ತುಮಕೂರು-ರಾಜ್ಯದಲ್ಲಿ ಪ್ರಮುಖ ತೋಟಗಾರಿಕಾ ಬೆಳೆಗಳಲ್ಲಿ ಒಂದಾಗಿರುವ ಕೊಬ್ಬರಿ ಬೆಲೆ ಪಾತಾಳಕ್ಕೆ ಕುಸಿದಿದ್ದು, ಬೆಳೆಗಾರರು ತೀವ್ರ ಸಂಕಷ್ಟಕ್ಕೆ ಸಿಲುಕುವುದರೊಂದಿಗೆ ತೆಂಗು ಬೆಳೆಯಲು ಆಸಕ್ತಿ ಕಳೆದುಕೊಳ್ಳುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಕೂಡಲೇ ಕೇಂದ್ರ ಸರ್ಕಾರ ಕ್ವಿಂಟಾಲ್ ಕೊಬ್ಬರಿಗೆ ೧೫ ಸಾವಿರ ರೂ. ಬೆಂಬಲ ಬೆಲೆ ಘೋಷಿಸುವಂತೆ ಮಾಜಿ ಸಂಸದ ಎಸ್.ಪಿ. ಮುದ್ದಹನುಮೇಗೌಡ ಒತ್ತಾಯಿಸಿದ್ದಾರೆ.
ಕೇಂದ್ರ ಸರ್ಕಾರ ರಾಗಿ ಸೇರಿದಂತೆ ೧೪ ಬೆಳೆಗಳಿಗೆ ಬೆಂಬಲ ಬೆಲೆ ಹೆಚ್ಚಳ ಮಾಡಿರುವಂತೆ ಕೊಬ್ಬರಿಗೂ ಬೆಂಬಲ ಬೆಲೆ ಘೋಷಿಸುವಂತೆ ಪ್ರಧಾನ ಮಂತ್ರಿಗಳಿಗೆ ಪತ್ರ ಬರೆಯುತ್ತಿರುವುದಾಗಿ ಅವರು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಈ ಹಿಂದೆ ಕ್ವಿಂಟಾಲ್ ಕೊಬ್ಬರಿಗೆ ೧೮ ಸಾವಿರ ರೂ. ಬೆಲೆ ನಿಗದಿಪಡಿಸಲಾಗಿತ್ತು. ಆದರೆ ಪ್ರಸ್ತುತ ಕ್ವಿಂಟಾಲ್ ಕೊಬ್ಬರಿ ೮೬೦೦ ರೂ.ಗಳಿಗೆ ಕುಸಿದಿದೆ. ಕೊಬ್ಬರಿ ಇಳುವರಿ ಹಾಗೂ ಬೆಲೆ ಎರಡೂ ಕುಸಿತ ಕಂಡಿದೆ. ಆದ್ದರಿಂದ ನಫೆಡ್ ಮಧ್ಯೆ ಪ್ರವೇಶಿಸಿ ಕನಿಷ್ಠ ೧೫ ಸಾವಿರ ರೂ. ಬೆಂಬಲ ಬೆಲೆ ಘೋಷಿಸಬೇಕು ಎಂದು ಅವರು ಆಗ್ರಹಿಸಿದರು.
ಕೊಬ್ಬರಿಗೆ ಬೆಂಬಲ ಬೆಲೆ ೧೧೭೨೦ ರೂ. ಘೋಷಣೆ ಮಾಡಲಾಗಿದೆ. ೧೬೩೦೦ ರೂ. ನಷ್ಟು ಬೆಂಬಲ ಬೆಲೆಯನ್ನು ನೀಡಬೇಕು ಎಂದು ಕೃಷಿ ಇಲಾಖೆ ಹೇಳಿದೆ. ಈ ಹಿಂದಿನ ರಾಜ್ಯ ಸರ್ಕಾರ ಕೂಡ ಕೇಂದ್ರಕ್ಕೆ ಬೆಂಬಲ ಬೆಲೆ ನೀಡುವಂತೆ ಮನವಿ ಮಾಡಿತ್ತು. ಬೆಲೆ ಕಡಿಮೆಯಾಗಿರುವ ಪರಿಣಾಮ ಕೊಬ್ಬರಿ ಉತ್ಪಾದನೆಯೂ ಕಡಿಮೆಯಾಗುತ್ತಿದೆ. ಇದಕ್ಕೆ ಕಾರಣಗಳನ್ನು ಹುಡುಕುವ ಕೆಲಸವೂ ಆಗಬೇಕಿದೆ ಎಂದರು.
ಕ್ವಿAಟಾಲ್ ಕೊಬ್ಬರಿಗೆ ಕನಿಷ್ಠ ೧೫ ಸಾವಿರ ರೂ. ಬೆಲೆ ಘೋಷಿಸುವಂತೆ ಪ್ರಧಾನಿ ನರೇಂದ್ರ ಮೋದಿ ಹಾಗೂ ಕೇಂದ್ರ ಕೃಷಿ ಸಚಿವರಿಗೆ ಪತ್ರ ಬರೆಯುತ್ತಿದ್ದೇವೆ ಎಂದು ಅವರು ತಿಳಿಸಿದರು.
ನಾನು ಈ ಹಿಂದೆ ಸಂಸದನಾಗಿದ್ದಾಗ ರಾಜ್ಯದ ಎಲ್ಲ ಸಂಸದರ ಜತೆಗೂಡಿ ಕೊಬ್ಬರಿ ಬೆಲೆ ಹೆಚ್ಚಳ ಮಾಡುವಂತೆ ಕೇಂದ್ರ ಸರ್ಕಾರಕ್ಕೆ ಮನವಿ ಪತ್ರ ಸಲ್ಲಿಸುತ್ತಿದ್ದೆ. ಈಗಲೂ ಸಹ ರಾಜ್ಯದ ಎಲ್ಲ ಸಂಸದರು ಕೊಬ್ಬರಿಗೆ ಬೆಂಬಲ ಬೆಲೆ ನಿಗದಿಪಡಿಸುವಂತೆ ಕೇಂದ್ರ ಸರ್ಕಾರವನ್ನು ಒತ್ತಾಯಿಸಲು ಧ್ವನಿ ಎತ್ತಬೇಕು ಎಂದು ಹೇಳಿದರು.
ಕೊಬ್ಬರಿ ಬೆಲೆ ಪಾತಾಳಕ್ಕೆ ಕುಸಿದಿದ್ದು, ಬೆಳೆಗಾರರು ತೀವ್ರ ಸಂಕಷ್ಟ
1 Comment
1 Comment
-
Pingback: ತುಮಕೂರು ಲೋಕಸಭಾ ಕ್ಷೇತ್ರದಿಂದ ಬಿಜೆಪಿ ಟಿಕೆಟ್ನ ಪ್ರಬಲ ಆಕಾಂಕ್ಷಿ - Target Truth