ರಾಜ್ಯದಲ್ಲಿ ಅಧಿಕಾರ ನಡೆಸುತ್ತಿರುವ ಆಡಳಿತ ಪಕ್ಷ ಬಿಜೆಪಿ ಹೈಜಾಕ್ ಸಂಸ್ಕೃತಿ ಅಳವಡಿಸಿಕೊಂಡಿದ್ದು, ಚುನಾವಣಾ ಆಯೋಗ ಮತ್ತು ಪೊಲೀಸ್ ಇಲಾಖೆಯನ್ನು ತನ್ನ ಹಿಡಿತದಲ್ಲಿ ಇಟ್ಟುಕೊಂಡಿದೆ ಎಂದು ನಗರ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಹಾಗೂ ಮಾಜಿ ಸಚಿವ ಸೊಗಡು ಶಿವಣ್ಣ ನೇರ ಆರೋಪ ಮಾಡಿದರು.
ನಗರದಲ್ಲಿ ಇಂದು ಬೆಳಿಗ್ಗೆ ಸುದ್ದಿಗೋಷ್ಠಿ ನಡೆಸಿ ಮಾತನಾಡಿ, ನಗರದ ಬಿ.ಹೆಚ್.ರಸ್ತೆಯ ಸಿಎನ್ವಿ ಛೇಂಬರ್ನಲ್ಲಿ ಬೇನಾಮಿ ಹೆಸರಿನಲ್ಲಿ ೩ ರಿಂದ ೪ ರೂಮುಗಳನ್ನು ಬುಕ್ ಮಾಡಿ ಅಲ್ಲಿ ವಾಸ್ತವ್ಯ ಮಾಡಿದ್ದ ಕೆಲ ಮುಖಂಡರು ಮತದಾರರಿಗೆ ಹಣ ಹಂಚಲು ವ್ಯವಸ್ಥೆ ಮಾಡಿಕೊಂಡಿದ್ದು, ಇದನ್ನು ಪತ್ತೆಹಚ್ಚಿ ಪೊಲೀಸರಿಗೆ ಮಾಹಿತಿ ನೀಡಿದ ಕೆಲವರ ವಿರುದ್ಧ ಸುಳ್ಳು ಪ್ರಕರಣ ದಾಖಲಿಸಿ, ಬೆದರಿಕೆ ತಂತ್ರ ಅನುಸರಿಸುತ್ತಿದ್ದಾರೆ ಎಂದು ದೂರಿದರು.
ಚುನಾವಣಾ ಸಮಯದಲ್ಲಿ ನೀತಿ ಸಂಹಿತೆ ಜಾರಿಯಲ್ಲಿದ್ದು, ತಪ್ಪಿತಸ್ಥರ ವಿರುದ್ಧ ಕ್ರಮಕೈಗೊಳ್ಳಬೇಕಾದ ಚುನಾವಣಾ ಆಯೋಗ ಮತ್ತು ಪೊಲೀಸ್ ಇಲಾಖೆ ಸ್ಥಳೀಯ ಸಂಸದರು ಮತ್ತು ಶಾಸಕರ ತಾಳಕ್ಕೆ ತಕ್ಕಂತೆ ಕುಣಿಯುತ್ತಿದ್ದಾರೆ ಎಂದು ತಿಳಿಸಿದರು.
ಜಿಲ್ಲಾ ಬಿಜೆಪಿ ಅಧ್ಯಕ್ಷ ಹೆಬ್ಬಾಕ ರವಿಶಂಕರ್, ವಕೀಲ ಎಂ.ಮಲ್ಲಿಕಾರ್ಜುನಯ್ಯ, ಅಭಿವೃದ್ಧಿ ರೆವೂಲ್ಯೂಷನ್ ಫೋರಂನ ಕುಂದರನಹಳ್ಳಿ ರಮೇಶ್ ಮುಂತಾದವರು ವಸತಿಗೃಹದ ರೂಮುಗಳಲ್ಲಿ ವಾಸ್ತವ್ಯ ಹೂಡಿದ್ದಾರೆ. ಇವರಿಗೆ ನಗರದಲ್ಲಿ ಸ್ವಂತ ಮನೆಗಳಿದ್ದರೂ ಬಾಡಿಗೆ ರೂಮುಗಳನ್ನು ಮಾಡುವ ಅಗತ್ಯವೇನಿತ್ತು ಎಂದು ಪ್ರಶ್ನಿಸಿದ ಅವರು, ಮತದಾರರಿಗೆ ಆಸೆ, ಆಮಿಷ ಒಡ್ಡಿ ಬಿಜೆಪಿ ಅಭ್ಯರ್ಥಿ ಪರ ಮತದಾನ ಮಾಡಲು ಪ್ರೇರೇಪಿಸುತ್ತಿದ್ದು, ಈ ಬಗ್ಗೆ ಚುನಾವಣಾ ಆಯೋಗ ಮತ್ತು ಪೊಲೀಸ್ ಇಲಾಖೆ ಕಾನೂನು ಕ್ರಮಕೈಗೊಳ್ಳಬೇಕಿತ್ತು. ಅದನ್ನು ಬಿಟ್ಟು ಈ ಬಗ್ಗೆ ಮಾಹಿತಿ ನೀಡಿದ ನಿಖಿಲ್, ಸಾಧಿಕ್, ರಫೀಕ್, ಹೇಮಂತ್ ಎಂಬುವರ ವಿರುದ್ಧ ದರೋಡೆ ಪ್ರಕರಣ ದಾಖಲಿಸಿ, ಹಣ ವಶಪಡಿಸಿಕೊಂಡಿರುವುದಾಗಿ ತಿಳಿಸಿದ್ದಾರೆ ಎಂದರು.
ಸ್ಮಾರ್ಟ್ಸಿಟಿ ಯೋಜನೆಯಡಿ ಲೂಟಿ ಹೊಡೆದ ಪಾಪದ ಹಣವನ್ನು ಹಂಚಲು ಸಂಗ್ರಹಿಸಿದ್ದ ಹಣದೊಂದಿಗೆ ಪರಾರಿಯಾಗಿದ್ದು, ಅಮಾಯಕರನ್ನು ಬಂಧಿಸಿ ಅವರನ್ನು ನೋಡಲು ಪೋಷಕರನ್ನು ಸಹ ಒಳಗೆ ಬಿಟ್ಟಿಲ್ಲ. ಇವರನ್ನು ಆದಷ್ಟು ಬೇಗ ಬಿಡುಗಡೆ ಮಾಡುವಂತೆ ಒತ್ತಾಯಿಸಿದರು.
ಅಪ್ಪ, ಮಕ್ಕಳ ವಿರುದ್ಧ ಯಾರೆ ಮಾತನಾಡಿದರೂ ಅಂತಹವರ ಮೇಲೆ ಬೆದರಿಕೆ ತಂತ್ರ ಅನುಸರಿಸಲಾಗುತ್ತಿದ್ದು, ವೀರಶೈವ ಸಮಾಜದ ಮುಖಂಡರು, ಪಕ್ಷೇತರ ಅಭ್ಯರ್ಥಿಯಾಗಿರುವ ನನಗೆ ಬೆಂಬಲ ವ್ಯಕ್ತಪಡಿಸುತ್ತಿದ್ದಂತೆ ಅವರ ಹಿಂಬಾಲಕರನ್ನು ಸೇರಿಸಿಕೊಂಡು ಇನ್ನೊಂದು ಸುದ್ದಿಗೋಷ್ಠಿ ನಡೆಸಿ, ನನ್ನ ವಿರುದ್ಧ ಎತ್ತಿಕಟ್ಟಿದ್ದಾರೆ ಎಂದು ದೂರಿದರು.
ಮುಖಂಡರಾದ ಜೈಸಿಂಹರಾವ್, ಧನಿಯಾಕುಮಾರ್, ಎ.ಮಹಲಿಂಗಯ್ಯ, ಡಾ. ಸಂಜಯನಾಯಕ್, ರಾಮಲಿಂಗೇಗೌಡ, ಎಸ್.ಆರ್.ಶ್ರೀಧರಮೂರ್ತಿ, ಗೋವಿಂದರಾಜು, ಜೆ.ಕೆ.ಅನಿಲ್, ಚಿಕ್ಕರಾಮಯ್ಯ, ಜಿ.ಕೆ.ಬಸವರಾಜು, ಊರುಕೆರೆ ನಂಜುAಡಪ್ಪ, ಗೋಕುಲ ಮಂಜುನಾಥ್ ಮುಂತಾದವರು ಸುದ್ದಿಗೋಷ್ಠಿಯಲ್ಲಿದ್ದರು.
ರಾಜ್ಯದಲ್ಲಿ ಅಧಿಕಾರ ನಡೆಸುತ್ತಿರುವ ಆಡಳಿತ ಪಕ್ಷ ಬಿಜೆಪಿ ಹೈಜಾಕ್ ಸಂಸ್ಕೃತಿ
Leave a comment
Leave a comment