ಹಸರೀಕರಣಕ್ಕೆ ಪ್ರತಿಯೊಬ್ಬ ನಾಗರೀಕರೂ ಮುಂದಾಗಬೇಕಿದೆ ಎಂದು ಶಾಸಕ ಜಿ.ಬಿ.ಜ್ಯೋತಿಗಣೇಶ್ ಸಲಹೆ ನೀಡಿದರು. ನಗರದ ಅಮಾನಿಕೆರೆ ಮುಂಭಾಗ ಭಾವಸಾರ ಬ್ರಿಗೇಡ್, ಆರ್ ಆರ್ ಫಿಟ್ನೆಸ್ ಹಾಗೂ ಅರಣ್ಯ ಇಲಾಖೆ ಸಹಯೋಗದೊಂದಿಗೆ ಆಯೋಜಿಸಿದ್ದ ವನಮಹೋತ್ಸವ ಕಾರ್ಯಕ್ರಮವನ್ನು ಗಿಡನೆಡುವ ಮೂಲಕ ಉದ್ಘಾಟಿಸಿ ಮಾತನಾಡಿ, ಪರಿಸರ ರಕ್ಷಣೆ ಮಾಡುವುದು ಕೇವಲ ಸರ್ಕಾರದ ಕೆಲಸ ಮಾತ್ರವಲ್ಲ, ಅದು ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ. ತುಮಕೂರು ಮಹಾನಗರ ಪಾಲಿಕೆ, ಸ್ಮಾರ್ಟ್ ಸಿಟಿ ಹಾಗೂ ಎನ್ಜಿಓಗಳ ಮೂಲಕ ತುಮಕೂರು ನಗರವನ್ನು ಹಸರೀಕರಣ ಮಾಡುವ ಯೋಜನೆಯಿದೆ. ಅರಣ್ಯ ಇಲಾಖೆ ಸಾರ್ವಜನಿಕರಿಗೆ ಹಾಗೂ ಎನ್ಜಿಒ ಗಳಿಸಿ ಸಸಿಗಳನ್ನು ಕಡಿಮೆ ದರದಲ್ಲಿ ನೀಡುವ ಮೂಲಕ ಹಸಿರೀಕರಣಕ್ಕೆ ಮುಂದಾಗಬೇಕಿದೆ, ಈ ಬಗ್ಗೆ ಈಗಾಗಲೇ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದರು.
ಭಾವಸಾರ ಬ್ರಿಗೇಡ್ ಹಾಗೂ ಇತರ ಸ್ನೇಹಿತರು ಜೊತೆಗೂಡಿ ಗಿಡನೆಡುವ ಕಾರ್ಯಕ್ಕೆ ಮುಂದಾಗಿರುವುದು ಉತ್ತಮವಾದ ಯೋಜನೆಯಾಗಿದ್ದು ಮುಂದೆಯು ಸಹ ಈ ರೀತಿಯ ಕೆಲಸಗಳು ನಿರಂತರವಾಗಿ ನಡೆಯಲಿ ಎಂದು ಮುಕ್ತಕಂಠದಿಂದ ಶ್ಲಾಘಿಸಿದರು. ಆರ್ಎಫ್ಒ ಪವಿತ್ರ ಮಾತನಾಡಿ, ಸಾರ್ವಜನಿಕರು ಅರಣ್ಯ ಇಲಾಖೆಯೊಂದಿಗೆ ಸೇರಿ ಪರಿಸರ ಸಂರಕ್ಷಣೆಗೆ ಕೈಜೋಡಿಸಬೇಕಿದೆ. ಪ್ರತಿಯೊಬ್ಬರೂ ಒಂದೊಂದು ಗಿಡನೆಟ್ಟು ಪೋಷಿಸುವ ಮೂಲಕ ಸಮಾಜಕ್ಕೆ ಕೊಡುಗೆ ನೀಡಬೇಕು ಎಂದರಲ್ಲದೆ, ಅರಣ್ಯ ಇಲಾಖೆಯಿಂದ ಕಡಿಮೆ ದರದಲ್ಲಿ ಗಿಡಗಳನ್ನು ನೀಡಲಾಗುತ್ತಿದ್ದು ಸಾರ್ವಜನಿಕರು ಇದರ ಸದುಪಯೋಗಪಡಿಸಿಕೊಳ್ಳಬೇಕಿದೆ ಎಂದರು. ಪ್ರಜಾಪ್ರಗತಿ ಸಂಪಾದಕ ಎಸ್. ನಾಗಣ್ಣ ಮಾತನಾಡಿ, ಆಧುನಿಕ ಜಗತ್ತಿನಲ್ಲಿ ಕಾಂಕ್ರೀಟೀಕರಣ ಹೆಚ್ಚಾಗಿದ್ದು ಹಸರೀಕರಣ ಮಾಯವಾಗುತ್ತಿದೆ. ರಸ್ತೆಗಳ ಇಕ್ಕೆಲಗಳಲ್ಲಿ ಗಿಡಗಳನ್ನು ಬೆಳೆಸುವುದರಿಂದ ನಗರವು ಸುಂದರವಾಗಿ ಕಾಣುವುದರ ಜೊತೆಗೆ ತಂಪಾದ ವಾತಾವರಣ ಸೃಷ್ಟಿಯಾಗುತ್ತದೆ. ಆದರೆ ಜನರು ಹಬ್ಬ ಹರಿದಿನ ಮುಂತಾದ ಸಮಯದಲ್ಲಿ ರೆಂಬೆ, ಕೊಂಬೆಗಳನ್ನು ಕಡಿದು ಹಾಕುತ್ತಿದ್ದಾರೆ ಎಂದು ಕಳವಳ ವ್ಯಕ್ತಪಡಿಸಿದರು. ವನಮಹೋತ್ಸವ ಕೇವಲ ಪ್ರಚಾರಕ್ಕಾಗಿ ಮಾತ್ರವಲ್ಲದೆ, ಕಾಳಜಿಯೊಂದಿಗೆ ನಡೆಸಬೇಕು. ಗಿಡಗಳನ್ನು ನೆಟ್ಟು ಮರೆಯುವ ಬದಲು ಅದಕ್ಕೆ ಸೂಕ್ತ ರಕ್ಷಣೆ ನೀಡುವ ಮೂಲಕ ಅದರ ಬೆಳೆವಣಿಗೆಗೆ ಮುಂದಾಗಬೇಕು ಎಂದರು. ಕಾರ್ಯಕ್ರಮದಲ್ಲಿ ಅರಣ್ಯ ಇಲಾಖೆಯ ಸಿಬ್ಬಂದಿ ಪ್ರಕಾಶ್, ರಾಘವೇಂದ್ರ, ಎಐಬಿಕೆಎಂ ಜಿಲ್ಲಾಧ್ಯಕ್ಷ ಪವನ್ಕುಮಾರ್ ಪಿಸ್ಸೆ, ಬ್ರಿಗೇಡ್ನ ಪದಾಧಿಕಾರಿಗಳು, ಆರ್ಆರ್ ಫಿಟ್ನೆಸ್ನ ಯುವಕರು ಹಾಜರಿದ್ದರು.
ಹಸರೀಕರಣಕ್ಕೆ ಪ್ರತಿಯೊಬ್ಬ ನಾಗರೀಕರೂ ಮುಂದಾಗಬೇಕು

Leave a comment
Leave a comment