ಜೆಡಿಎಸ್ ರಾಜ್ಯಾಧ್ಯಕ್ಷ, ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಹಾಗೂ ತುಮಕೂರು ಸಂಸದ ವಿ.ಸೋಮಣ್ಣ ಅವರು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರದಲ್ಲಿ ಸಚಿವರಾಗಿ ಪ್ರಮಾಣವಚನ ಸ್ವೀಕಾರ ಮಾಡಿದ ಸಂದರ್ಭದಲ್ಲಿ ಸೋಮವಾರ ನಗರದ ಜೆಡಿಎಸ್ ಕಚೇರಿಯಲ್ಲಿ ಮುಖಂಡರು ಸಂಭ್ರಮ ಆಚರಿಸಿದರು.
ಮಾಜಿ ಶಾಸಕ ಹೆಚ್.ನಿಂಗಪ್ಪ, ಜಿಲ್ಲಾ ಜೆಡಿಎಸ್ ಅಧ್ಯಕ್ಷ ಆರ್.ಸಿ.ಆಂಜನಪ್ಪ, ಜಿಲ್ಲಾ ಕಾರ್ಯಾಧ್ಯಕ್ಷ ಟಿ.ಆರ್.ನಾಗರಾಜು ನೇತೃತ್ವದಲ್ಲಿ ಪಕ್ಷದ ಮುಖಂಡರು, ಕಾರ್ಯಕರ್ತರು ಕೇಕ್ ಕತ್ತರಿಸಿ, ಸಿಹಿ ವಿತರಿಸಿ, ಪಟಾಕಿ ಸಿಡಿಸಿ ಸಂಭ್ರಮಿಸಿದರು. ಜೈಕಾರ ಮೊಳಗಿಸಿ ವಿಜಯೋತ್ಸವ ಆಚರಿಸಿದರು.
ಈ ವೇಳೆ ಮಾತನಾಡಿದ ಮಾಜಿ ಶಾಸಕ ಹೆಚ್.ನಿಂಗಪ್ಪ, ತುಮಕೂರು ಕ್ಷೇತ್ರದ ಸಂಸದರಾಗಿ ಎನ್.ಡಿ.ಎ ಅಭ್ಯರ್ಥಿ ವಿ.ಸೋಮಣ್ಣ ಅವರು 1.75 ಲಕ್ಷ ಮತಗಳ ಅಂತರದಿoದ ಭರ್ಜರಿ ಗೆಲುವು ಪಡೆದಿರುವುದು ಖುಷಿ ತಂದಿದೆ. ಇದರ ಜೊತೆಗೆ ಕುಮಾರಸ್ವಾಮಿಯವರು ಹಾಗೂ ಸೋಮಣ್ಣನವರು ಕೇಂದ್ರದ ಮಂತ್ರಿಯಾಗಿರುವುದು ಸಂತಸವನ್ನು ಇಮ್ಮಡಿಗೊಳಿಸಿದೆ, ಸೋಮಣ್ಣ ಅವರು ಪ್ರಥಮ ಬಾರಿಗೆ ತುಮಕೂರಿಗೆ ಕೇಂದ್ರ ಮಂತ್ರಿ ಸ್ಥಾನ ದೊರೆಯಲು ಕಾರಣರಾಗಿದ್ದರೆ. ಈ ಮೂಲಕ ಜೆಡಿಎಸ್ ಹಾಗೂ ಬಿಜೆಪಿಗೆ ದೊಡ್ಡ ಶಕ್ತಿ ಬಂದಿದೆ ಎಂದರು.
ನಮ್ಮ ಜಿಲ್ಲೆ ವ್ಯಾಪ್ತಿಯ ಸಂಸದರಾದ ಡಾ.ಮಂಜುನಾಥ್ ಹಾಗೂ ಗೋವಿಂದ ಕಾರಜೋಳ ಅವರೂ ಎನ್ಡಿಎ ಸಂಸದರಾಗಿರುವುದು ಎರಡೂ ಪಕ್ಷಗಳ ಕಾರ್ಯಕರ್ತರಲ್ಲಿ ಹುಮ್ಮಸ್ಸು ಹೆಚ್ಚಾಗಿದೆ. ಜೆಡಿಎಸ್ ಅನ್ನು ಮಗಿಸುತ್ತೇವೆ ಎಂದು ಕೆಲವರು ಹೇಳಿಕೊಂಡಿದ್ದರು. ಅದು ಸಾಧ್ಯವಿಲ್ಲ, ಫಿನೀಕ್ಸ್ ಪಕ್ಷಿಯಂತೆ ಪಕ್ಷ ಮತ್ತೆಮತ್ತೆ ಎದ್ದುನಿಲ್ಲುತ್ತದೆ. ಜೆಡಿಎಸ್ಗೆ ಯಾವತ್ತೂ ಅಂತ್ಯವಿಲ್ಲ ಎಂದು ಹೇಳಿದರು.
ಜಿಲ್ಲಾ ಜೆಡಿಎಸ್ ಅಧ್ಯಕ್ಷ ಟಿ.ಆರ್.ಆಂಜನಪ್ಪ ಮಾತನಾಡಿ, ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಜೆಡಿಎಸ್ ಹಾಗೂ ಬಿಜೆಪಿ ಒಟ್ಟಾಗಿ ಕೆಲಸ ಮಾಡಿದ್ದ ಪರಿಣಾಮ ವಿ.ಸೋಮಣ್ಣ ಅವರು ಎಲ್ಲಾ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಮತಗಳಿಕೆಯಲ್ಲಿ ಮುನ್ನಡೆ ಸಾಧಿಸಿ ದಾಖಲೆಯ ಗೆಲುವು ಪಡೆದರು. ಮುಂದಿನ ವಿಧಾನ ಸಭಾ ಚುನಾವಣೆಯಲ್ಲಿ ಎರಡೂ ಪಕ್ಷಗಳ ಮೈತ್ರಿ ಅಭ್ಯರ್ಥಿಗಳು ಜಿಲ್ಲೆಯ ಎಲ್ಲಾ 11 ಕ್ಷೇತ್ರಗಳಲ್ಲಿ ಗೆಲ್ಲಲಿದ್ದಾರೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.
ಹೆಚ್.ಡಿ.ಕುಮಾರಸ್ವಾಮಿ, ವಿ.ಸೋಮಣ್ಣರಿಗೆ ಕೇಂದ್ರ ಸಚಿವ ಪಟ್ಟಜಿಲ್ಲಾ ಜೆಡಿಎಸ್ ಕಚೇರಿಯಲ್ಲಿ ಸಂಭ್ರಮ
Leave a comment
Leave a comment