ತುಮಕೂರು ವಿಶ್ವವಿದ್ಯಾನಿಲಯದ ಬಿದರಕಟ್ಟೆ ಕ್ಯಾಂಪಸ್ ನಲ್ಲಿ ರೂ ನಾಲ್ಕು ಕೋಟಿ ವೆಚ್ಚದಲ್ಲಿ ನೂತನ ಕಟ್ಟಡ ನಿರ್ಮಾಣ – ಬಿ.ಸುರೇಶ್ ಗೌಡ
ತುಮಕೂರು ವಿಶ್ವವಿದ್ಯಾನಿಲಯದ ನಾಗವಲ್ಲಿ ಬಳಿ ಇರುವ ಬಿದರಕಟ್ಟೆ ಕ್ಯಾಂಪಸ್ ನಲ್ಲಿ ನಿರ್ಮಾಣ ಹಂತದಲ್ಲಿರುವ ವಿವಿಧ ಕಟ್ಟಡಗಳ ನಿರ್ಮಾಣ ಕಾಮಗಾರಿಯನ್ನು ತುಮಕೂರು ಗ್ರಾಮಾಂತರ ವಿಧಾನಸಭಾ ಕ್ಷೇತ್ರದ ಶಾಸಕ ಬಿ. ಸುರೇಶ್ ಗೌಡ ಪರಿಶೀಲಿಸಿದರು.
ತುಮಕೂರು ಗ್ರಾಮಾಂತರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಬರುವ ತುಮಕೂರು ವಿಶ್ವವಿದ್ಯಾನಿಲಯದ ಬಿದರಕಟ್ಟೆ ಕ್ಯಾಂಪಸ್ ಗೆ ಇಂದು ಉಪ ಕುಲಪತಿಗಳೊoದಿಗೆ ಭೇಟಿ ನೀಡಿ ಸುರೇಶ್ ಗೌಡ ಮಾತನಾಡಿದರು.
ಮುಂದೆ ಬರುವಂತ ಶೈಕ್ಷಣಿಕ ವರ್ಷದಲ್ಲಿ ಹೊಸದಾಗಿ ಬಿಸಿಎ ಬಿಬಿಎಂ ಹಾಗೂ ಬಿಕಾಂ ತರಗತಿಗಳನ್ನು ಪ್ರಾರಂಭಿಸಲು ಅವಶ್ಯ ಇರುವಂತ ಕಟ್ಟಡ ನಿರ್ಮಾಣ ಕಾಮಗಾರಿಯನ್ನು ಶಾಸಕರ ಸ್ಥಳೀಯ ಪ್ರದೇಶ ಅಭಿವೃದ್ಧಿ ನಿಧಿಯಡಿ ಹಾಗೂ ಸಿಎಸ್ಆರ್ ಅನುದಾನ ಸೇರಿ ಒಟ್ಟು ರೂ ನಾಲ್ಕು ಕೋಟಿ ವೆಚ್ಚದಲ್ಲಿ ಸುಸಜ್ಜಿತ ಕಟ್ಟಡ ನಿರ್ಮಾಣ ಮಾಡಿಕೊಡುವುದಾಗಿ ಸುರೇಶ್ ಗೌಡರು ತಿಳಿಸಿದರು. ಈ ವಿಚಾರವಾಗಿ ನೂತನ ತರಗತಿಗಳನ್ನು ಬರುವಂತ ಶೈಕ್ಷಣಿಕ ವರ್ಷದಲ್ಲಿ ಪ್ರಾರಂಭಿಸಲು ಉಪಕುಲಪತಿಗಳು ಕೂಡ ಇದಕ್ಕೆ ಸಮ್ಮತಿಸಿದರು.
ತುಮಕೂರು ವಿಶ್ವವಿದ್ಯಾನಿಲಯ ರಾಜ್ಯದಲ್ಲೇ ಒಂದು ಮಾದರಿ ವಿಶ್ವವಿದ್ಯಾನಿಲಯವನ್ನಾಗಿ ಮಾಡಬೇಕೆಂಬ ಮಹದಾಕಾಂಕ್ಷೆಯನ್ನು ಹೊಂದಿರುವುದಾಗಿ ಸುರೇಶ್ ಗೌಡ ತಿಳಿಸಿದರು. ವಿಶ್ವವಿದ್ಯಾನಿಲಯವು ತುಮಕೂರು ಜಿಲ್ಲೆಯ ಒಂದು ಮುಕುಟವಾಗಿ ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಿಗೆ ಹಾಗೂ ವಿದ್ಯಾರ್ಥಿನಿಯರಿಗೆ ಇದೊಂದು ಶ್ರದ್ಧಾ ಕೇಂದ್ರವಾಗಿ ಮತ್ತು ಜೀವನ ರೂಪಿಸುವಂತಹ ಕೇಂದ್ರವನ್ನಾಗಿ ಮಾಡಲು ನಾನು ಹಗಲಿರುಳು ಶ್ರಮಿಸುವುದಾಗಿ ತಿಳಿಸಿದರು.
ಈ ಸಂದರ್ಭದಲ್ಲಿ ವಿವಿಧ ಕೈಗಾರಿಕೋದ್ಯಮಗಳು ಉಪಕುಲಪತಿಗಳಾದ ಡಾಕ್ಟರ್ ವೆಂಕಟೇಶ್ವರಲು ಉಪಸ್ಥಿತರಿದ್ದರು.



