ಕಳೆದ ೨೦೧೪ ರಿಂದಲೆ ಒಕ್ಕೂಟ ಸರಕಾರವನ್ನು ಮುನ್ನಡೆಸುತ್ತಿರುವ ಶ್ರೀ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಹಾಗೂ ಎನ್.ಡಿ.ಎ. ಸರಕಾರ ಎರಡು ಪಾರ್ಲಿಮೆಂಟ್ ಚುನಾವಣೆಗಳಲ್ಲಿ ದೇಶದ ಜನತೆಗೆ ನೀಡಿದ ಅಶ್ವಾಸನೆಗಳಾದ, ರೈತರ ಆದಾಯ ದ್ವಿಗುಣಗೊಳಿಸುವುದು, ಪ್ರತಿ ವರ್ಷ ಕೋಟಿ ಉದ್ಯೋಗ ನೀಡುವುದು, ಬೆಲೆ ಏರಿಕೆ ತಡೆಗಟ್ಟುವುದು, ಕಪ್ಪು ಹಣ ಹೊರಗೆಳೆದು ಬಡವರ ಖಾತೆಗೆ ತಲಾ ಹದಿನೈದು ಲಕ್ಷ ರೂ. ಜಮಾ ಮಾಡುವುದು ಮತ್ತು ಒಟ್ಟಾರೆ ಎಲ್ಲರಿಗೂ ಶುಭ ದಿನಗಳನ್ನು ತರುವುದು ಮುಂತಾಗಿ ಈ ಯಾವುದೇ ಭರವಸೆಗಳನ್ನು ಜಾರಿಗೊಳಿಸದೆ ವಂಚಿಸಿರುವುದನ್ನು ಮತ್ತು ಲೂಟಿಕೋರ ಕಾರ್ಪೋರೇಟ್ ಸಂಸ್ಥೆಗಳು ಹೇರಳ ಸಂಪತ್ತನ್ನು ದೋಚಲು ನೆರವು ನೀಡಲಾಗಿರುವುದನ್ನು ನಾವು ಕಂಡಿದ್ದೇವೆ. ಜನತೆ ಶುಭ ದಿನಗಳ ಬದಲು ದೌರ್ಜ್ಯನದದಿನಗಳನ್ನು ಎದುರಿಸುವಂತಾಗಿದೆ.
ಬೆಲೆ ಏರಿಕೆ ತಡೆಯಿರಿ:
ಒಕ್ಕೂಟ ಸರಕಾರ ಮುಂದುವರೆಸುತ್ತಿರುವ ನವ ಉದಾರೀಕರಣದ ನೀತಿಗಳಿಂದ ದೇಶದ ಜನತೆ ಅದರಲ್ಲೂ ಬಡ ಜನತೆ ಬೆಲೆ ಏರಿಕೆಯ ಭಾರಿ ಬರೆಯಿಂದ ತೀವ್ರವಾಗಿ ನಲುಗುವಂತಾಗಿದೆ. ಅಗತ್ಯ ವಸ್ತುಗಳಾದ ಅಕ್ಕಿ ಬೇಳೆ, ಅಡುಗೆ ಎಣ್ಣೆ, ಅಡುಗೆ ಅನಿಲ, ಪೆಟ್ರೋಲ್, ಡೀಸೆಲ್, ವಿದ್ಯುತ್, ಕೃಷಿ ಹೂಡಿಕೆಗಳಾದ ಬೀಜ, ರಸಾಯನಿಕ ಗೊಬ್ಬರ, ಕೀಟ ನಾಶಕ, ಕೃಷಿ ಉಪಕರಣಗಳು, ನಾಗರೀಕರ ಆರೋಗ್ಯದ ಔಷಧಿ ಬೆಲೆಗಳು, ಶೈಕ್ಷಣಿಕ ಸೌಲಭ್ಯದ ಡೊನೇಷನ್ ಹಾಗು ಫೀಸುಗಳ ಬೆಲೆಗಳು ಗಗನ ಮುಖಿಯಾಗಿವೆ.
ಈ ಎಲ್ಲ ಬೆಲೆ ಏರಿಕೆಯ ಹಿಂದೆ, ಅಗತ್ಯ ವಸ್ತುಗಳ ಬೆಲೆಗಳ ಮೇಲಿನ ನಿಯಂತ್ರಣ ವಾಪಾಸು ಪಡೆದುದು, ಸಹಾಯಧನಗಳ ಕಡಿತ ಮಾಡಿರುವುದು, ಮುಕ್ತ ವ್ಯಾಪಾರಕ್ಕೆ ದೇಶವನ್ನು ತೆರೆದು, ಡಾಲರ್ ಎದುರು ರೂಪಾಯಿ ಮೌಲ್ಯ ಪದೆಪದೇ ಕುಸಿಯುವಂತೆ ಮಾಡಿ ಹಣದುಬ್ಬರ ಹೆಚ್ಚಳವಾಗುವಂತೆ ಕ್ರಮವಹಿಸಿರುವುದು, ಅಪ್ರತ್ಯಕ್ಷ ತೆರಿಗೆಗಳ ಭಾರವನ್ನು ವಿಸ್ತರಿಸುತ್ತಿರುವುದು, ಜಿಎಸ್ಟಿ ಕರ ಭಾರಕ್ಕೆ ಕ್ರಮ ವಹಿಸಿರುವುದು. ಕಾಳಸಂತೆ ಕೋರತನಕ್ಕೆ ಕುಮ್ಮಕ್ಕು ನೀಡಿರುವುದು, ಈ ಎಲ್ಲವು ಪ್ರಮುಖ ಕಾರಣಗಳಾಗಿವೆ. ಇದಕ್ಕೆ ಕೇಂದ್ರ ಸರಕಾರವೇ ನೇರ ಹೊಣೆಗಾರನಾಗಿದೆ. ಒಂದೆಡೆ, ಅವ್ಯಾಹತವಾಗಿ ಏರುತ್ತಿರುವ ಅಗತ್ಯ ವಸ್ತುಗಳ ಬೆಲೆಗಳು, ಇನ್ನೊಂದೆಡೆ, ಬೆಳೆಯುತ್ತಿರುವ ವಿದ್ಯಾವಂತರ ನಿರುದ್ಯೋಗ ಮತ್ತು ಮತ್ತೊಂದೆಡೆ ವರ್ಷವಿಡಿ ಉದ್ಯೋಗವಿಲ್ಲದ ಅರೆ ಉದ್ಯೋಗ ಮತ್ತು ಕೂಲಿ ಹಾಗೂ ವೇತನಗಳಲ್ಲಿ ಹೆಚ್ಚಳವಿಲ್ಲದಿರುವುದು. ಗುತ್ತಿಗೆ ಆಧಾರದ ದುಡಿಮೆ ಬೆಳೆಯುತ್ತಿರುವುದು ಎಲ್ಲವೂ ದೇಶವನ್ನು ಅಪೌಷ್ಠಿಕತೆಯ ಹಾಗೂ ಹಸಿವಿನ ದವಡೆಗೆ ತಳ್ಳುತ್ತಿವೆ. ಸ್ವಾತಂತ್ರ್ಯ ಗಳಿಸಿ ೭೬ ವರ್ಷ ಪೂರೈಸಿದ ನಂತರವೂ, ಈ ದೇಶದಲ್ಲಿ ಈ ಕಾರಣಗಳಿಂದ ಈಗಲೂ ಪ್ರತಿ ನಿಮಿಷಕ್ಕೆ ಹನ್ನೊಂದು ಜನರ ಅಪೌಷ್ಠಿಕತೆಯ ಹಾಗೂ ಹಸಿವಿನ ಸಾವುಗಳು ಸಂಭವಿಸುತ್ತಿರುವುದು ಮುಂದುವರೆದಿದೆ ಮತ್ತುಹಸಿವಿನ ಸೂಚ್ಯಂಕದಲ್ಲಿ ೧೨೧ ದೇಶಗಳಲ್ಲಿ ನಮ್ಮ ಸ್ಥಾನ ೧೦೭ ಕ್ಕಿಳಿದಿರುವುದು ನಾಚಿಕೆ ಗೇಡಿನ ವಿಚಾರವಾಗಿದೆ.