ಕಾಯಕ ನಿಷ್ಠೆ ಧರ್ಮದ ಬುನಾದಿಯಾಗಬೇಕು ಎಂದು ಬಲವಾಗಿ ನಂಬಿದ್ದ ಬಸವಣ್ಣ ತಮ್ಮ ವಚನಗಳ ಮೂಲಕ ಕಾಯಕವೇ ಕೈಲಾಸ, ದಯವೇ ಧರ್ಮದ ಮೂಲ, ಅಯ್ಯಾ ಎಂದರೆ ಸ್ವರ್ಗ ಎಲವೋ ಎಂದರೆ ನರಕ ಎಂದು ಸಾರುವ ಮೂಲಕ ಮಾನವತಾ ವಾದಕ್ಕೆ ಸಾಹಿತ್ಯದ ಸ್ಪರ್ಶ ನೀಡಿ, ಕನ್ನಡ ಸಾಹಿತ್ಯಕ್ಕೆ ವಚನಗಳ ಮೂಲಕ ಅಪೂರ್ವ ಕೊಡುಗೆ ನೀಡಿದ್ದರು ಎಂದು ನಿವೃತ್ತ ಇಂಜಿನಿಯರ್ ಮತ್ತು ಸಾಹಿತಿಗಳಾದ ಡಾ. ಗಂಗಾಧರ ಕೊಡ್ಲಿಯವರು ನುಡಿದರು.
ಅವರು ತುಮಕೂರು ನಗರದ ಮುರುಘ ರಾಜೇಂದ್ರ ಸಭಾಂಗಣದಲ್ಲಿ ಬಸವಕೇಂದ್ರ ಏರ್ಪಡಿಸಿದ್ದ ಬಸವ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಕನ್ನಡ ನಾಡು ಕಂಡ ಮೊಟ್ಟಮೊದಲ ಅನುಭಾವಿಯಾಗಿದ್ದ ಅಲ್ಲಮಪ್ರಭು, ದೈವೀ ಅನುಭವವನ್ನು ಸೂಚಿಸಲು ಭಾರತೀಯ ವೇದಾಂತ ಪರಂಪರೆಯಲ್ಲಿ ಸೂಕ್ತ ಪದ ಇಲ್ಲದೇ ಇದ್ದ ಕಾಲದಲ್ಲಿ ಅನುಭಾವ ಎನ್ನುವ ಪದವನ್ನು ಟಂಕಿಸಿದರು. ಇದು ಭಾರತೀಯ ವೇದಾಂತ ಸಾಹಿತ್ಯಕ್ಕೆ ಕನ್ನಡ ವಚನಕಾರರ ಬಹುದೊಡ್ಡ ಕೊಡುಗೆಯಾಗಿದೆ ಎಂದರು.
ಆಯುರ್ವೇದ ವೈದ್ಯರು ಮತ್ತು ಸಂಶೋಧಕರಾದ ಡಾ. ಬಿ.ನಂಜುಡ ಸ್ವಾಮಿಯವರು ಉಪನ್ಯಾಸ ನೀಡಿ, ಬಿಜ್ಜಳ ಮಹಾರಾಜರ ಪ್ರಧಾನಿಯಾಗಿದ್ದ ಬಸವಣ್ಣನವರು ರಾಜಪ್ರಭುತ್ವದ ದಬ್ಬಾಳಿಕೆಯ ವಿರುದ್ಧ ಜನಸಾಮಾನ್ಯರ ಪರವಾಗಿ ಹೋರಾಡಿದ ಮಹಾಪುರುಷ ಬಸವಣ್ಣನವರ ಅರಿವು, ಆಚಾರ, ಕಾಯಕ ಮತ್ತು ದಾಸೋಗಳಂಥಹ ತತ್ವಸಿದ್ಧಾಂತಗಳನ್ನು ನೀಡಿದರು. ದೇಹವನ್ನೇ ದೇವಾಲಯ ಮಾಡಿ ಅಲ್ಲಿಯವರೆಗೆ ಬೃಹದಾಕಾರವಾಗಿ ಬೆಳೆದಿದ್ದ ದೇವಾಲಯ ಸಂಸ್ಕೃತಿಗೆ ಕೊಡಲಿ ಪೆಟ್ಟನ್ನು ನೀಡಿ ಸ್ಥಾವರಕಳಿವುಂಟು ಜಂಗಮಕ್ಕಳಿವಿಲ್ಲ ಎಂದು ಹೇಳುವ ಮೂಲಕ ಅರಿವಿಗೆ ಹೆಚ್ಚು ಪ್ರಾಮುಖ್ಯತೆ ನೀಡಿದರು ಎಂದು ತಿಳಿಸಿದರು.
1913ರಲ್ಲಿ ದಾವಣಗೆರೆಯಲ್ಲಿ ಮೊಟ್ಟಮೊದಲು ಹರ್ಡೇಕರ್ ಮಂಜಪ್ಪನವರು ಬಸವ ಜಯಂತಿಯನ್ನು ಆಚರಿಸಿದರು. ಅಂದಿನಿoದ ಈ ಮಹಾಪುರುಷನ ಜನ್ಮದಿನದ ಆರಂಭವಾಗಿ ಇಂದಿಗೆ 111 ವರ್ಷಗಳು ಕಳೆದಿವೆ. ಕೇವಲ ಕಛೇರಿಗಳಲ್ಲಿಯೋ ಅಥವಾ ಮನೆ ಮಠಗಳಲ್ಲಿಯೋ ಬಸವಣ್ಣನವರ ಭಾವಚಿತ್ರವನ್ನು ಹಾಕಿ ಪೂಜಿಸಿದರೆ ಸಾಲದು. ಆತ ಪ್ರತಿಪಾದಿಸಿದ ತತ್ವಗಳನ್ನು ನಮ್ಮ ಜೀವನದಲ್ಲಿ ಕಿಂಚಿತ್ತಾದರೂ ಅಳವಡಿಸಿಕೊಂಡರೆ ಬಸವಣ್ಣನಿಗೆ ಗೌರವ ನೀಡಿದಂತಾಗುತ್ತದೆ ಎಂದರು.
ಸಭೆಯ ಅಧ್ಯಕ್ಷತೆಯನ್ನು ಸಿದ್ಧಗಂಗಮ್ಮ ವಹಿಸಿದ್ದರು. ವೇದಿಕೆಯಲ್ಲಿ ಬಸವಕೇಂದ್ರದ ಮಾರ್ಗದರ್ಶಕರಾದ ಡಾ. ಡಿ.ಎನ್.ಯೋಗೀಶ್ವರಪ್ಪ, ಕೈಗಾರಿಕೋದ್ಯಮಿ ಡಿ.ವಿ.ಶಿವಾನಂದ್, ಹುಬ್ಬಳ್ಳಿ ಮಠದ ಅಕ್ಕನಾಗಮ್ಮ, ಕಮಲಮ್ಮ ತಾಯಿ ಹಾಜರಿದ್ದರು. ನಾಗಭೂಷಣ್ ಸ್ವಾಗತಿಸಿದರು, ಆಶಾ ನಿರಂಜನ್ ವಂದಿಸಿದರು, ಕಾರ್ಯದರ್ಶಿ ಚಂದ್ರಶೇಖರ್ ನಿರೂಪಿಸಿದರು.