ನಮ್ಮ ಸಂಸ್ಥೆಗಳ ಆವರಣದಲ್ಲಿ ಶಿಸ್ತಿಗೆ ಬಹಳ ಪ್ರಾಮುಖ್ಯತೆಯನ್ನು ಕೊಟ್ಟಿದ್ದೇವೆ. ವಿದ್ಯಾರ್ಥಿಗಳ ಸಾಮಾಜಿಕ ಜಾಲತಾಣಗಳ ಬಳಕೆಯ ಕುರಿತೂ ಸಾಕಷ್ಟು ನಿಗಾ ವಹಿಸಲಾಗಿದೆ ಎಂದು ವಿದ್ಯಾನಿಧಿ ಸಮೂಹ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಎನ್. ಬಿ. ಪ್ರದೀಪ್ ಕುಮಾರ್ ಹೇಳಿದರು.
ಅವರು ವಿದ್ಯಾನಿಧಿ ಕಾಲೇಜು ಮತ್ತು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸಹಯೋಗದಲ್ಲಿ ಆಯೋಜಿಸಲಾಗಿದ್ದ ‘ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ತಡೆ ಕಾಯ್ದೆ ಕುರಿತು ಕಾನೂನು ಅರಿವು ಕಾರ್ಯಕ್ರಮ’ವನ್ನು ಉದ್ಘಾಟಿಸಿ ಮಾತನಾಡಿದರು.
ಇದೇ ಸಂದರ್ಭದಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡಿದ ತುಮಕೂರು ಸಿವಿಲ್ ಕೋರ್ಟ್ನ ನ್ಯಾಯಾಧೀಶರು ಮತ್ತು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಕಾರ್ಯದರ್ಶಿಯಾದ ನೂರ್ ರುನಿಸಾ, ಪೋಕ್ಸೋ ಕಾಯ್ದೆಯ ಅನ್ವಯ ೧೮ ವರ್ಷಗಳೊಳಗಿನ ಹೆಣ್ಣುಮಕ್ಕಳು ಮತ್ತು ಗಂಡುಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯವೆಸಗಿದರೆ ಅದು ಮಕ್ಕಳ ಮೇಲಿನ ದೌರ್ಜನ್ಯವೆಂದೇ ಪರಿಗಣಿಸಲ್ಪಡುತ್ತದೆ ಮತ್ತು ಅಪರಾಧಿಗಳನ್ನು ಕಠಿಣ ಶಿಕ್ಷೆಗೆ ಗುರಿಪಡಿಸಲಾಗುತ್ತದೆ. ಪ್ರೀತಿಯ ನಾಟಕವಾಡಿ ಲೈಂಗಿಕವಾಗಿ ಬಳಸಿಕೊಳ್ಳುವುದು, ಮಕ್ಕಳನ್ನು ತಮ್ಮೊಂದಿಗೆ ಓಡಿ ಹೋಗುವಂತೆ ಪ್ರೇರೇಪಿಸುವುದು, ಮಾನಸಿಕವಾಗಿಯೂ ದೈಹಿಕವಾಗಿಯೂ ಹಿಂಸೆ ಕೊಡುವುದು ಎಲ್ಲವೂ ಶಿಕ್ಷಾರ್ಹ ಅಪರಾಧಗಳಾಗಿವೆ. ಈ ಕುರಿತ ಅರಿವು ಮಕ್ಕಳಿಗಿರಬೇಕು. ತಮ್ಮ ಮೇಲೆ ಯಾರಾದರೂ ಅನುಚಿತವಾಗಿ ನಡೆದುಕೊಂಡರೆ ಹೆತ್ತವರ ಗಮನಕ್ಕೆ ತರಲು ಹಿಂಜರಿಯಬಾರದು ಎಂದರು.
ಎಲ್ಲ ಮಕ್ಕಳೂ ಸಾಮಾಜಿಕ ಜಾಲತಾಣಗಳ ಬಳಕೆಯನ್ನು ಪೋಷಕರ ಸಮ್ಮುಖದಲ್ಲಿ ಮಾಡುವುದೊಳಿತು. ಮೊಬೈಲ್ ಯುಗದಲ್ಲಿ ಮಕ್ಕಳು ಬಹಳ ಬೇಗನೇ ಮೋಸಗಾರರ ಬಲೆಗೆ ಬೀಳುತ್ತಾರೆ. ಫೋಟೋಗಳನ್ನು ಅಥವಾ ವಿಡಿಯೋಗಳನ್ನು ಕಳುಹಿಸಿಕೊಂಡು ಅವುಗಳ ಮೂಲಕ ಬೆದರಿಸುವುದು ಇತ್ಯಾದಿಗಳನ್ನು ಮಾಡುವವರ ಬಗ್ಗೆ ಎಚ್ಚರವಿರಬೇಕು. ಒಂದು ವೇಳೆ ಇಂತಹ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡವರು ೧೮ರ ಒಳಗಿನವರೇ ಆದರೆ ಅವರನ್ನು ಕಾನೂನಿನೊಂದಿಗೆ ಸಂಘರ್ಷ ಹೊಂದಿದ ಮಗುವೆಂದೇ ಪರಿಗಣಿಸಲಾಗುತ್ತದೆ. ಅವರಿಗೆ ಸೂಕ್ತ ಆಪ್ತಸಲಹೆಗಳನ್ನು ಕೊಡುವ ಮೂಲಕ ಸರಿದಾರಿಗೆ ತರಲು ಶ್ರಮವಹಿಸಲಾಗುತ್ತದೆ ಎಂದು ನೂರ್ ರುನಿಸಾ ಹೇಳಿದರು.
ವಿದ್ಯಾನಿಧಿ ಪ್ರಾಂಶುಪಾಲರು ಉಪಸ್ಥಿತರಿದ್ದರು. ಉಪನ್ಯಾಸಕ ವೃಂದದವರು ಮತ್ತು ವಿದ್ಯಾರ್ಥಿಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ಅಗತ್ಯ ಮಾಹಿತಿಗಳನ್ನು ಪಡೆದುಕೊಂಡರು. ವಿದ್ಯಾರ್ಥಿಗಳು ಪ್ರಾರ್ಥಿಸಿದರು. ಜೀವಶಾಸ್ತç ವಿಭಾಗದ ಉಪನ್ಯಾಸಕಿ ಕಲ್ಪಶ್ರೀ ಸ್ವಾಗತಿಸಿದರು. ಇಂಗ್ಲಿಷ್ ಉಪನ್ಯಾಸಕಿ ಪೂಜಾ ವಂದಿಸಿದರು.
ಪೋಕ್ಸೋ ಕಾಯ್ದೆ ಕುರಿತು ಜಾಗೃತಿ ಕಾರ್ಯಕ್ರಮ/ಸಾಮಾಜಿಕ ಜಾಲತಾಣಗಳ ಬಳಕೆ ಬಗ್ಗೆ ಇರಲಿ ಎಚ್ಚರ
Leave a comment
Leave a comment