ತುಮಕೂರು:ಅಗ್ನೇಯ ಶಿಕ್ಷಕರ ಕ್ಷೇತ್ರ ಸೇರಿದಂತೆ ರಾಜ್ಯದ 6 ಶಿಕ್ಷಕರ ಕ್ಷೇತ್ರಗಳಿಗೆ ಈ ಬಾರಿ ಚುನಾವಣೆಯ ನಡೆಯುತ್ತಿದ್ದು,ದಾವಣಗೆರೆ, ಚಿತ್ರದುರ್ಗ,ತುಮಕೂರು, ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಗಳನ್ನು ಒಳಗೊಂಡ ಆಗ್ನೇಯ ಶಿಕ್ಷಕರ ಕ್ಷೇತ್ರದ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿರುವ ಡಿ.ಟಿ.ಶ್ರೀನಿವಾಸ್ ಗೆಲುವು ಸಾಧಿಸಲಿದ್ದಾರೆ ಎಂಬ ವಿಶ್ವಾಸವನ್ನು ವಿಧಾನಪರಿಷತ್ ಸದಸ್ಯ ಪುಟ್ಟಣ್ಣ ವ್ಯಕ್ತಪಡಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿಂದು ಮಾತನಾಡಿದ ಅವರು,ಅಗ್ನೇಯ ಶಿಕ್ಷಕರ ಕ್ಷೇತ್ರದ ಅಭ್ಯರ್ಥಿಯಾಗಿರುವ ಡಿ.ಟಿ.ಶ್ರೀನಿವಾಸ್ ಶಿಕ್ಷಣ ಸಂಸ್ಥೆಯೊoದರ ಕಾರ್ಯದರ್ಶಿಯಾಗಿ ಶಿಕ್ಷಕರ ಸಮಸ್ಯೆಯನ್ನು ಮೂಲದಿಂದ ಬಲ್ಲವರಾಗಿದ್ದಾರೆ. ಸಮಸ್ಯೆಯ ಮೂಲ ಮತ್ತು ಪರಿಹಾರ ಎರಡು ಅವರಿಗೆ ತಿಳಿದಿದೆ. ಇಂತಹವರು ವಿಧಾನಪರಿಷತ್ಗೆ ಆಯ್ಕೆಯಾಗಿ ಬಂದರೆ, ಶಿಕ್ಷಣ ಕ್ಷೇತ್ರದ ಜಲ್ವಂತ ಸಮಸ್ಯೆಗಳನ್ನು ಪರಿಹರಿಸಲು ಸಾಧ್ಯವಾಗುತ್ತದೆ ಎಂದರು.
ರಾಜ್ಯದಲ್ಲಿರುವ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರ ಶಿಕ್ಷಕ ಸ್ನೇಹಿ ಆಡಳಿತವನ್ನು ನೀಡುತ್ತಾ ಬಂದಿದೆ.2006ರ ನಂತರ ನೇಮಕವಾದ ಸರಕಾರಿ ನೌಕರರಿಗೆ ಎನ್.ಪಿ.ಎಸ್ ಬದಲು ಒಪಿಎಸ್ ನೀಡಲು ಈಗಾಗಲೇ ಸಮಿತಿ ರಚಿಸಿದ್ದು, ಸಮಿತಿಯ ವರದಿಯಿಂದ ಶಿಕ್ಷಕರಿಗೂ ಅನುಕೂಲವಾಗಲಿದೆ. ಅಲ್ಲದೆ,ಪೂರಕ ಬೋಧನೆಗೆ ಸಂಬoಧಿಸಿದoತೆ ಹೊರಡಿಸಿದ್ದ ರಜೆ ಕಡಿತ ಮಾಡಿ ಹೊರಡಿಸಿದ್ದ ಆದೇಶವನ್ನು ರದ್ದು ಪಡಿಸಿ, ಮೇ.29 ರಿಂದಲೇ ಶಾಲೆಗಳ ಆರಂಭಕ್ಕೆ ಆದೇಶ ನೀಡಲಾಗಿದೆ.ಮುಖ್ಯಮಂತ್ರಿ ಮತ್ತು ಉಪಮುಖ್ಯಮಂತ್ರಿಗಳು ಶ್ರೀನಿವಾಸ್ ಅವರಿಗೆ ಟಿಕೇಟ್ ನೀಡಿದ್ದಾರೆ.ಅವರನ್ನು ಗೆಲ್ಲಿಸಿಕೊಳ್ಳುವುದು ನಮ್ಮೆಲ್ಲರ ಜವಾಬ್ದಾರಿ ಎಂದರು.