ತುಮಕೂರು(ಕ.ವಾ.)ಅ.೨೬: ರೈತರು ಏಕ ಬೆಳೆ ಪದ್ದತಿಗೆ ಮಾರು ಹೋಗದೆ ಕೃಷಿಯಲ್ಲಿ ಬಹು ಬೆಳೆ ಪದ್ದತಿಯ ಜೊತೆಗೆ, ಹೈನುಗಾರಿಕೆ ಮತ್ತು ರೇಷ್ಮೆಯನ್ನು ಅಳವಡಿಸಿಕೊಂಡರೆ ಹೆಚ್ಚಿನ ಲಾಭ ಗಳಿಸಬಹುದು ಎಂದು ಜಿಲ್ಲಾ ಪಂಚಾಯಿತಿ ಸಿಇಓ ಜಿ.ಪ್ರಭು ತಿಳಿಸಿದ್ದಾರೆ.
ನಗರದ ಅಮರಜೋತಿ ನಗರದ ರೇಷ್ಮೆ ಇಲಾಖೆಯ ಕಚೇರಿಯಲ್ಲಿ ರೇಷ್ಮೆ ಇಲಾಖೆ, ರೇಷ್ಮೆ ಸಂಶೋಧನಾ ಸಂಸ್ಥೆಯ ಸಹಯೋಗದಲ್ಲಿ ಆಯೋಜಿಸಿದ್ದ ಪ್ರಧಾನ ಮಂತ್ರಿಗಳ ಕೃಷಿ ಸಿಂಚಯ್ ಯೋಜನೆಯಡಿ ರೇಷ್ಮೆ ತಾಕುಗಳಿಗೆ ಹನಿನೀರಾವರಿ ಅಳವಡಿಸುವುದರ ಕುರಿತ ಅರಿವು ಮೂಡಿಸುವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಕೃಷಿಯೊಂದಿಗೆ ತೋಟಗಾರಿಕೆ, ಹೈನುಗಾರಿಕೆ ಇದ್ದರೆ ಮಾತ್ರ ಇಂದು ಕೃಷಿ ಲಾಭದಾಯಕವಾಗಿ ಪರಿಣಮಿಸಲಿದೆ ಎಂದರು.
ತುಮಕೂರು ಬಯಲು ಸೀಮೆಯ ಪ್ರದೇಶ. ಯಾವುದೇ ಶಾಶ್ವತ ನೀರಾವರಿ ಯೋಜನೆಗಳಿಲ್ಲದಿದ್ದರೂ ಜನರು ಹೆಚ್ಚು ಆದಾಯ ಎಂಬ ಕಾರಣಕ್ಕೆ ಅಡಿಕೆ ಬೆಳೆಗೆ ಹೆಚ್ಚು ಒತ್ತು ನೀಡುತ್ತಿದ್ದಾರೆ. ಇದು ಮುಂದೊAದು ದಿನ ಅಪಾಯ ತಂದೊಡ್ಡಲಿದೆ. ಅಡಿಕೆ ನಮ್ಮ ಭೂ ಪ್ರದೇಶದಲ್ಲಿ ಬೆಳೆಯುವ ಬೆಳೆಯಲ್ಲ. ಹಾಗಾಗಿ ಬಯಲು ಸೀಮೆಯಲ್ಲಿ ಬೆಳೆಯಬಹುದಾದ ಆಹಾರ ಬೆಳೆಗಳ ಜೊತೆಗೆ, ತೋಟಗಾರಿಕೆಯಲ್ಲಿ ಡ್ರಾಗನ್ ಪ್ರೂಟ್, ಕಿರುದಾನ್ಯಗಳನ್ನು ಬೆಳೆದು, ಲಾಭ ಗಳಿಸಬಹುದು. ಬಹು ಬೆಳೆ ಪದ್ದತಿಯಲ್ಲಿ ಒಂದು ಬೆಳೆ ಕೈಕೊಟ್ಟರೆ ಮತ್ತೊಂದು ಬೆಳೆ ಕೈ ಹಿಡಿಯಲಿದೆ. ಹಾಗಾಗಿ ರೈತರು, ಅದರಲ್ಲಿಯೂ ಯುವ ರೈತರು ಈ ನಿಟ್ಟಿನಲ್ಲಿ ಆಲೋಚಿಸಬೇಕು ಎಂದು ಸಲಹೆ ನೀಡಿದರು.
ರಾಜ್ಯ ಮತ್ತು ಕೇಂದ್ರ ಸರಕಾರ ಹನಿ ನೀರಾವರಿ ಶೇ.೭೦ ರಿಂದ ೯೦ರವರೆಗೆ ಸಬ್ಸಿಡಿಯನ್ನು ಘೋಷಿಸಿದೆ. ಹಾಯಿ ನೀರಾವರಿ ಪದ್ದತಿಯಿಂದ ನೀರು ಪೋಲಾಗುವ ಜೊತೆಗೆ, ನಾವು ಬಳಸುವ ಗೊಬ್ಬರ, ಲಘು ಪೋಷಕಾಂಶಗಳು ಸಹ ಸಮರ್ಪಕವಾಗಿ ಗಿಡಗಳಿಗೆ ದೊರೆಯವುದಿಲ್ಲ. ಆದರೆ ಹನಿ ನೀರಾವರಿಯಿಂದ ಈ ತೊಂದರೆಯಿಲ್ಲ. ಇದನ್ನು ರೈತರು ಅರ್ಥ ಮಾಡಿಕೊಂಡು ಹನಿ ನೀರಾವರಿ ಪದ್ದತಿಯನ್ನು ರೇಷ್ಮೆ ಬೆಳೆಗೆ ಅಳವಡಿಸಿಕೊಳ್ಳುವಂತೆ ಮನವಿ ಮಾಡಿದರು.
ರೇಷ್ಮೆ ಇಲಾಖೆಯ ಉಪನಿರ್ದೇಶಕ ಡಾ.ವೈ.ಕೆ.ಬಾಲಕೃಷ್ಣಪ್ಪ ಮಾತನಾಡಿ, ಜಿಲ್ಲೆಯಲ್ಲಿ ಹಿಂಗಾರು ಮತ್ತು ಮುಂಗಾರು ಎರಡು ಮಳೆಗಳು ಕೈಕೊಟ್ಟಿರುವುದರಿಂದ ಬೆಳೆಗಳನ್ನು ಉಳಿಸಿಕೊಳ್ಳುವುದು ಕಷ್ಟವಾಗಿದೆ. ಹಾಗಾಗಿ ರೇಷ್ಮೆ ಬೆಳೆಗಾರರು ಹನಿ ನೀರಾವರಿ ಪದ್ದತಿಯನ್ನು ಅಳವಡಿಸಿಕೊಂಡರೆ ಬರದಲ್ಲಿಯೂ ಸಂವೃದ್ದ ಹಿಪ್ಪುನೇರಳೆ ಸೊಪ್ಪು ಪಡೆಯಬಹುದು. ಬರಗಾಲ ರೇಷ್ಮೆ ಬೆಳೆಗೆ ಹೆಚ್ಚು ಸೂಕ್ತ ಕಾಲ. ಇದರ ಸದುಪಯೋಗ ಪಡೆದುಕೊಳ್ಳಬೇಕೆಂದರು.
ಜಿಲ್ಲೆಯ ಸುಮಾರು ೬೩೦೦ ಹೆಕ್ಟೇರ್ ಪ್ರದೇಶದಲ್ಲಿ ೧೧ ಸಾವಿರ ರೈತರು ರೇಷ್ಮೆ ಕೃಷಿ ನಡೆಸುತ್ತಿದ್ದು, ಕೇಂದ್ರ ಸರಕಾರದ ಪ್ರಧಾನ ಮಂತ್ರಿ ಕೃಷಿ ಸಿಂಚಯ್ ಯೋಜನೆಯಡಿ ಹನಿ ನೀರಾವರಿ ಅಳವಡಿಸಿಕೊಂಡಿರುವವರ ಸಂಖ್ಯೆ ಕೇವಲ ೨೩೦೦ ಜನ ಮಾತ್ರ. ಜಿಲ್ಲೆಗೆ ಶೇ.೧೦೦ರಷ್ಟು ಬೈವೊಲ್ಟಿನ್ ರೇಷ್ಮೆ ಬೆಳೆ ಪ್ರದೇಶವಾಗಬೇಕೆಂಬ ಸರಕಾರದ ಇಚ್ಚೆ ಪೂರ್ಣಗೊಳ್ಳಬೇಕಾದರೆ ಎಲ್ಲರೂ ಹನಿ ನೀರಾವರಿ ಅಳವಡಿಸಿಕೊಂಡು ಬೈವೊಲ್ಟಿನ್ ಗೂಡು ಬೆಳೆದರೆ ಹೆಚ್ಚಿನ ಸಂಪಾದನೆಯ ಜೊತೆಗೆ, ಕೃಷಿಯಲ್ಲಿ ಉಳಿಯಬಹುದು ಎಂದು ತಿಳಿಸಿದರು.
ವೇದಿಕೆಯಲ್ಲಿ ಸಂಪನ್ಮೂಲ ವ್ಯಕ್ತಿಗಳಾದ ಕೆವಿಕೆ ಹಿರೇಹಳ್ಳಿ ಕೃಷಿ ವಿಜ್ಞಾನಿ ಡಾ.ಪ್ರಶಾಂತ್, ಕೊಡತಿ ಆರ್.ಎಸ್.ಆರ್.ಎಸ್ನ ಡಾ.ಕುಲಕರ್ಣಿ, ರೇಷ್ಮೆ ಸಹಾಯಕ ನಿರ್ದೇಶಕರಾದ ಚೇತನ್, ಜಿಲ್ಲೆಯ ವಿವಿಧ ತಾಲೂಕುಗಳ ರೇಷ್ಮೆ ಇಲಾಖೆ ಸಹಾಯಕ ನಿರ್ದೇಶಕರುಗಳಾದ ಎ.ಸಿ.ನಾಗೇಂದ್ರ, ಬೊಮ್ಮಯ್ಯ, ಆರ್.ರಂಗನಾಥ್, ನಾಗರಾಜು, ಮುರುಳೀಧರ್, ರಾಜ್ಗೋಪಾಲ್ ಮತ್ತಿತರರು ಉಪಸ್ಥಿತರಿದ್ದರು. ನೂರಾರು ರೇಷ್ಮೆ ಬೆಳೆಗಾರರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು