ತುಮಕೂರು ನಗರದ ಪ್ರತಿಷ್ಠಿತ ಬಡಾವಣೆಯಾದ ಜಯನಗರದ ಪ್ರಮುಖ ಸ್ಥಳದಲ್ಲಿ ಗಾರೆ ನರಸಯ್ಯನ ಕಟ್ಟೆ ಇದ್ದು, ಸ್ಥಳೀಯರ ಬೆಳಗಿನ ಹಾಗೂ ಸಂಜೆಯ ವಾಯು ವಿಹಾರಕ್ಕೆ ಹೇಳಿ ಮಾಡಿಸಿದ ಸ್ಥಳವಾಗಿದೆ. ಧರ್ಮಸ್ಥಳದ ಅಭಿವೃದ್ಧಿ ಸಂಸ್ಥೆಯಿಂದ ಹಾಗೂ ತುಮಕೂರು ಮಹಾನಗರ ಪಾಲಿಕೆಯ ಸಹಾಯದಿಂದ ಉತ್ತಮವಾದ ಸ್ಥಳವನ್ನಾಗಿ ಪರಿವರ್ತಿಸಲಾಗಿದೆ. ಅಲ್ಲದೆ ಒಂದು ಬಯಲು ಸಭಾಭವನವನ್ನು ಈ ವಿಭಾಗದ ಪಾಲಿಕೆ ಸದಸ್ಯರಾದ ವಿಷ್ಣುವರ್ಧನ್ ರವರ ಸಹಾಯದಿಂದ ಸಿದ್ಧಪಡಿಸಲಾಗಿದೆ. ಈ ಕಟ್ಟೆಯ ಸುತ್ತಲು ಉತ್ತಮವಾದ ರಸ್ತೆಗಳು ಆಗಿರುವುದು ಹಾಗೂ ಕಟ್ಟೆಯ ರಕ್ಷಣೆಗಾಗಿ ಶ್ರೀ ವಿಷ್ಣು ವರ್ಧನ್ ರವರು ವಿಶೇಷ ಆಸಕ್ತಿ ವಹಿಸಿರುವುದು ಸಂತೋಷದ ವಿಷಯ.
ಜಯನಗರ ಬಡಾವಣೆಯ ವಿವಿಧ ಮನೆಗಳ ಮೇಲ್ಛಾವಣಿ ಹಾಗೂ ರಸ್ತೆಗಳ ಮೇಲೆ ಬೀಳುವ ಮಳೆನೀರಿನ ಮೂಲವೇ ಈ ಕಟ್ಟೆಗೆ ನೀರಿನ ಆಶ್ರಯವಾಗಿದೆ. ದುರದೃಷ್ಠವಶಾತ್ ಕೆಲವು ಮನೆಗಳಿಂದ ಹೊರಚೆಲ್ಲುವ ಕಸ, ಪ್ಲಾಸ್ಟಿಕ್ ವಸ್ತುಗಳು, ಗಾಜಿನ ಬಾಟಲ್ ಗಳು, ಹಳೆಯ ಹಾಸಿಗೆಗಳು ಇತ್ಯಾದಿ ತ್ಯಾಜ್ಯಗಳು ಕೆರೆಗೆ ಸೇರುತ್ತಿರುವುದು ಆತಂಕದ ವಿಷಯ. ಅಲ್ಲದೇ ರಾತ್ರಿಯ ವೇಳೆ ಕೆಲವು ವ್ಯಕ್ತಿಗಳು ಈ ಭಾಗದಲ್ಲಿ ಮಧ್ಯಪಾನ ಮಾಡಿ ಖಾಲಿ ಬಾಟಲ್ ಗಳನ್ನು ಕೆರೆಗೆ ಎಸೆಯುತ್ತಿರುವ ಬಗ್ಗೆ ವರದಿ ಇದೆ. ಗಣೇಶ ಉತ್ಸವದ ಸಂದರ್ಭದಲ್ಲಿ ಸಹಸ್ರಾರು ಗಣಪತಿಯ ವಿಗ್ರಹಗಳನ್ನು ಈ ಕೆರೆಯಲ್ಲಿ ವಿಸರ್ಜನೆ ಮಾಡಲಾಗಿದೆ. ಮರದ ವಸ್ತುಗಳು, ಕಬ್ಬಿಣದ ಹಂದರ, ಹಾರಗಳ ಮಾಲೆಯ ಥರ್ಮೊಕೋಲ್ ದಿಂಡುಗಳು ಸಾಕಷ್ಟು ಸಂಖ್ಯೆಯಲ್ಲಿ ಕೆರೆಗೆ ಸೇರಿ ಮಾಲಿನ್ಯದ ಪ್ರಮಾಣ ಹೆಚ್ಚಾಗುತ್ತಿದೆ.
ಗಾರೆ ನರಸಯ್ಯನ ಕಟ್ಟೆ ಸುರಕ್ಷಿತವಾದ ಸುಂದರವಾದ ವಿಹಾರ ತಾಣವಾಗಿ ಉಳಿಯಬೇಕಾದಲ್ಲಿ ಇಂತಹ ಮಾಲಿನ್ಯ ಉಂಟುಮಾಡುವ ಪ್ರಕ್ರಿಯೆಗಳಿಗೆ ವಿದಾಯ ಹೇಳಬೇಕಿದೆ. ಈ ಹಿನ್ನೆಲೆಯಲ್ಲಿ ಕಟ್ಟೆಯ ಸಮೀಪವಿರುವ
ಶ್ರೀ ಸಪ್ತಗಿರಿ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಹಾಗೂ ಶಿಕ್ಷಕರು “ಸ್ವಚ್ಛ ಅಭಿಯಾನ” ಕೈಗೊಂಡಿದ್ದಾರೆ. ಕಟ್ಟೆಯ ದಡದಲ್ಲಿನ ಪ್ಲಾಸ್ಟಿಕ್ ಚೀಲ, ಡಬ್ಬ, ಬಾಟಲ್, ಹಾರ ಮುಂತಾದವುನ್ನು ಎಚ್ಚರಿಕೆಯಿಂದ ಸಂಗ್ರಹಿಸಿ ನಗರಪಾಲಿಕೆ ಕಸ ವಿಲೇವಾರಿ ವಾಹನಕ್ಕೆ ಹಾಕಿದ್ದಾರೆ. ಈ ಸಮಯದಲ್ಲಿ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದ ಪ್ರಾಂಶುಪಾಲರಾದ ಡಾ. ಎಚ್. ಎಸ್. ನಿಂರಜನಾರಾಧ್ಯರವರು “ಗಾರೆ ನರಸಯ್ಯನ ಕಟ್ಟೆ ರಕ್ಷಣೆ ಜಯನಗರ ನಿವಾಸಿಗಳ ಹೊಣೆ” ಎಂದು ತಿಳಿಸಿದರು. ಅಲ್ಲದೇ ತುಮಕೂರು ಅಭಿವೃದ್ಧಿ ಪ್ರಾಧಿಕಾರ, ತುಮಕೂರು ಮಹಾನಗರ ಪಾಲಿಕೆ ಹಾಗೂ ಕೆರೆಗಳ ಸಂರಕ್ಷಣಾ ಇಲಾಖೆಗಳು ಗಮನಹರಿಸಿ ಗಾರೆ ನರಸಯ್ಯನ ಕಟ್ಟೆಯನ್ನು ಸಂಪೂರ್ಣವಾಗಿ ಸ್ವಚ್ಛಗೊಳಿಸಿ ಸುಂದರ ಜಲ ತಾಣವನ್ನಾಗಿ ಪರಿವರ್ತಿಸಬೇಕೆಂದು ತಿಳಿಸಿದರು. ಸಾಕಷ್ಟು ಪಕ್ಷಿಗಳು, ಚಿಟ್ಟೆಗಳು ಈಗಾಗಲೇ ವಾಸವಾಗುತ್ತಿದ್ದು, ಅವುಗಳ ಸಂಖ್ಯೆ ಹೆಚ್ಚುವಂತೆ ಸದಾ ಹೂ ಬಿಡುವಂತಹ ಗಿಡ ಬಳ್ಳಿಗಳನ್ನು ಸುಗಂಧಕರ ಪರಿಮಳ ಬೀರುವ ಗಿಡ ಮರಗಳನ್ನು ಬೆಳೆಸಲು ಅರಣ್ಯ ಇಲಾಖೆ ಪ್ರಯತ್ನ ಪಡಬೇಕೆಂದು ಹೇಳಿದರು. ಈ ದಿಶೆಯಲ್ಲಿ ಜಯನಗರ ನಿವಾಸಿಗಳು ಪ್ರಮುಖ ಪಾತ್ರ ವಹಿಸಿದಲ್ಲಿ ಗಾರೆ ನರಸಯ್ಯನ ಕಟ್ಟೆ ಎಲ್ಲರಿಗೆ ತಂಪು ನೀಡುವ, ಕಣ್ಣಿಗೆ ಆನಂದ ಉಂಟು ಮಾಡುವ ಹಾಗೂ ದೇಹ ಮತ್ತು ಮನಸ್ಸುಗಳ ಆರೋಗ್ಯಕ್ಕೆ ಪ್ರೇರಣೆ, ಪ್ರೋತ್ಸಾಹ ನೀಡುವ ಪ್ರಕೃತಿಯ ಮಡಿಲಾಗುವುದು ಎಂದು ತಿಳಿಸಿದರು. ಶಿಕ್ಷಕರಾದ ಪ್ರಕಾಶ್, ಜಿಲಾನಿ, ಆಡಳಿತಾಧಿಕಾರಿ ಮೋಹನ್ ರವರು ವಿದ್ಯಾರ್ಥಿಗಳ ಜೊತೆಗೂಡಿ ಸ್ವಚ್ಛತೆಯಲ್ಲಿ ಭಾಗವಹಿಸಿದರು. ಮುಂದಿನ ವರ್ಷದಿಂದ ಗಣಪತಿ ಹಾಗೂ ಇತರೆ ದೇವರುಗಳನ್ನು ವಿಸರ್ಜನೆ ಮಾಡಲು ಪ್ರತ್ಯೇಕ ಕೃತಕ ಕಲ್ಯಾಣಿ ನಿರ್ಮಿಸಿದರೆ ಹಾಗೂ ಅದರಲ್ಲಿಯೇ ಕಡ್ಡಾಯವಾಗಿ ವಿಸರ್ಜನೆ ಮಾಡುವಂತೆ ಎಚ್ಚರ ವಹಿಸಿದಲ್ಲಿ ಮಾಲಿನ್ಯವನ್ನು ತಡೆಗಟ್ಟಬಹುದೆಂದು ವಿದ್ಯಾರ್ಥಿಗಳು ಅಭಿಪ್ರಾಯಪಟ್ಟರು.