ವಿಶ್ವ ರಂಗಭೂಮಿ ದಿನಾಚರಣೆಯ ಅಂಗವಾಗಿ 27-03-2024ರಂದು ವಿಶ್ವದ ಎಲ್ಲ ರಂಗಕರ್ಮಿಗಳು ಕಳೆದ ದಿನಗಳ ಆತ್ಮಾವಲೋಕನ ಮಾಡಿಕೊಳ್ಳುತ್ತ ಭವಿಷ್ಯತ್ತಿನ ರಂಗದ ಬಗ್ಗೆ ಚಿಂತಿಸಿ ಯೋಜನೆಗಳನ್ನು ರೂಪಿಸುವುದರ ಜೊತೆಗೆ ಇಡೀ ದಿನ ನಾಟಕ, ಚರ್ಚೆ, ನೃತ್ಯ, ಸಂಗೀತ, ರಂಗಸoದೇಶ ವಾಚನ ಹೀಗೆ ರಂಗಾoಶಗಳೊoದಿಗೆ ದಿನವನ್ನು ಮೀಸಲಿಟ್ಟರು.
ಡಮರುಗ ರಂಗ ತಂಡವು ನೃತ್ಯ, ಕಿರುನಾಟಕ, ರಂಗಗೀತೆಯ ಜೊತೆಗೆ ವರ್ತಮಾನಕ್ಕೆ ಸ್ಪಂದಿಸುವ `ಗಂಗೆಯ ಶಾಪ’ ನಾಟಕ ಪ್ರಯೋಗಿಸಿತು. ಗಂಗೆ ಮಕ್ಕಳ ಮೇಲೆ ಮುನಿದ ಪರಿಣಾಮ ಇಡೀ ಭೂಮಿ ನೀರಿನ ಬವಣೆ ಅನುಭವಿಸುತ್ತಿದೆ. ಭಗೀರಥನಂತೆಯೇ ನಾವು ಗಂಗೆಯನ್ನು ಪ್ರಾರ್ಥಿಸಿ ಸಮಸ್ಯೆಗೆ ಪರಿಹಾರ ಕಂಡುಕೊಳ್ಳೋಣ ಎಂದು ಗಂಗೆಯನ್ನು ಕರೆಯುತ್ತಾರೆ. ಆದರೆ ಗಂಗೆ ನಿಮ್ಮ ಸಮಸ್ಯೆಗೆ ನೀವೇ ಕಾರಣ. ಗೌರಿಯ ಒಡಲಲ್ಲಿದ್ದ ಬೆಟ್ಟಗುಡ್ಡ ಕರಗಿಸಿದ್ದೀರಿ, ಕಣಿವೆಗಳ ನಾಶಪಡಿಸಿದ್ದೀರಿ, ಕೆರೆ, ಕುಂಟೆ, ಒರತೆ, ನದಿ ಮುಚ್ಚಿ ಹಾಳುಗೆಡವಿದ್ದೀರಿ. ನನ್ನನ್ನು ದೂಶಿಸಬೇಡಿ ಎಂದು ಕೈ ಚೆಲ್ಲುತ್ತಾಳೆ. ಈಡಿಪಸ್ ಹೇಳುವ ಹಾಗೆ “ತಾವೇ ಕಟ್ಟಿಕೊಂಡ ಪಾಪ ಅತ್ಯಂತ ಹೇಯವಾದದ್ದು” ಎಂಬ ಮಾತು ತೀರಾ ಸತ್ಯ ಎಂಬ ಅಂಶಗಳನ್ನು ನಾಟಕ ಅನಾವರಣಗೊಳಿಸಿತು. ರಂಗದಲ್ಲಿ ಸ್ನೇಹ ಪ್ರಕಾಶ್, ಚಿನ್ಮಯ, ದ್ರೋಣ, ಸೃಷ್ಟಿ, ನಾಗರಾಜ್ ಅಭಿನಯಿಸಿದರು.