ತುಮಕೂರು: ನೈತಿಕತೆ ಸಂಶೋಧನೆಯ ಬೆನ್ನೆಲುಬು ಇದ್ದಂತೆ. ಆದರೆ, ಇತ್ತೀಚಿನ ದಿನಗಳಲ್ಲಿ ಸಂಶೋಧನ ಕ್ಷೇತ್ರದಲ್ಲಿ ನೈತಿಕತೆ ಕುಸಿಯುತ್ತಿದೆ ಎಂದು ತುಮಕೂರು ವಿವಿ ಕುಲಪತಿ ಪ್ರೊ. ಎಂ. ವೆಂಟೇಶ್ವರಲು ಕಳವಳ ವ್ಯಕ್ತಪಡಿಸಿದರು.
ವಿಶ್ವವಿದ್ಯಾಲಯ ಕಲಾ ಕಾಲೇಜಿನ ಗ್ರಂಥಾಲಯ ಮತ್ತು ಮಾಹಿತಿ ಕೇಂದ್ರ, ಗ್ರಂಥಾಲಯ ಮತ್ತು ಮಾಹಿತಿ ವಿಜ್ಞಾನ ವಿಭಾಗದ ವತಿಯಿಂದ ಗುರುವಾರ ಆಯೋಜಿಸಿದ್ದ ‘ವಿದ್ವತ್ ಬರವಣಿಗೆ ಮತ್ತು ಸಂಶೋಧನೆಯಲ್ಲಿ ನೈತಿಕತೆ’ ಕುರಿತ ರಾಷ್ಟç ಮಟ್ಟದ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದರು.
ಗುಣಮಟ್ಟದ ಶಿಕ್ಷಣಕ್ಕಾಗಿ ಸಂಶೋಧನೆ ಆಧಾರಿತ ವಿಶ್ವವಿದ್ಯಾನಿಲಯಗಳ ಸಂಖ್ಯೆ ಏರಿಕೆಯಾಗಬೇಕು. ಉನ್ನತ ಶಿಕ್ಷಣದ ಮುಖ್ಯ ಉದ್ದೇಶವನ್ನು ವಿಶ್ವವಿದ್ಯಾನಿಲಯಗಳು ಮರೆತು, ಶಿಕ್ಷಣದ ಸೌಲಭ್ಯಗಳನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳದೆ ವಿದ್ಯಾರ್ಥಿಗಳ ಭವಿಷ್ಯವನ್ನು ಉತ್ತಮವಾಗಿ ರೂಪಿಸುವಲ್ಲಿ ವಿಫಲವಾಗುತ್ತಿವೆ ಎಂದು ವಿಷಾದ ವ್ಯಕ್ತಪಡಿಸಿದರು.
ತುಮಕೂರು ವಿವಿಯಿಂದ ಪ್ರಸಕ್ತ ಶೈಕ್ಷಣಿಕ ವರ್ಷದಲ್ಲಿ ನೂರಕ್ಕೂ ಹೆಚ್ಚು ಸಂಶೋಧನ ಪ್ರಸ್ತಾವನೆಗಳು ಸಲ್ಲಿಕೆಯಾಗಿವೆ. ವಿವಿಯನ್ನು ಒಂದು ಉನ್ನತ ಸಂಶೋಧನ ಕೇಂದ್ರವನ್ನಾಗಿ ರೂಪಿಸಲು ಪ್ರಾಧ್ಯಾಪಕರು ನಿರಂತರ ಶ್ರಮಿಸಬೇಕು ಎಂದರು.
ಸ್ನಾತಕೋತ್ತರ ಗ್ರಂಥಾಲಯ ಮತ್ತು ಮಾಹಿತಿ ವಿಜ್ಞಾನ ಅಧ್ಯಯನ ಮತ್ತು ಸಂಶೋಧನ ವಿಭಾಗದ ಪ್ರಾಧ್ಯಾಪಕ ಪ್ರೊ. ಬಿ. ಟಿ. ಸಂಪತ್ ಕುಮಾರ್ ಮಾತನಾಡಿ, ಪ್ರಾಧ್ಯಾಪಕರು ಅತ್ಯಂತ ಪ್ರತಿಷ್ಠಿತ ವಿದ್ವತ್ ಪತ್ರಿಕೆಗಳಲ್ಲಿ ಒಳ್ಳೆಯ ಲೇಖನಗಳನ್ನು ಪ್ರಕಟಿಸಬೇಕು. ಸಂಶೋಧನ ಕ್ಷೇತ್ರದ ಬಗ್ಗೆ ಜ್ಞಾನ ಮತ್ತು ಅರಿವಿನ ಕೊರತೆಯಿರುವ ಕಾರಣ ಗುಣಮಟ್ಟದ ಲೇಖನಗಳನ್ನು ಪ್ರಕಟಿಸಲು ವಿಫಲರಾಗುತ್ತಿದ್ದೇವೆ ಎಂದರು.
ಸಂಶೋಧನೆಗಳನ್ನು ಸಮಾಜದೊಂದಿಗೆ ಹಂಚಿಕೊಳ್ಳುವ ಉದ್ದೇಶದ ಕಾರ್ಯಾಗಾರಗಳನ್ನು ಆಯೋಜಿಸಬೇಕು. ಸಂಶೋಧನೆಗೆ ಗಣನೀಯವಾಗಿ ಕೊಡುಗೆ ನೀಡದ ಯಾರ ಹೆಸರನ್ನು ಸಂಶೋಧನ ಪ್ರಸ್ತಾವನೆ, ಪ್ರಬಂಧದಲ್ಲಿ ಸೇರಿಸಬಾರದು ಎಂದರು.
ವಿವಿ ಕಲಾ ಕಾಲೇಜಿನ ಪ್ರಾಂಶುಪಾಲ ಪ್ರೊ. ಬಿ. ಕರಿಯಣ್ಣ ಮಾತನಾಡಿ, ಅಧ್ಯಾಪಕರಿಗೆ ಸಂಶೋಧನೆಯ ಮಹತ್ವದ ಅರಿವನ್ನು ಮೂಡಿಸುವ ಕಾರ್ಯಾಗಾರಗಳನ್ನು ಆಯೋಜಿಸಬೇಕು. ಕೇವಲ ಹಣ ಸಂಪಾದನೆಗಾಗಿ, ಉನ್ನತ ಪದವಿಗಳಿಗಾಗಿ ಪಿಎಚ್ಡಿ ಮಾಡುತ್ತಿದ್ದೇವೆ. ಸಂಶೋಧನೆಗಳಲ್ಲಿ ಕೃತಿಚೌರ್ಯ, ಸ್ವಜನಪಕ್ಷಪಾತ ಹೆಚ್ಚಾಗುತ್ತಿದೆ ಎಂದು ತಿಳಿಸಿದರು.
ಕಾರ್ಯಕ್ರಮದ ಸಂಘಟನಾ ಕಾರ್ಯದರ್ಶಿ ಡಾ. ಎಸ್. ಸುಮಾದೇವಿ ಪ್ರಾಸ್ತಾವಿಕ ನುಡಿಗಳನ್ನಾಡಿ ಸ್ವಾಗತಿಸಿದರು. ಸಹಾಯಕ ಪ್ರಾಧ್ಯಾಪಕ ಡಾ. ಕೆ. ವಿ. ಸಿಬಂತಿ ಪದ್ಮನಾಭ ನಿರೂಪಿಸಿದರು. ಉಪನ್ಯಾಸಕಿ ಹರ್ಷಿತಾ ವಂದಿಸಿದರು.
ಸಂಶೋಧನೆಯಲ್ಲಿ ನೈತಿಕತೆ ಕುಸಿಯುತ್ತಿದೆ: ಕುಲಪತಿ ಕಳವಳ
Leave a comment
Leave a comment