ಕೌಟುಂಬಿಕ ಹಿಂಸೆ ಪ್ರಕರಣ: ೬೦ ದಿನಗಳೊಳಗೆ ಇತ್ಯರ್ಥಪಡಿಸಲು ಜಿಲ್ಲಾಧಿಕಾರಿ ಸೂಚನೆ
ತುಮಕೂರು(ಕ.ವಾ.)ಅ.೧೧: ಜಿಲ್ಲೆಯಲ್ಲಿ ವರದಿಯಾದ ಮಹಿಳೆಯರ ಮೇಲಿನ ಕೌಟುಂಬಿಕ ಹಿಂಸೆ ಪ್ರಕರಣಗಳನ್ನು ೬೦ ದಿನದೊಳಗೆ ಇತ್ಯರ್ಥಪಡಿಸಲು ಕ್ರಮವಹಿಸಬೇಕೆಂದು ಜಿಲ್ಲಾಧಿಕಾರಿ ಕೆ. ಶ್ರೀನಿವಾಸ್ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಜಿಲ್ಲಾಧಿಕಾರಿಗಳ ಕಚೇರಿ ನ್ಯಾಯಾಲಯ ಸಭಾಂಗಣದಲ್ಲಿAದು ಜರುಗಿದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಜಿಲ್ಲಾ ಮಟ್ಟದ ಸಮನ್ವಯ ಸಮಿತಿ ಸೇರಿದಂತೆ ವಿವಿಧ ಸಮಿತಿ ಸಭೆಯ ಅಧ್ಯಕ್ಷತೆವಹಿಸಿ ಮಾತನಾಡಿದ ಅವರು, ಜಿಲ್ಲೆಯ ವಿವಿಧ ತಾಲೂಕು ಶಿಶು ಅಭಿವೃದ್ಧಿ ಯೋಜನಾ ಇಲಾಖೆಯಲ್ಲಿ ಕೌಟುಂಬಿಕ ಹಿಂಸೆಯಿAದ ಮಹಿಳೆಯರ ಸಂರಕ್ಷಣಾ ಕಾಯ್ದೆಯಡಿ ೨೦೨೩-೨೪ನೇ ಸಾಲಿನ ಮೊದಲನೇ ತ್ರೆöÊಮಾಸಿಕದಲ್ಲಿ ದಾಖಲಾದ ೬೭ ಹಾಗೂ ೨ನೇ ತ್ರೆöÊಮಾಸಿಕದಲ್ಲಿ ದಾಖಲಾದ ೭೯ ಪ್ರಕರಣಗಳಡಿ ಬಾಕಿ ಉಳಿದ ೮೭ ಪ್ರಕರಣಗಳನ್ನು ತ್ವರಿತವಾಗಿ ಇತ್ಯರ್ಥಪಡಿಸಲು ಸೂಚಿಸಿದರು. ಇನ್ನು ಮುಂದೆ ಈ ಕಾಯ್ದೆಯಡಿ ದಾಖಲಾಗುವ ಪ್ರಕರಣಗಳನ್ನು ೬೦ ದಿನದೊಳಗೆ ಇತ್ಯರ್ಥಪಡಿಸಿ ಸಂತ್ರಸ್ತ ಮಹಿಳೆಯರಿಗೆ ಅನುಕೂಲ ಮಾಡಿಕೊಡಬೇಕೆಂದು ನಿರ್ದೇಶನ ನೀಡಿದರು.
ಜಿಲ್ಲೆಯಲ್ಲಿ ೨೦೨೩ರ ಏಪ್ರಿಲ್ನಿಂದ ಸೆಪ್ಟೆಂಬರ್ ಮಾಹೆಯ ಅಂತ್ಯದವರೆಗೆ ಬಾಲ್ಯವಿವಾಹ ನಿಷೇಧ ಕಾಯ್ದೆಯಡಿ ಒಟ್ಟು ೨೯ ಪ್ರಕರಣಗಳು ದಾಖಲಾಗಿವೆ. ಬಾಲ್ಯವಿವಾಹವನ್ನು ಪರಿಣಾಮಕಾರಿಯಾಗಿ ತಡೆಗಟ್ಟಲು ತಮ್ಮ ವ್ಯಾಪ್ತಿಯಲ್ಲಿ ಮದುವೆಯಾಗಲಿರುವ ಗಂಡು ಮತ್ತು ಹೆಣ್ಣಿನ ವಯಸ್ಸಿನ ದಾಖಲೆಗಳನ್ನು ಪೋಷಕರಿಂದ ಪಡೆದು ನಿಗಧಿಪಡಿಸಿರುವ ವಯೋಮಿತಿ ಪೂರ್ಣಗೊಂಡಿರುವ ಬಗ್ಗೆ ದೃಢಪಡಿಸಿಕೊಳ್ಳುವ ಜವಾಬ್ದಾರಿಯನ್ನು ಅಂಗವಾಡಿ ಕಾರ್ಯಕರ್ತೆಯರಿಗೆ ವಹಿಸಬೇಕು ಎಂದು ಸೂಚಿಸಿದರು.
ಅದೇ ರೀತಿ ಗಂಡು-ಹೆಣ್ಣಿನ ವಯಸ್ಸಿಗೆ ಸಂಬAಧಿಸಿದ ಪೂರಕ ದಾಖಲೆಗಳನ್ನು ಪಡೆದ ನಂತರವೇ ದೇವಸ್ಥಾನಗಳಲ್ಲಿ ಮದುವೆಗೆ ಅವಕಾಶ ಕಲ್ಪಿಸಬೇಕೆಂದು ಎಲ್ಲ ಪುರೋಹಿತರಿಗೆ ಸುತ್ತೋಲೆ ಹೊರಡಿಸಬೇಕೆಂದು ಮುಜರಾಯಿ ತಹಶೀಲ್ದಾರರಾದ ಸವಿತಾ ಅವರಿಗೆ ನಿರ್ದೇಶನ ನೀಡಿದರು.
ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ನೂರುನ್ನಿಸಾ ಮಾತನಾಡಿ ಜಿಲ್ಲೆಯಲ್ಲಿ ಪೋಕ್ಸೋ ಪ್ರಕರಣಗಳು ಹೆಚ್ಚಾಗಿ ವರದಿಯಾಗುತ್ತಿವೆ. ಮೊಬೈಲ್ ಬಳಕೆಯಿಂದಲೂ ವಿದ್ಯಾರ್ಥಿಗಳು ಹಾದಿ ತಪ್ಪುತ್ತಿದ್ದಾರೆ. ಶಾಲಾ-ಕಾಲೇಜುಗಳಲ್ಲಿ ನಿಯಮಿತವಾಗಿ ಭೌತಿಕ ತರಗತಿಗಳು ನಡೆಯುತ್ತಿದ್ದರೂ ಕೋರೋನಾ ಸಂದರ್ಭದಲ್ಲಿ ನಡೆಸಿದಂತೆ ಈಗಲೂ ಆನ್ಲೈನ್ ಮೂಲಕ ಪಠ್ಯಕ್ರಮ ಅಭ್ಯಾಸ ಮಾಡಿಸುತ್ತಿದ್ದಾರೆ. ದ್ವಿತೀಯ ಪಿಯುಸಿವರೆಗೆ ಮೊಬೈಲ್ ಬಳಕೆ ಮಾಡುವುದನ್ನು ತಪ್ಪಿಸಬೇಕು ಎಂದು ಸಲಹೆ ನೀಡಿದ ಅವರು ಬಾಲ್ಯವಿವಾಹ ಮತ್ತು ಮೊಬೈಲ್ ಬಳಕೆಯಿಂದಾಗುವ ದುಷ್ಪರಿಣಾಮಗಳ ಬಗ್ಗೆ ಕಿರು ಸಾಕ್ಷö್ಯಚಿತ್ರಗಳ ಮೂಲಕ ವಿದ್ಯಾರ್ಥಿಗಳಿಗೆ ತಿಳುವಳಿಕೆ ನೀಡಬೇಕೆಂದು ಅಧಿಕಾರಿಗಳಿಗೆ ಸೂಚಿಸಿದರು.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ಶ್ರೀಧರ್ ಮಾತನಾಡಿ, ಜಿಲ್ಲೆಯಲ್ಲಿ ಈವರೆಗೆ ೨೯ ಬಾಲ್ಯವಿವಾಹ ಪ್ರಕರಣಗಳು ದಾಖಲಾಗಿದ್ದು, ೨೧ ವಿವಾಹಗಳನ್ನು ತಡೆಯಲಾಗಿದೆ. ತುಮಕೂರು ನಗರ, ಕೊರಟಗೆರೆ, ಮಧುಗಿರಿ, ಪಾವಗಡ, ಕುಣಿಗಲ್ ತಾಲ್ಲೂಕಿನಲ್ಲಿ ತಲಾ ೧ ಹಾಗೂ ಗುಬ್ಬಿ ತಾಲೂಕಿನಲ್ಲಿ ೩ ಸೇರಿ ಒಟ್ಟು ೮ ಬಾಲ್ಯವಿವಾಹಗಳ ನಡೆದಿದ್ದು, ಪೊಲೀಸ್ ಠಾಣೆಯಲ್ಲಿ ಪ್ರಥಮ ವರ್ತಮಾನ ವರದಿ(ಎಫ್.ಐ.ಆರ್.)ಯನ್ನು ದಾಖಲಿಸಲಾಗಿದೆ ಎಂದು ಸಭೆಗೆ ಮಾಹಿತಿ ನೀಡಿದರು.
ಸಾಂತ್ವನ ಕೇಂದ್ರಗಳಲ್ಲಿ ಪ್ರಸಕ್ತ ಸಾಲಿನಲ್ಲಿ ೭೧೦ ಕೌಟುಂಬಿಕ ದೌರ್ಜನ್ಯಗಳು ದಾಖಲಾಗಿದ್ದು, ೬೮೫ ಪ್ರಕರಣಗಳು ಇತ್ಯರ್ಥವಾಗಿವೆ ಎಂದು ಮಾಹಿತಿ ನೀಡಿದರಲ್ಲದೆ ವರದಕ್ಷಿಣೆ ನಿಷೇಧ ಕಾಯ್ದೆಯಡಿ ವರದಿಯಾದ ೭೦ ಪ್ರಕರಣಗಳ ಪೈಕಿ ೨೩ ಪ್ರಕರಣಗಳನ್ನು ವಿಲೇವಾರಿ ಮಾಡಿದ್ದು, ೪೭ ಪ್ರಕರಣಗಳು ಬಾಕಿ ಇವೆ ಎಂದು ತಿಳಿಸಿದರು.
ಕಾರ್ಯಕ್ರಮ ನಿರೂಪಣಾಧಿಕಾರಿ ದಿನೇಶ್ ಮಾತನಾಡಿ, ಜಿಲ್ಲೆಯಲ್ಲಿ ಅನುಷ್ಟಾನವಾಗುತ್ತಿರುವ ಪೋಷಣ್ ಅಭಿಯಾನ, ಪ್ರಧಾನಮಂತ್ರಿ ಮಾತೃವಂದನಾ ಯೋಜನೆ ಪ್ರಗತಿ ಬಗ್ಗೆ ಮಾಹಿತಿ ನೀಡಿದರು.
ಸಭೆಯಲ್ಲಿ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಮರಿಯಪ್ಪ, ಡಿಹೆಚ್ಓ ಡಾ: ಮಂಜುನಾಥ, ವಿವಿಧ ತಾಲ್ಲೂಕಿನ ಸಿಡಿಪಿಓಗಳು, ಸಾಂತ್ವನ ಕೇಂದ್ರದ ಸಿಬ್ಬಂದಿ ಸೇರಿದಂತೆ ಮತ್ತಿತರರಿದ್ದರು.
ಕೌಟುಂಬಿಕ ಹಿಂಸೆ ಪ್ರಕರಣ: ೬೦ ದಿನಗಳೊಳಗೆ ಇತ್ಯರ್ಥಪಡಿಸಲು ಜಿಲ್ಲಾಧಿಕಾರಿ ಸೂಚನೆ
Leave a comment
Leave a comment