ಜಿಲ್ಲೆಯ ಪ್ರಮುಖ ಪ್ರವಾಸಿ ತಾಣವಾಗಿ ಅಮಾನಿಕೆರೆ ಅಭಿವೃದ್ದಿ- ಸಚಿವ ಡಾ. ಜಿ. ಪರಮೇಶ್ವರ್
ತುಮಕೂರು(ಕ.ವಾ.)ಜು.೩೧: ನಗರದ ಅಮಾನಿಕೆರೆಯನ್ನು ಮುಂದಿನ ದಿನಗಳಲ್ಲಿ ಜಿಲ್ಲೆಯ ಪ್ರಮುಖ ಪ್ರವಾಸಿ ತಾಣವನ್ನಾಗಿ ಅಭಿವೃದ್ದಿಪಡಿಸಲು ಚಿಂತನೆ ನಡೆಸಲಾಗುತ್ತಿದೆ ಎಂದು ಗೃಹ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ. ಜಿ. ಪರಮೇಶ್ವರ್ ಅವರು ಹೇಳಿದರು.
ಇಂದು ಅಮಾನಿಕೆರೆಗೆ ಭೇಟಿ ನೀಡಿ ಕೆರೆಯಲ್ಲಿ ಎಸ್ಟು ಸಾಮರ್ಥ್ಯದ ನೀರು ಶೇಖರಣೆಯಾಗುತ್ತದೆ ಹಾಗೂ ಬೇಸಿಗೆ ಕಾಲದಲ್ಲಿ ಎಸ್ಟು ನೀರು ಇರುತ್ತವೆ ಎಂಬುವುದರ ಬಗ್ಗೆ ಮಾಹಿತಿಯನ್ನು ಅಧಿಕಾರಿಗಳಿಂದ ಪಡೆದುಕೊಂಡರು. ಕೆರೆಯ ಅಂಗಳದಲ್ಲಿ ಸ್ಮಾರ್ಟ್ ಸಿಟಿ ವತಿಯಿಂದ ಅಭಿವೃದ್ಧಿಪಡಿಸಲಾಗಿರುವ ಸಾರ್ವಜನಿಕರ ವಾಯು ವಿಹಾರದ ಸ್ಥಳ, ಫುಡ್ ಕೋರ್ಟ್, ನೃತ್ಯ ಕಾರಂಜಿಯನ್ನು ವೀಕ್ಷಿಸಿದರು. ಮುಂದಿನ ದಿನಗಳಲ್ಲಿ ಬೋಟಿಂಗ್ ವ್ಯವಸ್ಥೆಯನ್ನು ಸಹ ಪ್ರವಾಸಿಗರಿಗೆ ಕಲ್ಪಿಸಲಾಗುವುದು ಎಂದರು.

ನಂತರ ಮಾಧ್ಯಮದವರ ಜೊತೆ ಮಾತನಾಡಿದ ಅವರು, ಆಗಸ್ಟ್ ೧೫ರೊಳಗಾಗಿ ಅಮಾನಿಕೆರೆಗೆ ಒಂದು ರೂಪವನ್ನು ನೀಡಲಾಗುವುದು ಎಂದ ಅವರು, ಈ ಕೆರೆಯೂ ಪುರಾತನವಾಗಿದ್ದು ತನ್ನದೇ ಅದ ಇತಿಹಾಸವನ್ನು ಹೊಂದಿದೆ. ಅಂದಿನ ಪ್ರಧಾನ ಮಂತ್ರಿಗಳಾಗಿದ್ದ ವಾಜಪೇಯಿ ಅವರು ಕೆರೆಗಳನ್ನು ಅಭಿವೃದ್ದಿ ಪಡಿಸುವುದಕ್ಕಾಗಿ ದೆಹಲಿಯಲ್ಲಿ ಎಲ್ಲಾ ರಾಜ್ಯಗಳ ಮುಖ್ಯಮಂತ್ರಿಗಳ ಸಭೆಯನ್ನು ಕರೆದಿದ್ದರು. ಆ ಸಭೆಗೆ ಅಂದಿನ ಮುಖ್ಯಮಂತ್ರಿ ಎಸ್.ಎಂ. ಕೃಷ್ಣ ಅವರು ರಾಜ್ಯದ ಪ್ರಮುಖ ಕೆರೆಗಳ ಪುನಶ್ಚೇತನ ಮಾಡಲು ಪ್ರಸ್ತಾವನೆಯನ್ನು ಸಿದ್ದಪಡಿಸಿದ್ದರು, ಆ ಪಟ್ಟಿಯಲ್ಲಿ ಅಮಾನಿಕೆರೆಯ ಹೆಸರು ಇತ್ತು ಎಂದು ಅವರು ಈ ಸಂದರ್ಭದಲ್ಲಿ ಸ್ಮರಿಸಿದರು.
ಅಮಾನಿಕೆರೆಗೆ ಹೇಮಾವತಿ ನದಿ ನೀರನ್ನು ಹರಿಸುವುದರ ಮೂಲಕ ಕೆರೆಯ ಜಾಗವನ್ನು ಉಳಿಸುವುದರ ಜೊತೆಗೆ ಆ ಜಾಗವನ್ನು ಒತ್ತುವರಿಯಾಗದ ರೀತಿಯಲ್ಲಿ ರಕ್ಷಣೆ ಮಾಡಲಾಗಿದೆ. ನಗರದ ತ್ಯಾಜ್ಯ ನೀರು ಕೆರೆಗೆ ಬಾರದ ರೀತಿಯಲ್ಲಿ ಕ್ರಮ ವಹಿಸಬೇಕೆಂದು ಅಧಿಕಾರಿಗಳಿಗೆ ತಿಳಿಸಿದರು.



