ಒಳ್ಳೆಯ ಉದ್ದೇಶ, ಸತ್ಯಸಂಧತೆ ಮತ್ತು ಅನಂತ ಪ್ರೇಮ, ಇವು ಜಗತ್ತನ್ನೇ ಗೆಲ್ಲಬಲ್ಲವು. ಈ ಸದ್ಗುಣಗಳನ್ನು ಹೊಂದಿರುವ ವ್ಯಕ್ತಿಗಳು ಹೊಸ ನಾಡನ್ನು ಕಟ್ಟಬಹುದು ಎಂದು ಪಾವಗಡದ ಶ್ರೀ ರಾಮಕೃಷ್ಣ ಸೇವಾಶ್ರಮದ ಅಧ್ಯಕ್ಷ ಸ್ವಾಮಿ ಜಪಾನಂದಜೀ ಮಹಾರಾಜ್ ಜೀ ಹೇಳಿದರು.ತುಮಕೂರು ವಿಶ್ವವಿದ್ಯಾನಿಲಯದ ವಿದ್ಯಾರ್ಥಿ ಕ್ಷೇಮಾಭಿವೃದ್ಧಿ ಘಟಕ, ವಿವಿ ವಿಜ್ಞಾನ ಕಾಲೇಜು ಮತ್ತು ವಿವಿ ಕಲಾ ಕಾಲೇಜಿನ ಸಹಯೋಗದಲ್ಲಿ ಶುಕ್ರವಾರ ಆಯೋಜಿಸಿದ್ದ ‘ಪ್ರೇರಣಾ’ ವಿಶೇಷೋಪನ್ಯಾಸ ಮಾಲೆ ಕಾರ್ಯಕ್ರಮವನ್ನು ಉದ್ಘಾಟಿಸಿ ‘ವಿವೇಕಾನಂದರ ಶೈಕ್ಷಣಿಕ ಚಿಂತನೆ ಮತ್ತು ಇಂದಿನ ಶೈಕ್ಷಣಿಕ ವ್ಯವಸ್ಥೆಯಲ್ಲಿ ಅದರ ಮಹತ್ವ’ ಕುರಿತ ಪ್ರೇರಣಾತ್ಮಕ ಉಪನ್ಯಾಸವನ್ನು ನೀಡಿದರು.ತ್ಯಾಗ-ಸೇವೆಗಳೇ ನಮ್ಮ ಉಸಿರಾಗಲಿ. ಸದೃಢರಾಗಿ ನಕಾರಾತ್ಮಕ ಚಿಂತನೆಗಳನ್ನು ದೂರ ಬಿಸಾಡಿ, ಇದೇ ನಮ್ಮ ನವಯುಗದ ಚಿಹ್ನೆಯಾಗಿರಲಿ. ಭವ್ಯ ಭಾರತವನ್ನು ಕಟ್ಟೋಣ. ‘ಒಳ್ಳೆಯ ಶೀಲವಂತರಾದ, ಬುದ್ಧಿವಂತರಾದ, ತಮ್ಮ ಸರ್ವಸ್ವವನ್ನೂ ತ್ಯಾಗ ಮಾಡುವಂತಹ, ವಿಧೇಯರಾಗಿರುವ, ಭಾವನೆಗಳನ್ನು ಕಾರ್ಯರೂಪಕ್ಕೆ ತರಲು ತಮ್ಮ ಪ್ರಾಣವನ್ನೇ ಅರ್ಪಿಸಬಲ್ಲ ಯುವಕರ ಮೇಲೆ ಭಾರತದ ಭವಿಷ್ಯದ ಹಾರೈಕೆಯಲ್ಲಾ ನಿಂತಿದೆ’ ಎಂದು ವಿವೇಕಾನಂದರು ನಂಬಿದ್ದರು ಎಂದು ತಿಳಿಸಿದರು.