ರಾಜ್ಯದಲ್ಲಿ ಬಿಜೆಪಿ ಪಕ್ಷದ ಸರಕಾರ ಅಧಿಕಾರದಲ್ಲಿದ್ದಾಗ ರೈತರಿಗಾಗಿ ಜಾರಿಗೆ ತಂದ ಪ್ರಧಾನಮಂತ್ರಿ ಕಿಸಾನ್ ಸನ್ಮಾನ್,ರೈತರ ಮಕ್ಕಳಿಗಾಗಿ ಜಾರಿಗೆ ತಂದ ವಿದ್ಯಾಸಿರಿ ಸ್ಕಾಲರ್ಶಿಫ್ ಯೋಜನೆಗಳನ್ನು ಕಡಿತ ಮಾಡುವ ಮಾಡುವ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರಕಾರ ರೈತವಿರೋಧಿ ನೀತಿಯನ್ನು ಅನುಸರಿಸುತ್ತಿದೆ ಎಂದು ಬಿಜೆಪಿ ರಾಜ್ಯ ರೈತಮೋರ್ಚಾ ಅಧ್ಯಕ್ಷ ಹಾಗೂ ಮಾಜಿ ಶಾಸಕ ಎ.ಎಸ್.ನಡಹಳ್ಳಿ ಆರೋಪಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿಂದು ಮಾತನಾಡಿದ ಅವರು,2008ರಲ್ಲಿ ಮೊದಲ ಬಾರಿ ಬಿಜೆಪಿ ಅಧಿಕಾರಕ್ಕೆ ಬಂದಾಗ ಅಂದಿನ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಹಸಿರು ಶಾಲು ಧರಿಸಿ ಪ್ರಮಾಣ ವಚನ ಸ್ವೀಕರಿಸಿದ್ದಲ್ಲದೆ,ಪ್ರತ್ಯೇಕ ರೈತ ಬಜೆಟ್ ಮಂಡಿಸಿದ್ದರು.ಆ ನಂತರ ಕೇಂದ್ರ ಸರಕಾರದ ಪಿ.ಎಂ.ಕಿಸಾನ್ ಸನ್ಮಾನ ಯೋಜನೆಯ 6 ಸಾವಿರದ ಜೊತೆಗೆ,ರಾಜ್ಯ ಸರಕಾರವೂ 4 ಸಾವಿರ ಸೇರಿಸಿ,ವಾರ್ಷಿಕ 10 ಸಾವಿರ ರೂ ರೈತರ ಖಾತೆಗೆ ನೇರ ವರ್ಗಾವಣೆ ಯಾಗುವಂತೆ ಮಾಡಿದ್ದರು.ಅತಿವೃಷ್ಟಿ, ಆನಾವೃಷ್ಟಿಯಂತಹ ಕಾಲದಲ್ಲಿ ಕೇಂದ್ರದ ಅನುದಾನಕ್ಕೆ ಕಾಯದೆ, ರಾಜ್ಯ ಸರಕಾರವೇ ಎಕರೆಗೆ 10 ಸಾವಿರ ರೂ ಪರಿಹಾರ ನೀಡಿತ್ತು.ಆದರೆ ಈಗ ರಾಜ್ಯ ಸರಕಾರದ ಬಳಿ ಎಕರೆಗೆ 2000 ರೂ ಪರಿಹಾರ ನೀಡಲು ಹಣವಿಲ್ಲ. ರಾಜ್ಯದ ಖಜಾನೆ ಇವರ ವಿವೇಚನಾ ರಹಿತ ಗ್ಯಾರಂಟಿಗಳಿoದ ಖಾಲಿಯಾಗಿದೆ ಎಂದು ದೂರಿದರು.
ರಾಜ್ಯದಲ್ಲಿ ಕೃಷಿಗೆ ಪೂರಕವಾದ ಹೈನುಗಾರಿಕೆಯಿಂದ ಜನರು ಬದುಕು ಕಟ್ಟಿಕೊಳ್ಳುವಂತೆ ಮಾಡುವ ಉದ್ದೇಶದಿಂದ ಪ್ರತಿ ಲೀಟರ್ ಹಾಲಿಗೆ 2 ರೂ ಪ್ರೋತ್ಸಾಹಧನವನ್ನು ಬಿ.ಎಸ್.ಯಡಿಯೂರಪ್ಪ ಘೋಷಿಸಿದ್ದರು.2018ರಲ್ಲಿ ಅಧಿಕಾರಕ್ಕೆ ಬಂದಾಗ ಅದನ್ನು 5 ರೂಗಳಿಗೆ ಹೆಚ್ಚಿಸಿದ್ದರು.ಆದರೆ ಇಂದಿನ ಸಿದ್ದರಾಮಯ್ಯ ಸರಕಾರ ಕಳೆದ ಮೇ.ನಿಂದಲೂ ರೈತರಿಗೆ ಹಾಲಿನ ಪ್ರೋತ್ಸಾಹಧನ ನೀಡಿಲ್ಲ. ಸುಮಾರು 715 ಕೋಟಿ ರೂ ಹೈನುಗಾರಿರಿಗೆ ನೀಡಬೇಕಾಗಿರುವ ಬಾಕಿ ಇದೆ. ವಿರೋಧಪಕ್ಷವಾದ ಬಿಜೆಪಿ ಹೋರಾಟ ಮಾಡಿದ ನಂತರ ಒಂದು ತಿಂಗಳ ಹಣವನ್ನು ಈಗ ಬಿಡುಗಡೆ ಮಾಡಿದ್ದಾರೆ.ರಾಜ್ಯದಲ್ಲಿ ವಿದ್ಯುತ್ ಸಮಸ್ಯೆಯೂ ತೀವ್ರವಾಗಿ ತಲೆದೊರಿದೆ.ಕನಿಷ್ಠ ದಿನಕ್ಕೆ 3 ಗಂಟೆಯಾದರೂ ತ್ರೀಪೇಸ್ ವಿದ್ಯುತ್ ನೀಡಲು ಸರಕಾರದ ಕೈಯಲ್ಲಿ ಸಾಧ್ಯವಾಗುತ್ತಿಲ್ಲ. ಇದರಿಂದ ತೋಟಗಾರಿಕಾ ಬೆಳೆಗಳು ಹಾಳಾಗಿದ್ದು,ರೈತರು ಪರಿತಪಿಸುತಿದ್ದಾರೆ. ಸಾಲ ಮಾಡಿ ಬಜೆಟ್ ಮಂಡಿಸುವoತಹ ದುಸ್ಥಿತಿಗೆ ರಾಜ್ಯ ಸರಕಾರ ಬಂದಿದೆ.2013-24ರಲ್ಲಿ 85 ಸಾವಿರ ಕೋಟಿ ಹಾಗೂ 2024-25ರಲ್ಲಿ 1.05 ಕೋಟಿ ಸಾಲ ಮಾಡಿ ಸರಕಾರ ಯೋಜನೆಗಳಿಗೆ ಖರ್ಚು ಮಾಡಲಾಗುತ್ತಿದೆ. ಮುಖ್ಯಮಂತ್ರಿಗಳು ಸಿದ್ದರಾಮಯ್ಯ ಅಲ್ಲ. ಸಾಲದ ರಾಮಯ್ಯ ಎಂದು ಎ.ಎಸ್.ನಡಹಳ್ಳಿ ಟೀಕಿಸಿದರು.