ತುಮಕೂರು- ಮುಸ್ಲಿಂ ಬಾಂಧವರ ಪವಿತ್ರ ಹಬ್ಬಗಳಲ್ಲಿ ಒಂದಾದ ಈದ್ ಉಲ್ ಫಿತರ್ ರಂಜಾನ್ ಹಬ್ಬವನ್ನು ನಗರ ಸೇರಿದಂತೆ ಜಿಲ್ಲೆಯಾದ್ಯಂತ ಸಡಗರ ಸಂಭ್ರಮದಿoದ ಆಚರಿಸಲಾಯಿತು.
ಜಿಲ್ಲೆಯಾದ್ಯಂತ ರಂಜಾನ್ ಪ್ರಯುಕ್ತ ಮಸೀದಿಗಳು, ದರ್ಗಾಗಳನ್ನು ವಿದ್ಯುತ್ ದೀಪಾಲಂಕರಾದಿoದ ವಿಶೇಷವಾಗಿ ಸಿಂಗರಿಸಲಾಗಿತ್ತು.
ನಗರ, ಪಟ್ಟಣ ಹಾಗೂ ಗ್ರಾಮೀಣ ಪ್ರದೇಶಗಳಲ್ಲೂ ಸಹ ಮುಸ್ಲಿಂ ಬಾಂಧವರು ರಂಜಾನ್ ಹಬ್ಬವನ್ನು ಅತ್ಯಂತ ಶ್ರದ್ಧಾ ಭಕ್ತಿಯಿಂದ ಅದ್ದೂರಿಯಾಗಿ ಆಚರಿಸಿದರು.
ನಗರದ ಕುಣಿಗಲ್ ರಸ್ತೆಯಲ್ಲಿರುವ ಈದ್ಗಾ ಮೈದಾನದಲ್ಲಿ ಜಮಾಯಿಸಿದ ಸಾವಿರಾರು ಮುಸ್ಲಿಂ ಬಾಂಧವರು ಈ ಬಾರಿ ಬಿಸಿಲಿನ ತಾಪ ಹೆಚ್ಚಾಗಿರುವುದರಿಂದ ಬೆಳಿಗ್ಗೆ 10ಕ್ಕೆ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿ, ಪರಸ್ಪರ ಹಬ್ಬದ ಶುಭಾಶಯವನ್ನು ವಿನಿಮಯ ಮಾಡಿಕೊಂಡರು.
ಹೊಸ ಉಡುಪುಗಳನ್ನು ಧರಿಸಿ, ಒಬ್ಬರಿಗೊಬ್ಬರು ಆಲಿಂಗನ ಮಾಡಿ ಹಬ್ಬದ ಶುಭಾಶಯ ಕೋರಿದ್ದು ವಿಶೇಷವಾಗಿತ್ತು.
ರಂಜಾನ್ ಹಬ್ಬದ ಸಂಭ್ರಮ ಹಿಂದೂ ಮತ್ತು ಮುಸ್ಲಿಂ ಬಾಂಧವರ ಭಾವೈಕ್ಯತೆಯ ಸಂಕೇತವಾಗಿ ಮಾರ್ಪಟ್ಟಿದ್ದು, ಮುಸ್ಲಿಂ ಬಾಂಧವರಿಗೆ ಹಿಂದೂ ಸಮುದಾಯದವರು ಸಹ ಹಬ್ಬದ ಶುಭಾಶಯ ಕೋರುವ ಮೂಲಕ ಭಾವೈಕ್ಯತೆಯನ್ನು ಸಾರಿದರು.
ಈದ್ಗಾ ಮೈದಾನಕ್ಕೆ ಗೃಹ ಸಚಿವ ಡಾ. ಜಿ. ಪರಮೇಶ್ವರ್, ಮಾಜಿ ಸಂಸದ ಎಸ್.ಪಿ. ಮುದ್ದಹನುಮೇಗೌಡ, ಕೆಪಿಸಿಸಿ ಉಪಾಧ್ಯಕ್ಷ ಮುರುಳೀಧರ ಹಾಲಪ್ಪ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಚಂದ್ರಶೇಖರಗೌಡ, ಮಾಜಿ ಶಾಸಕರಾದ ಎಸ್. ಷಫಿಅಹಮದ್, ಡಾ. ರಫೀಕ್ಅಹಮದ್, ಇಕ್ಬಾಲ್ ಅಹಮದ್, ಅಸ್ಲಾಂಪಾಷ, ಅಪ್ತಾಫ್, ನಯಾಜ್ ಅಹಮದ್ ಗುರುಪ್ರಸಾದ್, ವೇಣುಗೋಪಾಲ್ ಭೇಟಿ ನೀಡಿ ಮುಸ್ಲಿಂ ಬಾಂಧವರಿಗೆ ರಂಜಾನ್ ಹಬ್ಬದ ಶುಭಾಶಯ ಕೋರಿದರು.
ಈದ್ಗಾ ಮೈದಾನಕ್ಕೆ ಭೇಟಿ ನೀಡಿದ್ದ ಗೃಹ ಸಚಿವ ಡಾ. ಜಿ. ಪರಮೇಶ್ವರ್, ಮುದ್ದಹನುಮೇಗೌಡ ಹಾಗೂ ಮುರುಳೀಧರ ಹಾಲಪ್ಪ ಅವರನ್ನು ಮುಸ್ಲಿಂ ಬಾಂಧವರು ಅಭಿನಂದಿಸಿದರು.
ಶುಭಕೋರಿದ ಗೃಹ ಸಚಿವರು
ಇದೇ ಸಂದರ್ಭದಲ್ಲಿ ಮಾತನಾಡಿದ ಗೃಹ ಸಚಿವ ಡಾ. ಜಿ. ಪರಮೇಶ್ವರ್ ಅವರು, ಒಂದು ತಿಂಗಳು ರೋಜಾ ಆಚರಣೆ ಮಾಡಿ ಅತ್ಯಂತ ಪವಿತ್ರವಾಗಿ ಆಚರಿಸುವ ಹಬ್ಬ ರಂಜಾನ್. ಎಲ್ಲಾ ಮುಸ್ಲಿಂ ಬಾಂಧವರಿಗೆ ಪವಿತ್ರ ರಂಜಾನ್ ಹಬ್ಬದ ಶುಭಾಶಯ ಕೋರುತ್ತೇನೆ ಎಂದರು.
ಭವಿಷ್ಯದ ದಿನಗಳಲ್ಲಿ ನನ್ನ ಜೀವನದಲ್ಲಿ ಒಳ್ಳೆಯದನ್ನೆ ಮಾಡು, ಇಡೀ ವಿಶ್ವಕ್ಕೆ, ಮನುಕುಲಕ್ಕೆ ಶಾಂತಿ-ಸೌಹಾರ್ದತೆಯನ್ನು ಕಾಪಾಡಬೇಕು ಎಂದು ಅಲ್ಲಾನಿಗೆ ಪ್ರಾರ್ಥನೆ ಸಲ್ಲಿಸುವಂತಹ ಸುಸಂದರ್ಭ ಈ ರಂಜಾನ್ ಹಬ್ಬವಾಗಿದೆ ಎಂದು ಅವರು ಹೇಳಿದರು.
ಹಬ್ಬದ ಪ್ರಯುಕ್ತ ಕುಣಿಗಲ್ ರಸ್ತೆಯಲ್ಲಿರುವ ಈದ್ಗಾ ಮೈದಾನದ ಸುತ್ತಮುತ್ತ ಬಿಗಿ ಪೊಲೀಸ್ ಬಂದೋ ಬಸ್ತ್ ವ್ಯವಸ್ಥೆ ಮಾಡಲಾಗಿತ್ತು.