ತುಮಕೂರು ಲೋಕಸಭಾ ಕ್ಷೇತ್ರದ ಬಿಜೆಪಿ ಪಕ್ಷದ ಪ್ರಬಲ ಟಿಕೆಟ್ ಆಕಾಂಕ್ಷಿಯಾಗಿರುವ ಆರ್ಎಸ್ಎಸ್ ಕಟ್ಟಾಳು ಹಾಗೂ ಹಿರಿಯ ಬಿಜೆಪಿ ಮುಖಂಡ ದೊಡ್ಡಮನೆ ಗೋಪಾಲಗೌಡ ಅವರು ಪಕ್ಷ ಟಿಕೆಟ್ ನೀಡಿದರೆ ಗೆಲುವು ಸಾಧಿಸಿ ಲೋಕಸಭೆಯಲ್ಲಿ ಜಿಲ್ಲೆಯ ಜನರ ಧ್ವನಿಯಾಗಿ ಕೆಲಸ ಮಾಡುವುದಾಗಿ ಹೇಳಿದರು.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಜೆಪಿ ಸಂಘ ಪರಿವಾರದೊಂದಿಗೆ ಮೂರು ದಶಕಗಳೊಂದಿಗೆ ಹೆಚ್ಚಿನ ಒಡನಾಟ ಹೊಂದಿ ಪಕ್ಷದಲ್ಲಿ ಮೂರು ದಶಕಗಳಿಗೂ ಹೆಚ್ಚು ಕಾಲ ಒಡನಾಟ ಹೊಂದಿದ್ದೇನೆ. ಈ ಬಾರಿಯ ಲೋಕಸಭಾ ಚುನಾವಣೆಗೆ ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿದ್ದು, ಪಕ್ಷ ಟಿಕೆಟ್ ನೀಡಿದರೆ ಚುನಾವಣೆಗೆ ಸ್ಪರ್ಧಿಸಿ ಜಿಲ್ಲೆಯ ಪರವಾಗಿ ಲೋಕಸಭೆಯಲ್ಲಿ ಪ್ರಬಲ ಧ್ವನಿಯಾಗಿ ಕೆಲಸ ಮಾಡುತ್ತೇನೆ ಎಂದರು.
ನಾನು ಕಳೆದ 40 ವರ್ಷದಿಂದ ಸಾರ್ವಜನಿಕ ಜೀವನದಲ್ಲಿದ್ದು, ವಕೀಲರಾಗಿ, ವಕೀಲರ ಸಂಘಕ್ಕೆ 5 ಬಾರಿ ಅಧ್ಯಕ್ಷನಾಗಿ, ವಕೀಲರ ಸಮಸ್ಯೆಗಳು, ನ್ಯಾಯಾಲಯಕ್ಕೆ ಮೂಲ ಸೌಕರ್ಯ ಕಲ್ಪಿಸುವ ಸಂಬoಧ ಅವಿರತವಾಗಿ ಶ್ರಮಿಸಿದ್ದೇನೆ ಎಂದರು.
ನನ್ನ ಸಾಂಘಿಕ ಶಕ್ತಿಯನ್ನು ಅರಿತ ಹಲವು ವಕೀಲ ಸ್ನೇಹಿತರು, ಹಿತೈಷಿಗಳು, ಪಕ್ಷದ ಕಾರ್ಯಕರ್ತರು, ಮುಖಂಡರು ಪಾರ್ಲಿಮೆಂಟ್ ಚುನಾವಣೆಗೆ ಸ್ಪರ್ಧಿಸುವಂತೆ ಒತ್ತಾಯಿಸಿದ್ದು, ಲೋಕಸಭೆಗೆ ಸ್ಪರ್ಧೆ ಮಾಡಲು ಈಗ ಕಾಲ ಪಕ್ವವಾಗಿದೆ ಎಂದು ಅವರು ಹೇಳಿದರು.
ಈ ಬಾರಿಯ ಚುನಾವಣೆಗೆ ಸ್ಪರ್ಧಿಸಲು ಪಕ್ಷದಿಂದ ನನಗೆ ಟಿಕೆಟ್ ಸಿಗುವ ವಿಶ್ವಾಸವಿದೆ. ಜಿಲ್ಲೆ, ರಾಜ್ಯ ನಾಯಕರು ನನ್ನನ್ನು ಬೆಂಬಲಿಸಲಿದ್ದಾರೆ ಎಂಬ ವಿಶ್ವಾಸವೂ ತಮಗಿದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ದೊಡ್ಡಮನೆ ಆಸ್ಪತ್ರೆಯ ಹಿರಿಯ ವೈದ್ಯರಾದ ಡಾ. ಹನುಮಕ್ಕ, ಬಿಜೆಪಿ ಮುಖಂಡರಾದ ಮನೋಹರಗೌಡ, ವಕೀಲರ ಸಂಘದ ಮಾಜಿ ಪ್ರಧಾನ ಕಾರ್ಯದರ್ಶಿ ಹಿಮಾನಂದ್, ಡಾ. ವಿಜಯಕುಮಾರ್ ಮತ್ತಿತರರು ಉಪಸ್ಥಿತರಿದ್ದರು.