ಗಮನ ಸೆಳೆದ ಪೋದಾರ್ ಶಾಲೆಯ ಬಿಜ್ ಕಿಡ್ಸ್ ಬಜಾರ್ ಪ್ರದರ್ಶನ
ತುಮಕೂರು- ಅಸಹಾಯಕರಿಗೆ ಧನ ಸಹಾಯ ಮಾಡುವ ಹಾಗೂ ಮಕ್ಕಳಲ್ಲಿ ಉದ್ಯಮಶೀಲತೆಯ ವ್ಯಕ್ತಿತ್ವವನ್ನು ಬೆಳೆಸುವ ಉದ್ದೇಶದಿಂದ ನಗರದ ಪೋದಾರ್ ಅಂತಾರಾಷ್ಟ್ರೀಯ ಶಾಲೆಯಲ್ಲಿ ಹಮ್ಮಿಕೊಂಡಿದ್ದ ಬಿಜ್ ಕಿಡ್ಸ್ ಬಜಾರ್ ಕಾರ್ಯಕ್ರಮ ಯಶಸ್ವಿಯಾಗಿ ನಡೆದು ಪೋಷಕರು ಹಾಗೂ ಸಾರ್ವಜನಿಕರ ಮೆಚ್ಚುಗೆಗೆ ಪಾತ್ರವಾಯಿತು.
ಪೋದಾರ್ ಅಂತಾರಾಷ್ಟ್ರೀಯ ಶಾಲೆಯ ಆವರಣದಲ್ಲಿ ಶಾಲೆಯ ಮಕ್ಕಳು ತಾವೇ ಸಿದ್ದಪಡಿಸಿದ್ದ ಪೌಷ್ಠಿಕಾಂಶಯುಕ್ತ ಆಹಾರ ಪದಾರ್ಥಗಳ ಮಾರಾಟ ಮಳಿಗೆಗಳು ನೋಡುಗರ ಕಣ್ಮನ ಸೆಳೆದವು.
ಮಕ್ಕಳು ತಾವೇ ತಯಾರಿಸಿದ್ದ ವಿವಿಧ ಬಗೆಯ ಶುಚಿ-ರುಚಿಯಾದ ಖಾದ್ಯಗಳನ್ನು ಪೋಷಕರು ಹಾಗೂ ಸಾರ್ವಜನಿಕರು ಹಣ ಕೊಟ್ಟು ಖರೀದಿಸಿ ಸವಿದರು.
ಇದರೊಂದಿಗೆ ಭಾರತೀಯ ವಿವಿಧ ಚಿತ್ರಕಲೆಗಳನ್ನು ಮಕ್ಕಳೇ ಬಿಡಿಸಿ ಪ್ರದರ್ಶನಕ್ಕಿಟ್ಟು ಮಾರಾಟ ಮಾಡಿದ್ದು ಸಹ ವಿಶೇಷವಾಗಿತ್ತು.
ಮಕ್ಕಳು ತರೇಹವಾರಿ ಆಹಾರ ಪದಾರ್ಥಗಳನ್ನು ತಯಾರಿಸಿ ಒಂದೊಂದು ಪದಾರ್ಥಕ್ಕೂ ಇಂತಿಷ್ಟು ದರ ನಿಗದಿ ಪಡಿಸಿ ದರ ಪಟ್ಟಿ ಪ್ರದರ್ಶನ ಮಾಡಿದ್ದು ಅಕ್ಷರಶಃ ಹೋಟೆಲ್ಗಳ ವ್ಯವಸ್ಥೆಯನ್ನು ಪ್ರದರ್ಶಿಸುವಂತಿತ್ತು.
ಬಿಜ್ ಕಿಡ್ಸ್ ಬಜಾರ್ ಚಟುವಟಿಯ ಜತೆಗೆ ಚಿತ್ರಕಲೆ ಪ್ರದರ್ಶನ, ಪೌಷ್ಠಿಕ ಆಹಾರ ಪದಾರ್ಥಗಳ ಮಾರಾಟದೊಂದಿಗೆ ಮನೋರಂಜನಾ ಕ್ರೀಡೆಗಳನ್ನು ಸಹ ಮಕ್ಕಳಿಂದ ನಡೆಸಲಾಯಿತು.
ಮಕ್ಕಳ ಆಹಾರ ಪದಾರ್ಥ ಮಾರಾಟ, ಚಿತ್ರಕಲೆ ಮಾರಾಟದಿಂದ ಕ್ರೂಢೀಕರಣವಾದ ಹಣವನ್ನು ಸಹಾನುಭೂತಿ ಕೇಂದ್ರಗಳಿಗೆ ನೀಡಲು ನಿರ್ಧರಿಸಲಾಯಿತು.
ಇದಕ್ಕೂ ಮುನ್ನ ಬಿಜ್ ಕಿಡ್ಸ್ ಬಜಾರ್ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಚಾಲನೆ ನೀಡಿದ ಉಮಾತನಯ ನಿರ್ಮಾಣ ಸಂಸ್ಥೆಯ ಲಿಖಿತ್ರಾಜ್ ಮಾತನಾಡಿ, ಮಕ್ಕಳ ಈ ಚಟುವಟಿಕೆ ಭವಿಷ್ಯದಲ್ಲಿ ಉದ್ಯಮಶೀಲರಾಗಲು ಸಹಕಾರಿಯಾಗಿದೆ. ಶಾಲೆಯು ಮಕ್ಕಳನ್ನು ಭವಿಷ್ಯದ ಯುವ ಉದ್ಯಮಿಗಳನ್ನಾಗಿ ಸೃಷ್ಠಿಸಲು ಕೈಗೊಂಡಿರುವ ಈ ಕಾರ್ಯಕ್ರಮ ಬಹಳ ಉಪಯುಕ್ತವಾಗಿದೆ ಎಂದರು.
ಈ ಸಂದರ್ಭದಲ್ಲಿ ಶಾಲೆಯ ಪ್ರಾಂಶುಪಾಲರಾದ ಡಾ. ಲವ ಎಂ.ಬಿ., ಶಾಲೆಯ ಶಿಕ್ಷಕರು, ಸಿಬ್ಬಂದಿಗಳು, ವಿದ್ಯಾರ್ಥಿಗಳು ಹಾಗೂ ಪೋಷಕರು ಭಾಗವಹಿಸಿದ್ದರು.