ಸಿರಾ ತಾಲ್ಲೂಕಿನ ಚಿಗುರು ಯುವಜನ ಸಂಘವು ನಡೆಸುತ್ತಿರುವ “ಹಸಿರು ದಾಸೋಹ” ಕಾರ್ಯಕ್ರಮದಡಿ ಸೂರೇನಹಳ್ಳಿ ಗ್ರಾಮದ ಯುವರೈತರಾದ ರಾಮುರವರಿಗೆ ಸಂಘದ ಸದಸ್ಯರಾದ ಮಧು ಎನ್ ಆರ್ ರವರು ಹಣ್ಣಿನ ಗಿಡವನ್ನು ನೀಡುವ ಮೂಲಕ ಗಿಡ ನೆಡುವ ಕಾರ್ಯಕ್ರಮಕ್ಕೆ ಚಾಲನೆಯನ್ನು ನೀಡಿದರು.
ಕಾರ್ಯಕ್ರಮದಲ್ಲಿ ಚಿಗುರು ಯುವಜನ ಸಂಘದ ಅಧ್ಯಕ್ಷರಾದ ಮಂಜುನಾಥ್ಅಮಲಗೊAದಿ ರವರು ಮಾತನಾಡುತ್ತಾ, ಆಧುನಿಕ ಬದುಕಿನ ಒತ್ತಡದಲ್ಲಿ ಮಾನವರೆಲ್ಲರೂ ಬದುಕುತ್ತಿದ್ದಾರೆ. ಈ ಒತ್ತಡದ ಬದುಕಿನ ನಡುವೆಯೂ ವಿರಾಮಕ್ಕಾಗಿ ಪರಿಸರವನ್ನು ಅವಲಂಬಿಸಬೇಕಾಗಿದೆ. ಅನಾರೋಗ್ಯ ವ್ಯಕ್ತಿ ಉತ್ತಮ ಗಾಳಿ, ನೀರು, ಉತ್ತಮ ವಾತಾವರಣವಿದ್ದಲ್ಲಿ ಸ್ವಲ್ಪ ದಿನಗಳ ಕಾಲ ನೆಲೆಸಿದರೆ ಆ ವ್ಯಕ್ತಿ ಬೇಗ ಗುಣಮುಖರಾಗುವ ಸಾಧ್ಯತೆಗಳು ಹೆಚ್ಚಿರುವುದು ಅನೇಕ ಅಧ್ಯಯನಗಳಿಂದ ಸಾಬೀತಾಗಿದೆ. ಮಾನವನು ಪರಿಸರದಿಂದ ದೂರವಿದ್ದು ಬದುಕಲು ಅಸಾಧ್ಯವೆಂಬದನ್ನು ಇತ್ತೀಚಿನ ಜೀವನಶೈಲಿಗಳು ಅರ್ಥ ಮಾಡಿಸುತ್ತಿವೆ. ಪ್ರಸ್ತುತ ಪೀಳಿಗೆಗಲ್ಲದೆ ಉತ್ತಮ ಪರಿಸರವನ್ನು ಮುಂದಿನ ಪೀಳಿಗೆಗೂ ಸಹ ಉಳಿಸಬೇಕಾದದ್ದು ನಮ್ಮೆಲ್ಲರ ಕರ್ತವ್ಯವಾಗಿದೆ. ವಿನಾಶದ ಅಂಚಿಗೆದೂಡಿದ ಪರಿಸರವನ್ನು ಸುಸ್ಥಿತಿಗೆ ತರಲು ಹಲವು ಪರಿಸರಾಸಕ್ತರು ಶ್ರಮವಹಿಸಿ ಪ್ರಯತ್ನಿಸುತ್ತಿದ್ದಾರೆ. ಅದರ ಜೊತೆಗೆ ಹಸಿರು ದಾಸೋಹವು ಸಹ ಒಂದು ರೀತಿಯ ಪರಿಸರ ಸಂರಕ್ಷಣೆಯ ಮಾರ್ಗವಾಗಿದೆ. ಪರಿಸರದಲ್ಲಿ ಹಸಿರೀಕರಣವನ್ನು ಹೆಚ್ಚಿಸುವ ಸಲುವಾಗಿ ಯುವ ರೈತರೊಂದಿಗೆ ಕೈಜೋಡಿಸಿ ಕಾರ್ಯನಿರ್ವಹಿಸಲಾಗುತ್ತಿದೆ. ಆಸಕ್ತ ಯುವರೈತರ ಹೊಲಗಳಲ್ಲಿ ಪರಿಸರಾಸಕ್ತರಿಂದ ಧನಸಹಾಯವನ್ನು ಪಡೆದು ಗಿಡಗಳನ್ನು ನೆಡಲಾಗುತ್ತಿದೆ. ಇದರಿಂದ ಮಕ್ಕಳಿಗೆ, ಮಹಿಳೆಯರಿಗೆ ಪೌಷ್ಟಿಕಾಂಶಭರಿತ ಆಹಾರಗಳನ್ನು ಒದಗಿಸಲು ಸಾಧ್ಯವಾಗುತ್ತದೆ. ಮಕ್ಕಳು ತಮ್ಮ ತೋಟಗಳಿಗೆ, ಹೊಲಗಳಿಗೆ ಹೋಗಲು ಇಷ್ಟಪಡದಿರುವ ಸಂದರ್ಭವು ಪ್ರಸ್ತುತವಾಗಿದ್ದು. ಹಣ್ಣಿನ ಗಿಡಗಳನ್ನು ನೆಡುವುದರಿಂದ ಮಕ್ಕಳ ಭೇಟಿಯು ಹೆಚ್ಚಾಗಿ ಪರಿಸರ ಮತ್ತು ಮಕ್ಕಳ ನಡುವೆ ಒಂದು ಬಾಂಧವ್ಯವನ್ನು ಬೆಸೆಯಲು ಸಹಕಾರಿಯಾಗುತ್ತದೆ. ಇದರ ಜೊತೆ ಪರಿಸರದಲ್ಲಿರುವ ಪಕ್ಷಿಗಳಿಗೂ ಸಹ ಆಹಾರ ಮತ್ತು ವಸತಿಯನ್ನು ಒದಗಿಸಿದಂತಾಗುತ್ತದೆ ಈ ಮೂಲಕ ಬೀಜಪ್ರಸರಣ ಆಗಲು ಸಹ ಸಾಧ್ಯವಾಗುತ್ತದೆ ಎಂದು ತಿಳಿಸಿದರು.