ್ತ್ರೀ ಎನ್ನುವವಳು ಶಕ್ತಿರೂಪಿಣಿ ಅವಳು ತಾಯಿ ಹೆಂಡತಿ ಮಗಳು ಹೀಗೆ ಎಲ್ಲಾ ತರಹದ ಪಾತ್ರಗಳನ್ನ ನಿರ್ವಹಿಸುತ್ತಾಳೆ. ಪ್ರಸ್ತುತ ದಿನಮಾನದಲ್ಲಿ ಪುರುಷರಿಗಿಂತ ಹೆಚ್ಚಿನ ಮಟ್ಟದ ಸಾಧನೆಯನ್ನು ಹೆಣ್ಣು ಮಕ್ಕಳು ಮಾಡುತ್ತಿದ್ದಾರೆ ಎಂದರು.
ಕಾರ್ಯಕ್ರಮದಲ್ಲಿ ಶೈಕ್ಷಣಿಕ ವಿಭಾಗದ ಡೀನ್ ಡಾ. ರೇಣುಕಾಲತಾ . ಐ.ಕ್ಯೂ.ಎ.ಸಿ ಯ ಸಂಯೋಜಕರಾದ ಡಾ.ಪ್ರಕಾಶ್, ಕಾರ್ಯಕ್ರಮದ ಮೇಲ್ವಿಚಾರಕರಾದ ಡಾ.ಅನಿತಾದೇವಿ, ಪೂರ್ಣಿಮಾ ಪಿ ಎಸ್ ಸೇರಿದಂತೆ ಕಾಲೇಜಿನ ಮಹಿಳಾ ಪ್ರಾಧ್ಯಾಪಕ ವರ್ಗ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಮಹಿಳಾ ಸಮುದಾಯ ನಡೆಸಿಕೊಟ್ಟ ಸಾಂಸ್ಕೃತಿಕ ಕಾರ್ಯಕ್ರಮಗಳ ವೇದಿಕೆಗೆ ಮತ್ತಷ್ಟು ಮೆರಗು ತಂದು ಕೊಟ್ಟವು.