ಆದರ್ಶ ಯುವತಿ ಮಂಡಳಿ, ಭೂಶಕ್ತಿ ಕೇಂದ್ರ ನೆಲಹಾಲ್,ಮಕಾಮ್ ಕರ್ನಾಟಕದ ಸಹಯೋಗದಲ್ಲಿ ಯಲದಬಾಗಿ ಗ್ರಾಮ ಪಂಚಾಯಿತಿಯ ಆವರಣದಲ್ಲಿ ರೈತ ಮಹಿಳಾ ದಿನಾಚರಣೆಯನ್ನು ಆಚರಿಸಲಾಯಿತು.
ಕೃಷಿಯಲ್ಲಿ ಮಹಿಳೆಯರ ಪಾತ್ರ ಅಪಾರವಾಗಿದೆ. ಕೃಷಿ ಚಟುವಟಿಕೆಗಳ ಆರಂಭದಿಂದ ಕೊನೆಯವರೆಗೂ ಬಿಡುವಿಲ್ಲದೆ ಬೀಜ ಬಿತ್ತನೆ, ಬೆಳೆ ಕಟಾವು, ಕುರಿ,ಮೇಕೆ, ಹಸು ಸಾಕಾಣಿಕೆ ಇತ್ಯಾದಿಗಳಲ್ಲಿ ತನ್ನನ್ನು ತೊಡಗಿಸಿಕೊಂಡಿದ್ದಾರೆ.ಹಾಗಾಗಿ ನಮ್ಮ ಆಹಾರ ಮತ್ತು ಕೃಷಿ ಪದ್ಧತಿಗೆ ತಮ್ಮದೇ ಆದ ಕೊಡುಗೆಯನ್ನು ನೀಡುತ್ತಿರುವ ಮಹಿಳಾ ರೈತರನ್ನು ಗುರುತಿಸುವ ಮತ್ತು ಗೌರವಿಸುವ ಸಲುವಾಗಿ ರೈತ ಮಹಿಳಾ ದಿನಾಚರಣೆಯನ್ನು ಆಚರಿಸುವಂತೆ ಸರ್ಕಾರವು ಸುತ್ತೋಲೆ ಹೊರಡಿಸಿರುವುದು ಸಂತಸದ ವಿಷಯ. ಕೃಷಿ ಸಂಬಂಧಿತ ಎಲ್ಲಾ ಕೆಲಸಗಳಲ್ಲಿ 60-75% ರಷ್ಟು ಮಹಿಳೆಯರು ಭಾಗಿಯಾಗಿದ್ದಾರೆ ಸರ್ಕಾರವು ಅವರನ್ನು ರೈತರಾಗಿ ಗುರುತಿಸುವುದು ಅಗತ್ಯವಾಗಿದೆ ಎಂದು ಆದರ್ಶ ಯುವತಿ ಮಂಡಳಿಯ ಅಶ್ವಿನಿ ರವರು ಕಾರ್ಯಕ್ರಮದಲ್ಲಿ ಮಾತನಾಡಿದರು.
ರೈತ ಸಂಪರ್ಕ ಕೇಂದ್ರದ ಶಾಂತಕುಮಾರ್ ರವರು ರೈತ ಮಹಿಳೆಯರನ್ನು ಗುರುತಿಸಿ ಗೌರವಿಸುವುದು ಶ್ಲಾಘನೀಯ ಕಾರ್ಯ. ಮಹಿಳಾ ರೈತರು ಅದೃಶ್ಯವಾಗದಂತೆ ರೈತ ಸಂಪರ್ಕ ಕೇಂದ್ರದ ಸೌಲಭ್ಯಗಳನ್ನು ಪಡೆದುಕೊಳ್ಳಬೇಕು ಎಂದು ತಿಳಿಸಿದರು.
ಶೇಕಡಾ 70 ರಷ್ಟು ಮಹಿಳಾ ರೈತರು ಇದ್ದಾರೆ ಅವರ ಹಕ್ಕುಗಳನ್ನು ರಕ್ಷಿಸುವ,ರೈತರೆಂದು ಅವರ ಗುರುತನ್ನು ಖಾತ್ರಿಪಡಿಸಲು ಸಂಪನ್ಮೂಲಗಳ ಮೇಲಿನ ಅವರ ಹಕ್ಕುಗಳನ್ನು ಅರಿಯಲು ಸರ್ಕಾರವು ಕಾರ್ಯನಿರ್ವಹಿಸಬೇಕಿದೆ ಎಂದು ಯಲದಬಾಗಿ ಪಂಚಾಯಿತಿಯ ಪಿಡಿಒ ಭಾಗ್ಯಲಕ್ಷ್ಮಿ ರವರು ಅಭಿಪ್ರಾಯ ವ್ಯಕ್ತಪಡಿಸಿದರು.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಸುರೇಖಾರವರು ಮಹಿಳಾ ರೈತರನ್ನು ಅಭಿನಂದಿಸಿ ಅವರ ಆರೋಗ್ಯ , ಪೌಷ್ಟಿಕತೆ, ಹಾಗೂ ಸರ್ಕಾರದಯೋಜನೆಗಳ ಕುರಿತು ತಿಳಿಸಿದರು.
ರೈತ ಮಹಿಳಾ ದಿನದ ಇತಿಹಾಸ , ಮಹಿಳಾ ರೈತರಿಗೆ ಭೂಮಿ ಹಕ್ಕು, ಸಮಾನ ಸವಲತ್ತು ಪಡೆಯಲು, ಮಹಿಳಾ ರೈತ ಎಫ್ಪಿಒಗಳನ್ನು ಬಲಪಡಿಸುವಂತೆ ಮಕಾಮ್ ಕರ್ನಾಟಕ ಸಂಘಟನೆ ಹಾಗೂ ಸಮೂಹ ಸಂಘಟನೆಗಳು ಸೇರಿ ಸರ್ಕಾರವನ್ನು ಆಗ್ರಹಿಸುತ್ತಿವೆ ಎಂದು ಆದಿಜನ ಪಂಚಾಯಿತಿಯ ಸಂಯೋಜಕರು ರಾಮಲಿಂಗಯ್ಯ ನವರು ಮಾತನಾಡಿದರು.
ಕಾರ್ಯಕ್ರಮದಲ್ಲಿ ತೋಟಗಾರಿಕೆ ಇಲಾಖೆಯ ಮಹಾಂತೇಶ್, ಯಲದಬಾಗಿ ಗ್ರಾಮಪಂಚಾಯಿತಿಯ ಉಪಾಧ್ಯಕ್ಷೆ. ಅಮ್ಮಾಜಮ್ಮ, ಸದಸ್ಯರುಗಳು, ವಿವಿಧ ಮಹಿಳಾ ಸಂಘಗಳ ಸದಸ್ಯರು, ಅಂಗನವಾಡಿ ಕಾರ್ಯಕರ್ತೆಯರು,ಆದಿಜನ ಪಂಚಾಯಿತಿಯ ಸದಸ್ಯರು,ಗ್ರಾಮದ ಮಹಿಳೆಯರು ಭೂಶಕ್ತಿ ಕೇಂದ್ರದ ಕೇಂದ್ರದ ಮಲ್ಲಣ್ಣ,ಆದರ್ಶ ಯುವತಿ ಮಂಡಳಿಯ ಮಂಜುಳ,ನೆರೆಹೊರೆ ಸಂಸತ್ತಿನ ಸದಸ್ಯರು ಮತ್ತು ಊರಿನ ಗ್ರಾಮಸ್ಥರು ಭಾಗವಹಿಸಿದ್ದರು.ಕಾರ್ಯಕ್ರಮದಲ್ಲಿ ಭಾಗವಹಿಸಿದ 100 ರೈತ ಮಹಿಳೆಯರಿಗೆ ಮಾವು, ಬೇವು, ಹಲಸಿನ ಗಿಡಗಳನ್ನು ಸಿರಾ ಅರಣ್ಯ ಇಲಾಖೆ ವತಿಯಿಂದ ನೀಡಿ ಅಭಿನಂದಿಸಲಾಯಿತು. ಆದರ್ಶ ಯುವತಿ ಮಂಡಳಿಯ ವಿಜಯಲಕ್ಷ್ಮಿ ಕಾರ್ಯಕ್ರಮವನ್ನು ನಿರೂಪಿಸಿದರು.