ಸ್ವೇಚ್ವಾಚಾರದ ಬದುಕಿಗೆ ಕಡಿವಾಣ ಹಾಕಿ- ಕುಮಾರಸ್ವಾಮಿ
ಸ್ವೇಚ್ವಾಚಾರದ ಬದುಕಿಗೆ ಕಡಿವಾಣ ಹಾಕಿದರೆ ಏಡ್ಸ್ ನಂತಹ ಮಹಾಮಾರಿ ರೋಗವನ್ನು ತಡೆಯಬಹುದು ಎಂದು ತಿಪಟೂರು ಕಾಲೇಜಿನ ಪ್ರಾಂಶುಪಾಲರಾದ ಪ್ರೊ. ಹೆಚ್. ಬಿ ಕುಮಾರಸ್ವಾಮಿ ಅವರು ತಿಳಿಸಿದ್ದಾರೆ.

ತಿಪಟೂರಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ರೆಡ್ ರಿಬ್ಬನ್ ಕ್ಲಬ್ ಹಾಗೂ ರಾಷ್ಟ್ರೀಯ ಸೇವಾ ಯೋಜನೆ ಘಟಕ ವತಿಯಿಂದ ಬುಧವಾರ ನಡೆದ ವಿಶ್ವ ಏಡ್ಸ್ ದಿನಾಚರಣೆಯ ಅಧ್ಯಕ್ಷತೆವಹಿಸಿ ಅವರು ಮಾತನಾಡಿದರು.
ಯಾವುದೇ ರೋಗ ಬಂದ ನಂತರ ಚಿಕಿತ್ಸೆ ಪಡೆಯುವುದಕ್ಕಿಂತ ರೋಗ ಬರದಂತೆ ಆರೋಗ್ಯವನ್ನು ನೋಡಿಕೊಳ್ಳಬೇಕು ಎಂದು ಅವರು ಹೇಳಿದರು.
ಮಾನವ ಜನ್ಮ ದೊಡ್ಡದು, ಜೋಶ್ಗಳ ಜೊತೆ ಜೀವನವನ್ನು ಜೋಪಾನ ಮಾಡಿಕೊಳ್ಳಿ. ವಿವಿಧ ಕೆಟ್ಟ ಅಭ್ಯಾಸಗಳನ್ನು ಬಿಟ್ಟು, ವಿದ್ಯಾರ್ಥಿ ಜೀವನದಲ್ಲಿ ಉತ್ತಮ ಅಂಕ ಗಳಿಸುವ ಕಡೆ ಹೆಚ್ಚು ಗಮನಹರಿಸಿ ಎಂದು ಕುಮಾರಸ್ವಾಮಿಯವರು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.
ತಿಪಟೂರಿನ ತಾಲೂಕು ಸರ್ಕಾರಿ ಆಸ್ಪತ್ರೆಯ ಐಸಿಟಿಸಿ ಅಧಿಕಾರಿ ಉಮೇಶ್ ಅವರು ಮಾತನಾಡಿ ಎಚ್ಐವಿ ಬಗ್ಗೆ ಸರಿಯಾದ ಮಾಹಿತಿ ಕೊರತೆಯಿಂದ ಇಂದು ಹೆಚ್ಚು ಮಂದಿ ಯುವಕರು ಏಡ್ಸ್ ರೋಗಕ್ಕೆ ಬಲಿಯಾಗುತ್ತಿರುವುದು ವಿಷಾದನೀಯ ಎಂದರು.
ಬದಲಾಗುತ್ತಿರುವ ಸಾಮಾಜಿಕ ಮತ್ತು ಕೌಟುಂಬಿಕ ವಾತಾವರಣದಿಂದ ಹೆಚ್ಚು ಮಂದಿ ಯುವಕರು ರೋಗಕ್ಕೆ ತುತ್ತಾಗುತ್ತಿದ್ದಾರೆ. ಇದರಿಂದ ವಿದ್ಯಾರ್ಥಿಗಳು ಎಚ್ಚರ ವಹಿಸಬೇಕು ಎಂದು ಉಮೇಶ್ ಅವರು ಸಲಹೆ ನೀಡಿದರು.
ಅತಿಥಿಗಳಾದ ಕಾಲೇಜಿನ ಐಕ್ಯೂಎಸಿ ಸಂಚಾಲಕರಾದ ಡಾ. ಟಿ. ವೆಂಕಟಚಲಯ್ಯ ಮಾತನಾಡಿ ಯೌವ್ವನಕ್ಕೆ ಕಾಲಿಟ್ಟ ವಿದ್ಯಾರ್ಥಿಗಳು ದೇಹ ಮತ್ತು ಮನಸ್ಸುನ್ನು ಆರೋಗ್ಯವಾಗಿ ಇಟ್ಟುಕೊಳ್ಳಿ. ಅಪಾಯಕಾರಿಯಾದ ಏಡ್ಸ್ ರೋಗದಿಂದ ದೂರವಿರಿ ಎಂದರು.
ರೆಡ್ ರಿಬ್ಬನ್ ಕ್ಲಬ್ನ ಸಂಚಾಲಕರಾದ ಕೆ. ನಾಗರಾಜು ಸ್ವಾಗತಿಸಿದರು. ಎನ್ಎಸ್ಎಸ್ ಅಧಿಕಾರಿ ಅನುಪ್ರಸಾದ್ .ಕೆ.ಆರ್ ನಿರೂಪಿಸಿದರು.
ಎನ್ಎಸ್ಎಸ್ ಅಧಿಕಾರಿ ಚಿಕ್ಕ ಹೆಗಡೆ ವಂದಿಸಿದರು.
ಏಡ್ಸ್ ಬಗ್ಗೆ ವಿವಿಧ ಸ್ಪರ್ಧೆಯನ್ನು ಹಮ್ಮಿಕೊಳ್ಳಲಾಗಿತ್ತು. ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳು ಇದೇ ಸಂದರ್ಭದಲ್ಲಿ ಪ್ರಶಸ್ತಿ ಫಲಕವನ್ನು ಪಡೆದರು.