ವ್ಯಕ್ತಿ ವ್ಯಕ್ತಿತ್ವ ಎರಡರಲ್ಲೂ ಡಾ.ರಾಜ್ ಮಾದರಿ
ವ್ಯಕ್ತಿ ಮತ್ತು ವ್ಯಕ್ತಿತ್ವ ಎರಡರಲ್ಲೂ ಡಾ.ರಾಜಕುಮಾರ್ ಸಮಾಜಕ್ಕೆ ಮಾದರಿ ಎಂದು ಖ್ಯಾತ ರಂಗ ಸಂಘಟಕ ಹಾಗೂ ಪತ್ರಕರ್ತ ಉಗಮ ಶ್ರೀನಿವಾಸ್ ತಿಳಿಸಿದರು. ಅವರು ನಗರದ ಕನ್ನಡಭವನದಲ್ಲಿ ದಿಬ್ಬೂರು ಮಂಜು ಮಿತ್ರ ಮಂಡಳಿಯ ವತಿಯಿಂದ ಆಯೋಜಿಸಲಾಗಿದ್ದ ವರನಟ ಡಾ.ರಾಜಕುಮಾರ್ ರವರ ಹುಟ್ಟುಹಬ್ಬ ಕಾರ್ಯಕ್ರಮದಲ್ಲಿ ನುಡಿನಮನ ಸಲ್ಲಿಸಿ ಮಾತನಾಡಿ ಡಾ.ರಾಜಕುಮಾರ್ ಕನ್ನಡ ಚಿತ್ರರಂಗದ ಮೇರು ನಟರಾಗಿ ನೂರಾರು ಚಿತ್ರಗಳಲ್ಲಿ ಅಭಿನಯಿಸಿ ಹಲವಾರು ಬಿರುದಾಂಕಿತಗಳನ್ನು ಪಡೆದು ಅಭಿಮಾನಿಗಳ ಆರಾಧ್ಯ ದೈವ ಎನಿಸಿದರು ಎಲ್ಲರೊಂದಿಗೆ ಬೆರೆಯುವ ಸರಳ ವ್ಯಕ್ತಿತ್ವವನ್ನು ಒಳಗೊಂಡು ಸರಳ ಜೀವನ ಶೈಲಿಯನ್ನು ಅಳವಡಿಸಿಕೊಂಡು ಸಮಾಜಕ್ಕೆ ಮಾದರಿಯಾದ ವ್ಯಕ್ತಿಯಾಗಿದ್ದರು ಮನುಷ್ಯ ಎತ್ತರಕ್ಕೆ ಹೇಳಿದಂತೆ ಆತನ ಜೀವನ ಶೈಲಿ ಸರಳವಾಗಿರಬೇಕು ಎಂಬಂತೆ ಡಾ. ರಾಜಕುಮಾರ್ ರವರ ಬದುಕು ಅತ್ಯಂತ ಎತ್ತರದಲ್ಲಿ ಇದ್ದರೂ ಸಹ ಸರಳ ರೀತಿಯಲ್ಲಿ ಬದುಕಿ ತೋರಿಸಿ ಮೇರು ವ್ಯಕ್ತಿತ್ವದ ವ್ಯಕ್ತಿ ಹೀಗೂ ಬದುಕಬಹುದೇ ಎಂಬುದನ್ನು ಸಮಾಜಕ್ಕೆ ತೋರಿಸಿಕೊಟ್ಟ ಧೀಮಂತ ವ್ಯಕ್ತಿ ಮತ್ತು ವ್ಯಕ್ತಿತ್ವ ಎಂದರೆ ಅದು ರಾಜಕುಮಾರ್ ಎಂದು ಬಣ್ಣಿಸಿದರು. ಅವರ ಚಿತ್ರಗಳಿಂದ ಪ್ರೇರೇಪಿತರಾದ ಅನೇಕ ಮಂದಿ ಯುವಕರು ತಮ್ಮ ಜೀವನ ಶೈಲಿಯನ್ನೇ ಬದಲಾಯಿಸಿಕೊಂಡು ಉತ್ತಮ ಮನುಷ್ಯರಾಗಿ ಸಮಾಜದಲ್ಲಿ ಹೆಸರು ಗಳಿಸಿರುವ ಉದಾಹರಣೆಗಳು ಬೇಕಾದಷ್ಟು ಸಿಗುತ್ತವೆ ಇಂತಹ ವ್ಯಕ್ತಿಯ ಹುಟ್ಟುಹಬ್ಬವನ್ನು ನಾಡಿನಾದ್ಯಂತ ಆಚರಿಸುತ್ತಿರುವುದು ಕನ್ನಡ ಭಾಷೆಗೆ ನೀಡುವ ಗೌರವ ಎಂದು ತಿಳಿಸಿದರು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಕರ್ನಾಟಕ ಕಾರ್ಯ ನಿರತ ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ಚಿ.ನಿ.ಪುರುಷೋತ್ತಮ್ ಕಲಾಕೋತ್ಸವ ಡಾಕ್ಟರ್ ರಾಜಕುಮಾರ್ ರವರ ಚಿತ್ರಗಳು ಇಡೀ ಮನುಕುಲದ ಜಗತ್ತನ್ನು ಕಣ್ತೆರೆದು ನೋಡುವಂತೆ ಮಾಡಿದ್ದವು. ಹಲವಾರು ಸಾಮಾಜಿಕ ಮೌಲ್ಯಗಳನ್ನು ಎತ್ತಿ ಹಿಡಿಯುವ ಚಿತ್ರಗಳಲ್ಲಿ ಅಭಿನಯಿಸಿ ಕೇವಲ ಅಭಿನಯವಲ್ಲದೆ ಆ ಪಾತ್ರದ ಸಂದೇಶವನ್ನು ಜನತೆಗೆ ತತ್ವಜ್ಞಾನಿಯಂತೆ ಮುಟ್ಟಿಸುತಿದ್ದ ಕೀರ್ತಿ ಡಾಕ್ಟರ್ ರಾಜಕುಮಾರ್ ಅವರಿಗೆ ಸಲ್ಲುತ್ತದೆ. ರಾಜಕುಮಾರ್ ನಟರಾಗಿ ಕನ್ನಡ ಭಾಷೆಯ ಪಾರಂಪರಿಕ ರಾಯಭಾರಿಯಾಗಿ ಸಹ ಕಾರ್ಯ ನಿರ್ವಹಿಸಿ ಕನ್ನಡ ಸೇವೆಯಲ್ಲಿ ತೊಡಗಿದ್ದ ಬಹುದೊಡ್ಡ ವ್ಯಕ್ತಿ ಎಂದು ಬಣ್ಣಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಕಲಾಶ್ರೀ ಡಾ.ಲಕ್ಷ್ಮಣದಾಸ್ ಡಾ.ರಾಜಕುಮಾರ್ ರವರನ್ನು ದಿವಂಗತ ಎಂದು ಕರೆಯಲು ಸಾಧ್ಯವಿಲ್ಲ, ಅವರು ದೈಹಿಕವಾಗಿಲ್ಲದಿದ್ದರೂ ಅವರು ಕನ್ನಡ ನಾಡಿಗೆ ನೀಡಿದ ಕೊಡುಗೆಯಿಂದಾಗಿ ಇಂದಿಗೂ ಚಿರಂಜೀವಿಯಾಗಿದ್ದಾರೆ. ಜೀವನದುದ್ದಕ್ಕೂ ಮೌಲ್ಯಗಳನ್ನು ಅಳವಡಿಸಿಕೊಂಡು, ಮಾದರಿಯಾದ ಬದುಕು ನಡೆಸುತ್ತಾ ಇತರರಿಗೂ ಪ್ರೇರೇಪಣೆ ನೀಡಿದ್ದಾರೆ. ರಾಜಕುಮಾರ್ ಎಂಬ ಹೆಸರಿಗೆ ಅಂತ್ಯವೇ ಇಲ್ಲ, ನಿರಂತರವಾಗಿ ಕನ್ನಡಿಗರ ಮನದಲ್ಲಿ ಉಳಿಯುವ ಹೆಸರಾಗಿದೆ. ರಾಜಕುಮಾರ್ ಕೇವಲ ಚಿತ್ರರಂಗಕ್ಕೆ ಸೀಮಿತವಾಗದೇ ರಂಗಭೂಮಿಗೆ ನೀಡಿದ ಕೊಡುಗೆ ಅನನ್ಯ ಎಂದರು.
ವೇದಿಕೆಯಲ್ಲಿ ಖ್ಯಾತ ವರ್ತಕರಾದ ಪ್ರಸನ್ನಕುಮಾರ್, ವಕೀಲರಾದ ದಿನೇಶ್ ಕುಮಾರ್ ಮುಂತಾದವರು ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ಡಾ.ರಾಜಕುಮಾರ್ ಅಭಿನಯದ ಆಯ್ದ ಚಲನಚಿತ್ರ ಗೀತೆಗಳ ಗಾಯನ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಕಲಾವಿದ ಭಾರತೀಪುರ ಶಂಕರ್ ನಿರೂಪಿಸಿದರು, ದಿಬ್ಬೂರು ಮಂಜು ಸ್ವಾಗತಿಸಿದರು, ಕೆ.ಜಿ.ಮೋಹನಕುಮಾರ್ ವಂದಿಸಿದರು.