ಕಲ್ಯಾಣ ಭಾಗದ ಹುದ್ದೆಗಳನ್ನು ಹಂತ ಹಂತವಾಗಿ ತುಂಬಲಾಗುವುದು- ಸಿಎಂ.
ಕಲ್ಯಾಣ ಕರ್ನಾಟಕ ಪ್ರದೇಶದ ವಿವಿಧ ಸರ್ಕಾರಿ ಇಲಾಖೆಗಳಲ್ಲಿನ ಖಾಲಿ ಹುದ್ದೆಗಳನ್ನು ಹಂತ ಹಂತವಾಗಿ ಭರ್ತಿ ಮಾಡಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ಕಲಬುರಗಿ ಯ ಐವಾನ್ ಶಾಹಿ ಅತಿಥಿ ಗೃಹದಲ್ಲಿ ಮಾಧ್ಯಮದವರೊಂದಿಗೆ ಮಾತನಾಡುತ್ತಿದ್ದ ಅವರು ಕಲ್ಯಾಣ ಕರ್ನಾಟಕದ ಸಮಗ್ರ ಅಭಿವೃದ್ದಿಗೆ ನೀಲಿ ನಕ್ಷೆ ತಯಾರಿಸಿ ಎಂದು ಸೂಚಿಸಲಾಗಿದೆ. ಈ ಭಾಗದಲ್ಲಿ ಸಚಿವ ಸಂಪುಟ ಸಭೆ ನಡೆಸಲಾಗುವುದು ಜೊತೆಗೆ ಅಭಿವೃದ್ದಿ ಮಂಡಳಿಗೆ ಪ್ರತ್ಯೇಕ ಇಂಜಿನಿಯರಿಂಗ್ ವಿಭಾಗ ಒದಗಿಸುವ ಬಹಳ ದಿನದ ಬೇಡಿಕೆಯನ್ನೂ ಕೂಡ ಪರಿಗಣಿಸಲಾಗುವುದು ಎಂದರು.
ರಾಜ್ಯದಲ್ಲಿ 195 ತಾಲೂಕುಗಳಲ್ಲಿ ಬರ ಪರಿಸ್ಥಿತಿ ಇದೆ. ಅವುಗಳಲ್ಲಿ 165 ತಾಲೂಕುಗಳಲ್ಲಿ ತೀವ್ರ ಬರ ಇದ್ದರೆ 34 ತಾಲೂಕುಗಳಲ್ಲಿ ಸಾಧಾರಣ ಬರ ಇದೆ. ಬರಪರಿಹಾರ ನೀಡುವಂತೆ ಕೇಂದ್ರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುವುದು ಎಂದು ಸಿಎಂ ಸಿದ್ಧರಾಮಯ್ಯ ಹೇಳಿದರು.
ರಾಜ್ಯ ಸರ್ಕಾರ ಪ್ರಸ್ತಾವನೆ ಸಲ್ಲಿಸಿದ ನಂತರ ಕೇಂದ್ರದಿಂದ ಅಧ್ಯಯನ ತಂಡ ಬರ ಪರಿಶೀಲನೆಗೆ ಬರಲಿದೆ. ಈ ಮಧ್ಯೆ ಡಿ ಆರ್ ಎಫ್ ನಿಯಮಾವಳಿ ಬದಲಿಸುವಂತೆ ಕೇಂದ್ರಕ್ಕೆ ಪತ್ರ ಬರೆಯಲಾಗಿದೆ ಎಂದರು.
ತಮಿಳುನಾಡಿಗೆ ಕಾವೇರಿ ನೀರು ಹರಿಸಿದ್ದಕ್ಕೆ ಟೀಕಿಸಿರುವ ಮಾಜಿಸಿಎಂ ಬಿ.ಎಸ್.ಯಡಿಯೂರಪ್ಪನವರಿಗೆ ತಿರುಗೇಟು ನೀಡಿದ ಸಿಎಂ ಅವರ ಕಾಲದಲ್ಲಿಯೂ, ಎಲ್ಲ ಕಾಲದಲ್ಲಿಯೂ ನೀರು ಬಿಡಲಾಗಿದೆ ಎಂದರು. ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ ( CWRC) 5000 ಕ್ಯೂಸೆಕ್ಸ್ ನೀರು ಬಿಡುವಂತೆ ಹೇಳಿದೆ ಆದರೆ ನೀರಿನ ಕೊರತೆ ಇರುವುದರಿಂದಾಗಿ ಬಿಡುತ್ತಿಲ್ಲ. ಪ್ರಾಧಿಕಾರದ ಆದೇಶದ ವಿರುದ್ದ ಸುಪ್ರೀಂಕೋರ್ಟ್ ಗೆ ಹೋಗುವುದಾಗಿ ಅವರು ಹೇಳಿದರು.
ಮಹಾದಾಯಿ ಯೋಜನೆ ನೋಟಿಫಿಕೇಷನ್ ಆಗಿದೆ. ಆದರೆ, ಅರಣ್ಯ ಹಾಗೂ ಪರಿಸರ ಇಲಾಖೆಯಿಂದ ಅನುಮತಿ ಸಿಕ್ಕಿಲ್ಲ. ಕೃಷ್ಣಾ ಮೇಲ್ದಂಡೆ ಯೋಜನೆಗೆ ನೋಟಿಫಿಕೇಷನ್ ಹೊರಡಿಸಬೇಕಿದೆ. ಎನ್.ಡಿ.ಆರ್.ಎಫ್ ನಿಯಮಾವಳಿ ಬದಲಿಸಬೇಕಿದೆ. ಈ ಎಲ್ಲ ವಿಷಯಗಳ ಚರ್ಚೆ ಮಾಡಲು ಸರ್ವ ಪಕ್ಷಗಳ ನಿಯೋಗ ತೆಗೆದುಕೊಂಡು ಪ್ರಧಾನಿ ಬಳಿ ಹೋಗಲು ಸಮಯ ಕೇಳಲಾಗಿದೆ. ಒಂದು ತಿಂಗಳಾದರೂ ಪಿಎಂ ಸಮಯ ಕೊಟ್ಟಿಲ್ಲ ಹಾಗಾಗಿ ಮತ್ತೆ ಪತ್ರ ಬರೆಯಲಾಗುವುದು ಎಂದರು.
ರಾಜ್ಯ ಸರ್ಕಾರ ಅಭಿವೃದ್ದಿ ಕಾರ್ಯ ಮಾಡುವಲ್ಲಿ ವಿಫಲವಾಗಿದೆ ಎಂದು ಯಡಿಯೂರಪ್ಪ ರಾಜ್ಯಾದ್ಯಂತ ಪ್ರವಾಸ ಮಾಡುವುದಾಗಿ ಹೇಳಿರುವ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಿಎಂ, ನಮ್ಮ ಸರ್ಕಾರ ಐದು ಗ್ಯಾರಂಟಿಗಳನ್ನು ಕೊಟ್ಟಿದ್ದೇವಲ್ಲ ಅದು ಅಭಿವೃದ್ದಿ ಅಲ್ಲವೇ? ಈ ಯೋಜನೆಗಳ ವಿರುದ್ದ ಪ್ರವಾಸ ಮಾಡುತ್ತಾರೆಯೇ? ಅವರು 600 ಭರವಸೆಗಳನ್ನು ನೀಡಿ ಅದರಲ್ಲಿ ಕೇವಲ 10% ಈಡೇರಿಸಿರುವ ಅವರು ಯಾವ ನೈತಿಕತೆ ಇಟ್ಟುಕೊಂಡು ಪ್ರವಾಸ ಮಾಡುತ್ತಾರೆ? ಯಡಿಯೂರಪ್ಪ ರಾಜಕೀಯ ಕಾರಣಗಳಿಗಾಗಿ ಟೀಕೆ ಮಾಡುತ್ತಾರೆ ಎಂದರು.
ರಾಜ್ಯದಲ್ಲಿ 8 ನೂತನ ವಿಶ್ವವಿದ್ಯಾಲಯ ಸ್ಥಾಪಿಸುವ ಬಿಜೆಪಿ ಸರ್ಕಾರದ ನಿರ್ಣಯ ಜನಪರವಲ್ಲ ಎಂದರು.
ರಾಜಕೀಯ ಕುರಿತಾದ ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಅವರು ಮೂವರು ಡಿಸಿಎಂ ನೇಮಿಸುವಂತೆ ಸಚಿವ ರಾಜಣ್ಣ ಹೇಳಿರುವುದು ಹೈಕಮಾಂಡ್ ಗೆ ಬಿಟ್ಟ ವಿಷಯ ಎಂದರು.
ತಮ್ಮ ವಿರುದ್ದ ಹರಿಪ್ರಸಾದ್ ಟೀಕಿಸುತ್ತಿರುವುದಕ್ಕೆ ಉತ್ತರಿಸಲು ನಿರಾಕರಿಸಿದ ಸಿಎಂ, ನೋ ಕಾಮೆಂಟ್ಸ್ ಎಂದರು.
ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ, ಕೆಕೆಆರ್ ಡಿಬಿ ಅಧ್ಯಕ್ಷ ಅಜಯ್ ಸಿಂಗ್, ಶಾಸಕರಾದ ಎಂ ವೈ ಪಾಟೀಲ, ಕನೀಜ್ ಫಾತೀಮಾ, ತಿಪ್ಪಣ್ಣಪ್ಪ ಕಮಕನೂರು ಇದ್ದರು.