ತುಮಕೂರು: ವಿದ್ಯಾರ್ಥಿಗಳ ಭವಿಷ್ಯ ಬದಲಾಯಿಸುವ, ಉದ್ಯೋಗಶೀಲರನ್ನಾಗಿಸುವ ಕೌಶಲ್ಯಗಳನ್ನು ಕಲಿಸಲು ಕರ್ನಾಟಕ ಕೌಶಲ್ಯ ಅಭಿವೃದ್ಧಿ ನಿಗಮವು ಇದೀಗ ಕೌಶಲ್ಯ ಬೆಳವಣಿಗೆಯ ಉತ್ಕೃಷ್ಟ ಯೋಜನೆಯೊಂದಿಗೆ ಶಿಕ್ಷಣ ಸಂಸ್ಥೆಗಳೊoದಿಗೆ ಕೈಜೋಡಿಸುತ್ತಿದೆ ಎಂದು ಕಾಲೇಜು ಶಿಕ್ಷಣ ಇಲಾಖೆಯ ನಿರ್ದೇಶಕಿ ಡಾ. ಶೋಭಾ ಜಿ. ತಿಳಿಸಿದರು.
ಕಾಲೇಜು ಶಿಕ್ಷಣ ಇಲಾಖೆ, ಕರ್ನಾಟಕ ಕೌಶಲ್ಯ ಅಭಿವೃದ್ಧಿ ನಿಗಮವು ತುಮಕೂರು ವಿವಿಯ ಸಹಯೋಗದಲ್ಲಿ ಬುಧವಾರ ಆಯೋಜಿಸಿದ್ದ ‘ಕಲಿಕೆ ಜೊತೆಗೆ ಕೌಶಲ್ಯ’ ಎಂಬ ಕಾರ್ಯಕ್ರಮದಡಿ ಕೈಗಾರಿಕಾ ಆದ್ಯತಾ ಮತ್ತು ಉದ್ಯಮಶೀಲತಾ ತರಬೇತಿಯ ಕಾರ್ಯಕ್ರಮವನ್ನು ಕಾಲೇಜುಗಳಲ್ಲಿ ಅನುಷ್ಠಾನಗೊಳಿಸುವ ಯೋಜನೆ ಕುರಿತ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದರು.
ಪದವಿ ಮುಗಿಸಿ ಹೊರಬರುತ್ತಿರುವ ವಿದ್ಯಾರ್ಥಿಗಳಲ್ಲಿ ಶೇ.72ರಷ್ಟು ಮಂದಿಗೆ ಉದ್ಯೋಗ ಸಿಗುತ್ತಿಲ್ಲ. ಉದ್ಯೋಗ ಬಯಸುವ ಕೌಶಲ್ಯಗಳು ಸ್ನಾತಕ ಪದವಿ ಮುಗಿಸಿರುವ ವಿದ್ಯಾರ್ಥಿಗಳಲ್ಲೂ ಇಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಪ್ರತಿ ಕಾಲೇಜಿನಲ್ಲಿ ಸ್ನಾತಕ ಪದವಿಯ ಅಂತಿಮ ವರ್ಷದಲ್ಲಿರುವ ಆರನೇ ಸೆಮಿಸ್ಟರ್ ವಿದ್ಯಾರ್ಥಿಗಳಿಗೆ ಕೌಶಲ್ಯವರ್ಧಕ ಪತ್ರಿಕೆಯನ್ನು ಆಯ್ಕೆ ಮಾಡಿಕೊಳ್ಳಲು ಕರ್ನಾಟಕ ಕೌಶಲ್ಯ ಅಭಿವೃದ್ಧಿ ನಿಗಮವು ಯೋಜನೆ ರೂಪಿಸಿದ್ದು, ಆಫ್ಲೈನ್ ಮೂಲಕ ತರಬೇತಿ ನೀಡಿ ಮೌಲ್ಯಮಾಪನ ಕಾರ್ಯವನ್ನು ಕರ್ನಾಟಕ ಕೌಶಲ್ಯ ಅಭಿವೃದ್ಧಿ ನಿಗಮವು ಪೂರ್ಣಗೊಳಿಸಿ, ಅಂಕ ಮತ್ತು ಗ್ರೇಡ್ಗಳನ್ನು ನೀಡಲಿದೆ ಎಂದು ತಿಳಿಸಿದರು.
ಕುಲಪತಿ ಪ್ರೊ. ಎಂ. ವೆಂಕಟೇಶ್ವರಲು ಮಾತನಾಡಿ, ಮೊದಲು ಶಿಕ್ಷಕರ ಕೌಶಲ್ಯ ವೃದ್ಧಿಯಾಗಬೇಕು. ಸರ್ಕಾರಗಳು ಕಡಿಮೆ ವೆಚ್ಚದಲ್ಲಿ ಪರಿಚಯಿಸುವ ಕೌಶಲ್ಯ ಯೋಜನೆಗಳನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳಲು ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಬೇಕು ಎಂದರು.
ಕರ್ನಾಟಕ ಕೌಶಲ್ಯ ಅಭಿವೃದ್ಧಿ ನಿಗಮದ ಕಾರ್ಯನಿರ್ವಾಹಕ ನಿರ್ದೇಶಕ ಕೃಷ್ಣಕುಮಾರ್ ಸಿ. ಆರ್. ಮಾತನಾಡಿ, ಪದವಿ ಮುಗಿಸಿ ಹೊರಬರುತ್ತಿರುವ ವಿದ್ಯಾರ್ಥಿಗಳ ಪೈಕಿ 100ರಲ್ಲಿ 22 ಮಂದಿಗಷ್ಟೇ ವಿಶೇಷ ಕೌಶಲ್ಯಗಳಿರುತ್ತವೆ. ಅವರಿಗಷ್ಟೇ ಉದ್ಯೋಗ ಸಿಗುತ್ತಿದೆ ಎಂದರು. ನೂತನ ಕೌಶಲ್ಯ ಯೋಜನೆಯ ಅಧ್ಯಯನ ಮಂಡಳಿ, ವಿಷಯ, ಪಠ್ಯಕ್ರಮದ ವಿವರಗಳನ್ನು ತಿಳಿಸಿಕೊಟ್ಟರು.
ಕೌಶಲ್ಯ ಯೋಜನೆಯ ತುಮಕೂರು ವಿವಿಯ ಸಂಯೋಜಕಿ ಡಾ. ಮಂಗಳಾಗೌರಿ ಎಂ. ಮಾತನಾಡಿ, ಆರು ಕೌಶಲ್ಯ ಆಧಾರಿತ ವಿಷಯಗಳನ್ನು ಪರಿಚಯಿಸಲಾಗುತ್ತಿದೆ. ನಿಯಮಿತ ಪಠ್ಯಕ್ರಮದ ಜೊತೆಯಲ್ಲಿ ಒಂದು ವಿಷಯಕ್ಕೆ ಮೂರು ಕ್ರೆಡಿಟ್ಗಳಂತೆ 100 ಅಂಕಗಳಿರಲಿದೆ. ಕೌಶಲ್ಯ ಯೋಜನೆಯನ್ನು ಕಾರ್ಯರೂಪಕ್ಕೆ ತರಲು ರಾಜ್ಯದಲ್ಲಿ ಆಯ್ಕೆಯಾದ ಒಟ್ಟು ನಾಲ್ಕು ವಿವಿಗಳಲ್ಲಿ ನಮ್ಮದೂ ಒಂದಾಗಿರುವುದು ಸಂತಸ ಸುದ್ದಿ ಎಂದರು.
ವಿವಿ ಹಣಕಾಸು ಅಧಿಕಾರಿ ಪ್ರೊ. ಪರಮಶಿವಯ್ಯ ಪಿ. ಉಪಸ್ಥಿತರಿದ್ದರು.
ವಿದ್ಯಾರ್ಥಿಗಳಲ್ಲಿ ಉದ್ಯೋಗಶೀಲತೆ ಹೆಚ್ಚಿಸಿ: ಡಾ. ಶೋಭಾ ಜಿ.
Leave a comment
Leave a comment