ತುಮಕೂರು(ಕ.ವಾ.)ಜು.೨೬: ರಾಜ್ಯ ಸರ್ಕಾರ ಜಾರಿಗೊಳಿಸುವ ಯೋಜನೆಗಳನ್ನು ಅನುಷ್ಠಾನಗೊಳಿಸಿ ಅಂತಿಮ ರೂಪ ನೀಡುವುದು ವಿವಿಧ ಇಲಾಖೆಗಳ ಇಂಜಿನಿಯರ್ಗಳ ಆದ್ಯ ಕರ್ತವ್ಯವಾಗಿದ್ದು, ಜವಾಬ್ದಾರಿ ಸ್ಥಾನದಲ್ಲಿರುವ ಇಂಜಿನಿಯರ್ಗಳು ಈ ನಿಟ್ಟಿನಲ್ಲಿ ಪ್ರಾಮಾಣಿಕವಾಗಿ ಕೆಲಸ ನಿರ್ವಹಿಸುವಂತೆ ಜಿಲ್ಲಾ ಪಂಚಾಯತ್ ಮುಖ್ಯಕಾರ್ಯನಿರ್ವಾಹಣಾ ಅಧಿಕಾರಿ ಜಿ.ಪ್ರಭು ಸೂಚಿಸಿದರು. ಜಿಲ್ಲಾ ಪಂಚಾಯತ್ ವಿಡಿಯೋ ಕಾನ್ಫರೆನ್ಸ್ ಸಭಾಂಗಣದಲ್ಲಿAದು ಜಲಜೀವನ ಮಿಷನ್ (ಜೆಜೆಎಂ) ಯೋಜನೆಯ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಜೆಜೆಎಂ ಯೋಜನೆಯಡಿಯಲ್ಲಿ ಬಾಕಿ ಉಳಿದಿರುವ ಕಾಮಗಾರಿಗಳ ಪ್ರಗತಿಯು ಆಗಸ್ಟ್ ೩೧ರೊಳಗಾಗಿ ಶೇಕಡಾ ೯೫ರಷ್ಟು ಪೂರ್ಣಗೊಳ್ಳಬೇಕು. ತಾಲ್ಲೂಕು ಪಂಚಾಯತಿ ಕಾರ್ಯನಿರ್ವಹಣಾಧಿಕಾರಿಗಳು ಕಾಮಗಾರಿಗಳನ್ನು ಪರಿಶೀಲಿಸಿ ಪ್ರಮಾಣಿಕರಿಸಿದ ನಂತರ ಕಾಮಗಾರಿ ಘೋಷಣೆ ಮಾಡಿ ಹಸ್ತಾಂತರಿಸಬೇಕು ಎಂದು ಹೇಳಿದರು. ಜೆಜೆಎಂ ಯೋಜನೆಯನ್ನು ಅನುಷ್ಠಾನ ಮಾಡಲು ತಾಂತ್ರಿಕ ಸಮಸ್ಯೆ, ಗ್ರಾಮಸ್ಥರ ವಿರೋಧ ಹಾಗೂ ಏಜೆನ್ಸಿಗಳ ತೊಂದರೆ ಇರುವ ಗ್ರಾಮಗಳ ಪಟ್ಟಿ ಮಾಡಿಕೊಟ್ಟರೆ ಆ ಗ್ರಾಮಗಳಿಗೆ ಇಓ ಮತ್ತು ಪಿಡಿಓ ಅವರನ್ನು ಕಳುಹಿಸಿ ಸಮಸ್ಯೆ ಬಗೆಹರಿಸುವಂತೆ ನಿರ್ದೇಶನ ನೀಡಲಾಗುವುದು ಹಾಗೂ ಅವಶ್ಯವಿದ್ದಲ್ಲಿ ಸ್ವತಃ ತಾವೇ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸುವುದಾಗಿ ತಿಳಿಸಿದರು.