ಪರೀಕ್ಷೆಯೆದುರಿಸಲು ಆತ್ಮವಿಶ್ವಾಸ ಮುಖ್ಯ , ಪ್ರಿಯಾ ಪ್ರದೀಪ್ ಯಾವುದೇ ಪರೀಕ್ಷೆಯನ್ನು ಎದುರಿಸುವಲ್ಲಿ ಆತ್ಮವಿಶ್ವಾಸ ಬಹುಮುಖ್ಯವಾಗುತ್ತದೆ. ಸಿದ್ಧತೆ ಸಮರ್ಪಕವಾಗಿದ್ದಲ್ಲಿ ಉತ್ತಮ ರ್ಯಾಂಕಿAಗ್ ಪಡೆಯುವುದು ಖಂಡಿತಾ ಸಾಧ್ಯ ಎಂದು ವಿದ್ಯಾವಾಹಿನಿ ಸಮೂಹಶಿಕ್ಷಣ ಸಂಸ್ಥೆಗಳ ನಿರ್ದೇಶಕರಾದ ಪ್ರಿಯಾ ಪ್ರದೀಪ್ ಹೇಳಿದರು.ಅವರು ವಿದ್ಯಾನಿಧಿ ಪದವಿಪೂರ್ವ ಕಾಲೇಜಿನಲ್ಲಿ ಏರ್ಪಡಿಸಲಾಗಿದ್ದ ನೇವಿಗೇಟ್ ಟು ಎಕ್ಸೆಲೆನ್ಸ್- ಜೆಇಇ, ನೀಟ್ ಪರೀಕ್ಷೆಗಳಿಗೆ ಪೂರಕ ಸಿದ್ಧತೆಯ ಕುರಿತ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಈ ಸಂದರ್ಭದಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿದ ಎಐಡಿ ಇಂಡಿಯಾದ ಸಂಸ್ಥಾಪಕ ಕಾರ್ಯದರ್ಶಿ ಹಾಗೂ ಆಹಾಗುರು ವ್ಯವಸ್ಥಾಪಕ ನಿದೇಶಕರಾದ ಡಾ. ಬಾಲಾಜಿ ಸಂಪತ್, ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸುವುದೆಂದರೆ ಮ್ಯಾರಥಾನ್ ಓಟದಂತೆ, ಮೊದಲಿನಿಂದ ಕೊನೆಯವರೆಗೂ ಒಂದೇ ಬಗೆಯ ಕ್ಷಮತೆಯನ್ನು ಉಳಿಸಿಕೊಳ್ಳುವವನು ಮಾತ್ರ ಗುರಿಯನ್ನು ತಲುಪುವುದು ಸಾಧ್ಯವಾಗುತ್ತದೆ. ವೇಗವನ್ನು ಪದೇ ಪದೇ ಬದಲಾಯಿಸಿಕೊಳ್ಳುವ ಮನಸ್ಥಿತಿ ಹೊಂದಿರುವವರು ಬಲುಬೇಗನೇ ದಣಿಯುತ್ತಾರೆ ಮಾತ್ರವಲ್ಲ ತಮ್ಮ ಉದ್ದೇಶದಲ್ಲಿ ಎಂದೂ ಸಫಲರಾಗುವುದಿಲ್ಲ ಎಂದರು. ಕಠಿಣವೆನಿಸುವ ವಿಷಯಗಳನ್ನು ಒಂದು ಹಂತದವರೆಗೆ ಬದಿಗಿರಿಸಿ, ಸುಲಭವೆನ್ನಿಸುವುದನ್ನು ಪೂರ್ತಿ ಕಲಿಯುವುದನ್ನು ಅಭ್ಯಾಸ ಮಾಡಿಕೊಳ್ಳಿ. ಹೆಚ್ಚಿನ ಸಂದರ್ಭಗಳನ್ನು ಮಕ್ಕಳು ಪರೀಕ್ಷೆ ಕಷ್ಟವೆನ್ನುವ ಭಯದಲ್ಲಿ ಸುಲಭವಾದ ಪ್ರಶ್ನೆಗಳನ್ನೂ ಸರಿಯಾಗಿ ಉತ್ತರಿಸುವುದಿಲ್ಲ. ಎಪ್ಪತ್ತು ಶೇಕಡಾ ಪ್ರಶ್ನೆಗಳು ಸುಲಭವಾಗಿಯೇ ಇರುತ್ತವೆ. ಅವುಗಳನ್ನು ಅನಗತ್ಯವಾಗಿ ಸಂಕೀರ್ಣಗೊಳಿಸುವ ಬದಲು ಅವನ್ನು ಸರಿಯಾಗಿ ಉತ್ತರಿಸುವ ಕಡೆಗೆ ಗಮನವಿರಲಿ. ಅದು ಸಾಧ್ಯವಾಗಬೇಕಾದರೆ ಏಕಾಗ್ರತೆಯನ್ನು ಸಾಧಿಸಬೇಕು. ಇದರೊಂದಿಗೆ ಸಮಯಪಾಲನೆಯನ್ನು ಅಭ್ಯಾಸ ಮಾಡಿಕೊಳ್ಳಿ. ಕಲಿಯುವಾಗ ಸಾವಿರ ತಪ್ಪುಗಳನ್ನು ಮಾಡಿದರೆ ಹೆಮ್ಮೆಪಡಿ. ಅವುಗಳಿಂದ ನೀವು ಕಲಿಯುತ್ತೀರಿ ಎಂದು ಬಾಲಾಜಿ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಿದರು. ವಿದ್ಯಾನಿಧಿ ಕಾಲೇಜಿನ ಪ್ರಾಂಶುಪಾಲರು ಉಪಸ್ಥಿತರಿದ್ದರು. ಉಪನ್ಯಾಸವೃಂದ ಮತ್ತು ವಿದ್ಯಾರ್ಥಿವೃಂದದವರು ಕಾರ್ಯಕ್ರಮದ ಪ್ರಯೋಜನ ಪಡೆದರು. ಉಪನ್ಯಾಸಕಿ ಹೇಮಲತಾ ಎಂ.ಎಸ್. ಕಾರ್ಯಕ್ರಮ ನಿರ್ವಹಿಸಿ ವಂದಿಸಿದರು. ದೀಪಾ ಸ್ವಾಗತಿಸಿದರು. ವಿದ್ಯಾರ್ಥಿಗಳು ಪ್ರಶ್ನೋತ್ತರ ಕಾರ್ಯಕ್ರಮದಲ್ಲಿ ಭಾಗವಹಿಸಿದರು.