ತುಮಕೂರು(ಕ.ವಾ.)ಜು.೧೪: ‘ಪಂಚ ಪ್ರಾಣ ಮತ್ತು ಇಂಡಿಯಾ@೨೦೪೭’ ಎಂಬ ಥೀಮ್ನೊಂದಿಗೆ ಜಿಲ್ಲೆಯ ಪ್ರತಿಭಾವಂತ ಯುವಜನರ ಪ್ರತಿಭೆಯನ್ನು ಅನಾವರಣಗೊಳಿಸುವ ವೇದಿಕೆಯಾದ ಜಿಲ್ಲಾಮಟ್ಟದ ಯುವ ಉತ್ಸವ’ ಕಾರ್ಯಕ್ರಮವನ್ನು ಆಯೋಜಿಸುವ ನಿಟ್ಟಿನಲ್ಲಿ ಸಕಲ ಸಿದ್ದತೆ ಕೈಗೊಳ್ಳುವಂತೆ ಜಿಲ್ಲಾಧಿಕಾರಿ ಕೆ.ಶ್ರೀನಿವಾಸ್ ಅಧಿಕಾರಿಗಳಿಗೆ ಸೂಚಿಸಿದರು. ಭಾರತ ಸರ್ಕಾರದ ಯುವ ವ್ಯವಹಾರ ಕ್ರೀಡಾ ಸಚಿವಾಲಯ ಮತ್ತು ನೆಹರು ಯುವ ಕೇಂದ್ರದ ವತಿಯಿಂದ ಒಂದು ದಿನದ ಜಿಲ್ಲಾ ಮಟ್ಟದ ಕಾರ್ಯಕ್ರಮ ಆಯೋಜಿಸುವ ನಿಟ್ಟಿನಲ್ಲಿ ಇಂದು ಜಿಲ್ಲಾಧಿಕಾರಿಗಳ ಕಚೇರಿಯ ನ್ಯಾಯಾಲಯ ಸಭಾಂಗಣದಲ್ಲಿ ಕರೆಯಲಾಗಿದ್ದ, ಯುವ ಉತ್ಸವ ಕಾರ್ಯಕ್ರಮದ ಪೂರ್ವಭಾವಿ ಸಿದ್ದತಾ ಸಭೆಯ ಅಧ್ಯಕ್ಷತೆ ವಹಸಿ ಮಾತನಾಡಿದ ಅವರು,
ಪಂಚ ಪ್ರಾಣ ಮತ್ತು ಇಂಡಿಯಾ ೨೦೪೭` ವಿಷಯದ ಮೇಲೆ ಚಿತ್ರಕಲೆ ಸ್ಪರ್ಧೆ, ಕವನ ಬರವಣಿಗೆ, ಮೊಬೈಲ್ ಪೋಟೋಗ್ರಫಿ, ಭಾಷಣ ಹಾಗೂ ಜನಪದ ಮತ್ತು ಸಾಂಸ್ಕೃತಿಕ ಗುಂಪು ನೃತ್ಯ ಸ್ಪರ್ಧೆಗಳನ್ನು ಆಯೋಜಿಸಿ, ಸ್ಪರ್ಧೆಯಲ್ಲಿ ವಿಜೇತರಾದವರಿಗೆ ನಗದು ಬಹುಮಾನ ಮತ್ತು ಪ್ರಶಸ್ತಿ ಪತ್ರವನ್ನು ನೀಡುವುದರ ಜೊತೆಗೆ ರಾಜ್ಯ ಮತ್ತು ರಾಷ್ಟçಮಟ್ಟಗಳಲ್ಲಿ ಭಾಗವಹಿಸಲು ಅವಕಾಶ ಕಲ್ಪಿಸಬೇಕೆಂದು ಅವರು ಸೂಚಿಸಿದರು.
ಜಿಲ್ಲೆಯ ಪ್ರತಿಭಾವಂತ ಯುಜನರ ಪ್ರತಿಭೆಯನ್ನು ಆನಾವರಣಗೊಳಿಸುವುಕ್ಕೆ ಉತ್ತಮ ವೇದಿಕೆ ಇದಾಗಿದ್ದು, ಆದ್ದರಿಂದ ಎಲ್ಲಾ ಇಲಾಖೆಗಳು ಸಹಕಾರ ನೀಡುವುದರ ಜೊತೆಗೆ ಕಾರ್ಯಕ್ರಮದ ಸ್ಥಳದಲ್ಲಿ ಸ್ಟಾಲ್ಗಳನ್ನು ಸ್ಥಾಪಿಸಿ ಇಲಾಖೆಯ ಯೋಜನೆಗಳ ಸೌಲಭ್ಯದ ಕುರಿತು ಪ್ರದರ್ಶಿಸಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.
ಕಾರ್ಯಕ್ರಮವನ್ನು ಯಶಸ್ವಿಯಾಗಿ ಪೂರೈಸಲು ಅಧಿಕಾರಿಗಳನ್ನೊಳಗೊಂಡ ಒಂದು ಉಪ ಸಮಿತಿಯನ್ನು ಮಾಡಿ ಜವಾಬ್ದಾರಿಗಳನ್ನು ನೀಡಬೇಕು ಎಂದು ತಿಳಿಸಿದರು.
ಅಭಿವೃದ್ದಿ ಹೊಂದಿದ ಭಾರತ, ಗುಲಾಮಗಿರಿ/ವಸಾಹತುಶಾಹಿ ಮುಕ್ತ ಭಾರತ, ನಮ್ಮ ಸಂಸ್ಕೃತಿಯ ಬಗ್ಗೆ ಹೆಮ್ಮೆ ಪಡುವುದು, ಏಕತೆ ಮತ್ತು ಒಗ್ಗಟ್ಟು ಹಾಗೂ ನಾಗರೀಕರಲ್ಲಿ ಕರ್ತವ್ಯ ಪ್ರಜ್ಞೆ ಮೂಡಿಸುವ ಪಂಚ ವಿಷಯಗಳ ಮೇಲೆ ಬೆಳಕು ಚೆಲ್ಲುವ ಕಾರ್ಯಕ್ರಮವನ್ನು ಆಯೋಜಿಸಿ, ಕಾರ್ಯಕ್ರಮದ ದಿನಾಂಕ ಮತ್ತು ಸ್ಥಳವನ್ನು ಶೀಘ್ರದಲ್ಲೆ ನಿಗಧಿ ಮಾಡಿ ತಿಳಿಸುವಂತೆ ಯುವ ನೆಹರು ಕೇಂದ್ರದ ಜಿಲ್ಲಾ ಯುವ ಅಧಿಕಾರಿ ಸುಹಾಸ್ ಅವರಿಗೆ ಜಿಲ್ಲಾಧಿಕಾರಿ ಸೂಚಸಿದರು.
ಜಿಲ್ಲಾ ಯುವ ಅಧಿಕಾರಿ ಸುಹಾಸ್ ಮಾತನಾಡುತ್ತಾ, ಸ್ಪರ್ಧೆಯಲ್ಲಿ ಭಾಗವಹಿಸುವ ಯುವಜನರ ವಯೋಮಿತಿಯನ್ನು ೧೫ರಿಂದ ೨೯ ವರ್ಷದ ನಿಗಧಿಗೊಳಿಸಲಾಗಿದ್ದು, ತುಮಕೂರು ಜಿಲ್ಲೆಯ ಯುವ ಜನತೆ ಜುಲೈ ೨೧ರೊಳಗಾಗಿ ಜಿಲ್ಲಾ ಯುವಜನ ಅಧಿಕಾರಿಗಳ ಕಚೇರಿ, ನೆಹರು ಯುವ ಕೇಂದ್ರ ತುಮಕೂರು, ಶ್ರೀರಂಗನಾಥ ಸ್ವಾಮಿ ನಿಲಯ , ರಿಲಯನ್ಸ್ ಟ್ರೆಂಡ್ಸ್ ಹಿಂಭಾಗ ಶಿರಾ ಗೇಟ್ ಇಲ್ಲಿಗೆ ಬಂದು ನೇರವಾಗಿ ಅರ್ಜಿಯನ್ನು ಪಡೆದು ನೋಂದಾಯಿಸಿಕೊಳ್ಳಬಹುದಾಗಿದೆ ಹಾಗೂ ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ ೦೮೧೬-೨೨೭೨೯೦೮, ೯೯೪೫೦೩೮೬೮೪ನ್ನು ಸಂಪರ್ಕಿಸಬಹುದಾಗಿದೆ ಎಂದು ಸಭೆಗೆ ಮಾಹಿತಿ ನೀಡಿದರು.
ಸಭೆಯಲ್ಲಿ ಮಕ್ಕಳ ಕಲ್ಯಾಣ ಇಲಾಖೆಯ ಉಪನಿರ್ದೆಶಕ, ಕೃಷಿ ಇಲಾಖೆಯ ಅಧಿಕಾರಿ, ಕ್ರೀಡಾ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.
ಜಿಲ್ಲಾಮಟ್ಟದ `ಯುವ ಉತ್ಸವ’ ಕಾರ್ಯಕ್ರಮ
Leave a comment
Leave a comment