ತುಮಕೂರು- ಕಾಂಗ್ರೆಸ್ ಪಕ್ಷ ನೀಡಿರುವ ೫ ಗ್ಯಾರಂಟಿಗಳ ಜಾರಿಯಲ್ಲಿ ಯಾವುದೇ ಗೊಂದಲವಿಲ್ಲ. ತಕ್ಷಣವೇ ಜಾರಿ ಮಾಡುವಂತೆ ಈಗಾಗಲೇ ಸೂಚನೆ ಕೊಡಲಾಗಿದೆ. ಆದಷ್ಟು ಬೇಗ ಭರವಸೆಗಳನ್ನು ಈಡೇರಿರಲಿವೆ ಎಂದು ನೂತನ ಅರಣ್ಯ ಮತ್ತು ಪರಿಸರ ಖಾತೆ ಸಚಿವ ಈಶ್ವರ್ ಖಂಡ್ರೆ ಇಂದಿಲ್ಲಿ ತಿಳಿಸಿದರು.
ಚುನಾವಣಾ ಪೂರ್ವದಲ್ಲಿ ರಾಜ್ಯದ ಜನತೆಗೆ ಕೊಟ್ಟಿರುವ ಭರವಸೆಯನ್ನು ಈಡೇರಿಸುವುದು ನಮ್ಮ ಕರ್ತವ್ಯ. ಹಾಗಾಗಿ ರಾಜ್ಯದ ಜನತೆಗೆ ಕೊಟ್ಟಿರುವ ಎಲ್ಲ ಭರವಸೆಗಳನ್ನು ಅನುಷ್ಠಾನ ಮಾಡುತ್ತೇವೆ ಎಂದರು.
ನಗರದ ಸಿದ್ದಗಂಗಾ ಮಠಕ್ಕೆ ಭೇಟಿ ನೀಡಿ ಲಿಂಗೈಕ್ಯ ಡಾ. ಶ್ರೀ ಶಿವಕುಮಾರ ಸ್ವಾಮೀಜಿಯವರ ಗದ್ದುಗೆ ದರ್ಶನ ಪಡೆದು, ಮಠಾಧ್ಯಕ್ಷರಾದ ಶ್ರೀ ಸಿದ್ದಲಿಂಗ ಸ್ವಾಮೀಜಿಯವರ ಆಶೀರ್ವಾದ ಪಡೆದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾವು ಏನೇನು ಗ್ಯಾರಂಟಿಗಳನ್ನು ಘೋಷಣೆ ಮಾಡಿದ್ದೇವೆಯೋ ಅವುಗಳ ಜಾರಿಯಲ್ಲಿ ಯಾವುದೇ ಗೊಂದಲ ಇಲ್ಲ. ಈಗಾಗಲೇ ಮೊದಲ ಸಚಿವ ಸಂಪುಟ ಸಭೆಯಲ್ಲೇ ತಾತ್ವಿಕ ಒಪ್ಪಿಗೆ ನೀಡಿದ್ದೇವೆ. ೨ನೇ ಅನೌಪಚಾರಿಕ ಸಚಿವ ಸಂಪುಟ ಸಭೆಯಲ್ಲಿ ಅಧಿಕಾರಿಗಳಿಗೂ ಸೂಚನೆ ಕೊಟ್ಟಿದ್ದೇವೆ. ಜೂ. ೧ ರಂದು ಮತ್ತೆ ಸಚಿವ ಸಂಪುಟ ಸಭೆ ನಡೆಯಲಿದ್ದು, ರೂಪುರೇಷೆಗಳು ತಯಾರಾಗುತ್ತಿವೆ. ಅದರ ಪ್ರಕಾರ ಗ್ಯಾರಂಟಿಗಳನ್ನು ಅನುಷ್ಠಾನಕ್ಕೆ ತರುತ್ತೇವೆ ಎಂದು ಹೇಳಿದರು.
ನಾನು ಅರಣ್ಯ ಮತ್ತು ಪರಿಸರ ಇಲಾಖೆ ಸಚಿವನಾಗಿ ಅಧಿಕಾರ ವಹಿಸಿಕೊಂಡಿದ್ದೇನೆ. ಪ್ರಾಮಾಣಿಕತೆಯಿಂದ ಈ ರಾಜ್ಯದ ಜನರ ಸೇವೆ ಮಾಡುವ ಸಂಕಲ್ಪ ಮಾಡಿದ್ದೇನೆ. ನಿನ್ನೆ ಇಲಾಖೆಯ ಅಧಿಕಾರಿಗಳ ಸಭೆ ನಡೆಸಿ ಅಗತ್ಯ ಸಲಹೆ ಸೂಚನೆ ನೀಡಿದ್ದೇನೆ ಎಂದರು.
ಅರಣ್ಯ ಪ್ರದೇಶಗಳಲ್ಲಿ ಅಧಿಕಾರಿಗಳ ಅಥವಾ ವ್ಯವಸ್ಥೆಯ ತಪ್ಪಿನಿಂದಾಗಿ ಬಡ ಜನರು ಮನೆಗಳನ್ನು ಕಟ್ಟಿಕೊಂಡಿದ್ದಾರೆ. ಕೆಲವೆಡೆ ಜನವಸತಿ ಪ್ರದೇಶಗಳಿವೆ. ಆ ಜಾಗಗಳನ್ನು ಸರ್ವೆ ಮಾಡಿದಾಗ ಅರಣ್ಯ ಪ್ರದೇಶ ಎಂದು ಬರುತ್ತಿದೆ. ಅದನ್ನು ಸರಿಪಡಿಸುವ ಕೆಲಸ ಮಾಡಬೇಕಾಗುತ್ತದೆ ಎಂದರು.
ಒಂದು ವೇಳೆ ಯಾರಾದರೂ ಸ್ವಾರ್ಥಕ್ಕಾಗಿ ಅತಿಕ್ರಮಣ ಮಾಡಿರುವುದು ಕಂಡು ಬಂದರೆ ಅದನ್ನು ತೆರವು ಮಾಡುವ ಕೆಲಸ ಮಾಡುತ್ತೇವೆ ಎಂದು ಅವರು ಹೇಳಿದರು.