ತುಮಕೂರು: ಮುಂದಿನ ಹತ್ತು ವರ್ಷಗಳಲ್ಲಿ ಭಾರತ ವಿಶ್ವದ ತಂತ್ರಜ್ಞಾನ ಕ್ಷೇತ್ರದ ದಿಗ್ಗಜ ದೇಶವಾಗಿ ರೂಪಗೊಳ್ಳಲಿದೆ ಎಂದು ಶ್ರೀ ಸಿದ್ದಾರ್ಥ ಅಕಾಡೆಮಿ ಆಫ್ ಹೈಯರ್ ಏಜುಕೇಷನ್ (ಸಾಹೇ) ವಿವಿ ಕುಲಾಧಿಪತಿ ಡಾ.ಜಿ.ಪರಮೇಶ್ವರ ಅಭಿಪ್ರಾಯಪಟ್ಟರು.
ಶ್ರೀ ಸಿದ್ಧಾರ್ಥ ತಾಂತ್ರಿಕ ಮಹಾವಿದ್ಯಾಲಯದ ೨೦೨೩-೨೪ನೇ ಶೈಕ್ಷಣಿಕ ಸಾಲಿನ ೪೫ನೇ ಹೊಸ ಬ್ಯಾಚಿನ ವಿದ್ಯಾರ್ಥಿಗಳಿಗಾಗಿ ಕ್ಯಾಂಪಸ್ನ ಲುಂಬಿಣಿ ರಿಕ್ರಿಯೇಷನ್ ಹಾಲ್ನಲ್ಲಿ ಆಯೋಜಿಸಿದ್ದ ಫ್ರೇಶರ್ಸ್ ಡೇ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ವರ್ಷಕ್ಕೆ ೧೮ ಲಕ್ಷ ಇಂಜಿನಿಯರ್ ಪದವೀಧರರನ್ನು ವಿಶ್ವಕ್ಕೆ ಕೊಡೆಗೆಯಾಗಿ ನೀಡುತ್ತಿರುವ ಭಾರತವು ತಂತ್ರಜ್ಞಾನ ಕ್ಷೇತ್ರದಲ್ಲಿ ಅಮೆರಿಕ, ರಷ್ಯಾ, ಚೀನಾ ಜಪಾನ್ ದೇಶಗಳಿಂತ ಮುಂಚೂಣಿಯಲ್ಲಿದೆ ಎಂದರು.
೨೦೨೩-೨೪ನೇ ಸಾಲಿನ ಶೈಕ್ಷಣಿಕ ವರ್ಷಕ್ಕೆ ದಾಖಲಾಗಿರುವ ಇಂಜಿನಿಯರಿAಗ್ ವಿದ್ಯಾರ್ಥಿಗಳಿಗೆ ಶುಭ ಹಾರೈಸಿದ ಅವರು ತುಮಕೂರು ಜಿಲ್ಲೆ ಕೈಗಾರಿಕಾ ಹಬ್ ಆಗಿ ಬೆಳವಣಿಗೆಯಾಗುತ್ತಿದ್ದು, ಮುಂದಿನ ೫-೧೦ ವರ್ಷಗಳಲ್ಲಿ ಜಿಲ್ಲೆಯ ವಸಂತನರಸಾಪುರ ಕೈಗಾರಿಕಾ ಪ್ರದೇಶ ಒಂದರಲ್ಲೇ ಸುಮಾರು ಹತ್ತು ಸಾವಿರಕ್ಕೂ ಹೆಚ್ಚು ಇಂಜಿನಿಯರ್ಗಳಿಗೆ ಉದ್ಯೋಗ ದೊರೆಯಲಿದೆ. ಈಗಾಗಲೇ ಜಪಾನೀಸ್ ಟೌನ್ ಶಿಪ್, ತುಮಕೂರು ಮಿಷನ್ ಟೂಲ್ ಪಾರ್ಕ್, ಟಿಮೇಕ್ ಸೇರಿದಂತೆ ಹಲವು ಪ್ರತಿಷ್ಠಿತ ಸಂಸ್ಥೆಗಳು ಕಾರ್ಯನಿರ್ವಹಿಸುತ್ತಿವೆ. ಇಂತಹ ಅವಕಾಶವನ್ನು ವಿದ್ಯಾರ್ಥಿಗಳು ಸದುಪಯೋಗ ಪಡಿಸಿಕೊಳ್ಳಬೇಕು ಎಂದರು.
ಕಳೆದ ೪೪ ವರ್ಷಗಳಲ್ಲಿ ಸಿದ್ದಾರ್ಥ ತಾಂತ್ರಿಕ ಶಿಕ್ಷಣ ಮಹಾವಿದ್ಯಾಲಯದಲ್ಲಿ ವಿದ್ಯಾಭ್ಯಾಸ ಮಾಡಿದ ೩೬,೦೦೦ ಇಂಜಿನಿಯರಿAಗ್ ಪದವೀಧರರು ಪ್ರಪಂಚದ ನಾನಾ ಭಾಗಗಳಲ್ಲಿ, ಸಂಸ್ಥೆಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ನಮ್ಮ ಶಿಕ್ಷಣ ಸಂಸ್ಥೆಯ ವಿದ್ಯಾರ್ಥಿ ಎಂದು ಪರಿಚಯಿಸಿಕೊಂಡು ಮಾತನಾಡಿಸಿದಾಗ ಹೆಮ್ಮೆ ಅನಿಸುತ್ತದೆ.
ಎಲ್ಲರನ್ನು ಕೇಳಿ ಪಡೆದುಕೊಳ್ಳುವ ಸ್ಥಿತಿಯಲ್ಲಿದ್ದ ಭಾರತ ಇಂದು ಹಲವಾರು ದೇಶಗಳಿಗೆ ಆಹಾರ ಧಾನ್ಯಗಳನ್ನು ರಫ್ತು ಮಾಡುವ ದೇಶವಾಗಿ ಬದಲಾಗಲು ಪ್ರಮುಖ ಕಾರಣ ದೇಶದಲ್ಲಿ ಆಗಿರುವ ವಿಜ್ಞಾನ, ತಂತ್ರಜ್ಞಾನ ಕ್ಷೇತ್ರದ ಕ್ರಾಂತಿ. ಕೃತಕ ಬುದ್ಧಿ ಮತ್ತೆ, ದತ್ತಾಂಶ ವಿಜ್ಞಾನ, ಸೈಬರ್ ಟೆಕ್ನಾಲಜಿಯನ್ನು ರಾಜ್ಯದ ಗೃಹ ಇಲಾಖೆಯೂ ಸಮರ್ಥವಾಗಿ ಬಳಸಿಕೊಳ್ಳುತ್ತಿದೆ ಎಂದರು.
ದೇಶದ ಮಹತ್ವಾಕಾಂಕ್ಷಿ ಯೋಜನೆಯಾದ ಚಂದ್ರಯಾನ-೩ರಲ್ಲಿ ನಮ್ಮ ಸಿದ್ದಾರ್ಥ ತಾಂತ್ರಿಕ ಮಹಾ ವಿದ್ಯಾಲಯದ ಹಳೆಯ ವಿದ್ಯಾರ್ಥಿ ಕಾರ್ಯನಿರ್ವಸಿರುವುದು ನಮ್ಮ ಹೆಮ್ಮೆ. ಮಹಿಳಾ ಸಬಲೀಕರಣಕ್ಕೆ ಹಲವು ಯೋಜನೆಗಳನ್ನು ಜಾರಿಗೊಳಿಸಿ ಪರಿಣಾಮ ಇಸ್ರೋ ತಂಡಲಲ್ಲೂ ಶೇ.೫೦ರಷ್ಟು ಮಹಿಳಾ ವಿಜ್ಞಾನಿಗಳು ಕಾರ್ಯನಿರ್ವಹಿಸಿರುವುದೇ ಸಾಕ್ಷಿ ಎಂದರು.
ಕಾರ್ಯಕ್ರಮದಲ್ಲಿ ಮಾತನಾಡಿದ ತುಮಕೂರು ವಿವಿ ಸ್ನಾತಕೋತ್ತರ ಕಾನೂನು ಅಧ್ಯಯನ ಮತ್ತು ಸಂಶೋಧನಾ ಕೇಂದ್ರದ ಅಧ್ಯಕ್ಷರಾಡ ಡಾ.ಎಮೋಹನ್ ರಾಮ್ ಮಾತನಾಡಿ, ವಿದ್ಯಾರ್ಥಿಗಳು ಪಠ್ಯದ ಶಿಕ್ಷಣದ ಜೊತೆಗೆ ಪಠ್ಯೇತರ ಚಟುವಟಿಕೆಗಳಲ್ಲೂ ತೊಡಗಿಸಿಕೊಳ್ಳಬಗೇಕು, ತಮ್ಮ ಮಾತೃ ಭಾಷೆಯ ಜೊತಗೆ ಆಂಗ್ಲ ಭಾಷಾ ಕಲಿಕೆಗೂ ಒತ್ತು ನೀಡಬೇಕು, ವಿದ್ಯಾರ್ಥಿ ಜೀವನದಲ್ಲಿ ಭಾಷೆಯ ಮೇಲೆ ಹಿಡಿತ, ಪ್ರಾಯೋಗಿಕವಾಗಿ ತೊಡಗಿಸಿಕೊಳ್ಳುವುದು, ನಿರಂತರ ಅಧ್ಯಯನ, ಸಮಸ್ಯೆಗಳಿಗೆ ಸಕಾಲದಲ್ಲಿ ಶಿಕ್ಷಕರಿಂದ ಸಲಹೆ ಪಡೆದುಕೊಳ್ಳುವುದು, ಪುಸ್ತಕಗಳನ್ನು ಅಧ್ಯಯನ ಮಾಡುವ ಅಭ್ಯಾಸ ರೂಢಿಸಿಕೊಂಡರೆ ನಮ್ಮ ಜ್ಞಾನದ ಮಟ್ಟ ಹೆಚ್ಚಾಗಲಿದೆ ಎಂದು ವಿದ್ಯಾರ್ಥಿಗಳಿಗೆ ಕಿವಿ ಮಾತು ಹೇಳಿದರು.
ಸಾಹೇ ವಿಶ್ವವಿದ್ಯಾಲಯದ ಉಪ ಕುಲಪತಿ ಡಾ.ಕೆ.ಬಿ.ಲಿಂಗೇಗೌಡ ಮಾತನಾಡಿ ನಮ್ಮ ಸಾಹೇ ವಿಶ್ವವಿದ್ಯಾಲಯವು ಇತ್ತೀಚಿಗೆ ನ್ಯಾಕ್ ಎ+ ಶ್ರೇಣಿ ಪಡೆದಿದ್ದು, ಸಂಸ್ಥೆಯು ಉನ್ನತ ಗುಣಮಟ್ಟದ ಶಿಕ್ಷಣ ನೀಡುವುದರ ಜೊತೆಗೆ ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಿಗೆ ಉನ್ನತವನ್ನು ತಲುಪಿಸುವಲ್ಲಿ ಯಶಸ್ವಿಯಾಗಿರುವುದು ನಮ್ಮ ಸಂಸ್ಥೆಯ ಹೆಮ್ಮೆ ಎಂದು ಹರ್ಷ ವ್ಯಕ್ತಪಡಿಸಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಶ್ರೀ ಸಿದ್ಧಾರ್ಥ ತಾಂತ್ರಿಕ ಮಹಾವಿದ್ಯಾಲಯದ ಪ್ರಾಂಶುಪಾಲ ಡಾ.ಎಂ.ಎಸ್.ರವಿಪ್ರಕಾಶ್, ಸಂಸ್ಥೆಯ ಕಾರ್ಯ ಚಟುವಟಿಕೆ, ಸೌಲಭ್ಯ, ಅವಕಾಶಗಳು ಮತ್ತು ತಾಂತ್ರಿಕ ಮೂಲ ಸೌಕರ್ಯ ಸೇರಿದಂತೆ ಕ್ಯಾಂಪಸ್ ಕುರಿತು ಮಾಹಿತಿ ನೀಡಿದರು.