ಡಾ. ಗುರುರಾಜ ಕರ್ಜಗಿ ಕರೆ
ತುಮಕೂರು: ಪ್ರತಿ ಮಗುವಿನಲ್ಲೂ ವಿಭಿನ್ನ ಕೌಶಲಗಳಿರುತ್ತವೆ. ಆತ್ಮವಿಶ್ವಾಸ, ದೃಢ ನಂಬಿಕೆ, ಪ್ರೇರಣಾ ಶಕ್ತಿಯನ್ನು ಮನಸಿನೊಳಗೆ ತುಂಬಿ, ಮುನ್ನಡೆಸುವುದು ಶಿಕ್ಷಕರ ಜವಾಬ್ದಾರಿ ಎಂದು ಬೆಂಗಳೂರಿನ ಅಕಾಡೆಮಿ ಫಾರ್ ಕ್ರಿಯೇಟೀವ್ ಟೀಚಿಂಗ್ ಅಧ್ಯಕ್ಷ ಡಾ. ಗುರುರಾಜ ಕರ್ಜಗಿ ಹೇಳಿದರು.
ತುಮಕೂರು ವಿಶ್ವವಿದ್ಯಾನಿಲಯದ ವಿದ್ಯಾರ್ಥಿ ಕ್ಷೇಮಾಭಿವೃದ್ಧಿ ಘಟಕ, ವಿದ್ಯಾರ್ಥಿ ಕ್ಷೇಮಪಾಲನ ಘಟಕ ಐ.ಕ್ಯೂ.ಎ.ಸಿ. ಮತ್ತು ಯೋಜನೆ, ಮೇಲ್ವಿಚಾರಣೆ ಮತ್ತು ಮೌಲ್ಯಮಾಪನ ಮಂಡಳಿ ಪಿ.ಎಂ.ಇ.ಬಿ. ಘಟಕಗಳ ವತಿಯಿಂದ ಮಂಗಳವಾರ ಆಯೋಜಿಸಿದ್ದ ಪ್ರಾಧ್ಯಾಪಕರೊಂದಿಗಿನ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದರು.
ಮುನ್ನುಗ್ಗುವ ಮನಸ್ಥಿತಿ ಯುವಪೀಳಿಗೆಯಲ್ಲಿ ಕ್ಷೀಣಿಸುತ್ತಿದೆ. ಸವಾಲುಗಳನ್ನು ಎದುರಿಸುವ ಶಕ್ತಿ, ಸಾಮರ್ಥ್ಯ ಕುಂದುತ್ತಿದೆ. ತರಗತಿಗಳಿಗೂ ಮೀರಿ ಬದುಕನ್ನು ಚಾಚಲು, ಮಹತ್ವದ್ದೇನಾದರೂ ಸಾಧಿಸುವ ಮನೋಧರ್ಮವನ್ನು ಶಿಕ್ಷಕರು ಕಲಿಸಬೇಕು. ವಿದ್ಯಾರ್ಥಿಗಳಲ್ಲಿ ಆತ್ಮವಿಶ್ವಾಸ ಮೂಡಿಸುವ ಶಿಕ್ಷಕ, ದೇಶದ ಉನ್ನತಿಗಾಗಿ ಸಮಯ ವ್ಯಯಿಸುವ ವಿದ್ಯಾರ್ಥಿಗಳಿದ್ದಾಗ ಶಾಂತಿಯ ತೋಟ ನೆಲೆಸುತ್ತದೆ ಎಂದರು.
![‘ಮಕ್ಕಳ ಭಿನ್ನ ಕೌಶಲಗಳನ್ನು ಗುರುತಿಸಿ’ 2 IMG 20231124 WA0009](https://targettruth.in/wp-content/uploads/2023/11/IMG-20231124-WA0009-1024x499.jpg)
ನಮ್ಮ ಬದುಕೇ ನಮಗೆ ಪ್ರೇರಣೆಯಾಗಬೇಕು. ಯಾವ ವಿದ್ಯಾರ್ಥಿಯೂ ಪೆದ್ದನಲ್ಲ. ಅವನ ಸಾಮರ್ಥ್ಯ, ಆಯ್ಕೆಗಳಲ್ಲಿ ಎಡವಿರುತ್ತಾನೆ. ಮನಸಿಗೊಪ್ಪುವ ಸರಿ ಮಾರ್ಗವನ್ನು ತೋರಿಸುವ ಕಾರ್ಯ ಶಿಕ್ಷಕನದ್ದಾಗಬೇಕು. ಇಂತಹ ಸಣ್ಣ ಕಾರ್ಯಗಳಿಂದಲೇ ಶಿಕ್ಷಕ ದೊಡ್ಡವನಾಗುವುದು. ನಮ್ಮನ್ನನುಸರಿಸುವ ವಿದ್ಯಾರ್ಥಿಗಳಿರುವಾಗ ನಮ್ಮ ಮಾತು, ನಡೆ ಒಂದೇ ಇರಬೇಕು. ಶಿಕ್ಷಕ ಸದಾ ವಿದ್ಯಾರ್ಥಿಯಾದಾಗ, ತನ್ನ ವೃತ್ತಿಯನ್ನು, ಪಠ್ಯವನ್ನು ಗೌರವಿಸಿದಾಗ, ಕಲಿಯುವ ವಿದ್ಯಾರ್ಥಿಯು ತನ್ನ ಮಗುವೆಂದು ಪಾಠ ಹೇಳಿದಾಗ ಮಾತ್ರ ಶಿಕ್ಷಕನೆನಿಸಿಕೊಳ್ಳುತ್ತಾನೆ ಎಂದು ತಿಳಿಸಿದರು.