ನ್ಯಾ. ಗೀತಾ ಕೆ.ಬಿ.
ತುಮಕೂರು(ಕ.ವಾ.) ಜೂ. ೦೬: ಮುಂದಿನ ಪೀಳಿಗೆಗಾಗಿ ಪರಿಸರ ಸಂರಕ್ಷಣೆ ಮಾಡುವುದು ನಮ್ಮ ನಿಮ್ಮೆಲ್ಲರ ಜವಾಬ್ದಾರಿಯಾಗಿದ್ದು, ಪ್ಲಾಸ್ಟಿಕ್ ಬಳಕೆಯನ್ನು ಎಲ್ಲರೂ ತ್ಯಜಿಸಬೇಕು ಎಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷರು ಹಾಗೂ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಗೀತಾ ಕೆ.ಬಿ ಅವರು ತಿಳಿಸಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತಿ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ, ಪ್ರಾದೇಶಿಕ ಕಚೇರಿ ಹಾಗೂ ತುಮಕೂರು ವಿಶ್ವವಿದ್ಯಾಲಯ ಸಹಯೋಗದಲ್ಲಿ ಇಂದು ಬೆಳಿಗ್ಗೆ ತುಮಕೂರು ವಿ.ವಿ.ಯ ವಿಜ್ಞಾನ ಕಾಲೇಜಿನ ಸರ್ ಎಂ. ವಿಶ್ವೇಶ್ವರಯ್ಯ ಸಭಾಂಗಣದಲ್ಲಿ ಆಯೋಜಿಸಿದ್ದ “ವಿಶ್ವ ಪರಿಸರ ದಿನಾಚರಣೆ” ಕಾರ್ಯಕ್ರಮ ಉಧ್ಘಾಟಿಸಿ ಮಾತನಾಡಿದರು.
“ಪ್ಲಾಸ್ಟಿಕ್ ಮಾಲಿನ್ಯವನ್ನು ಹಿಮ್ಮೆಟ್ಟೋಣ” ಎಂಬುದು ಈ ವರ್ಷದ ಧ್ಯೇಯವಾಗಿದ್ದು, ಪ್ಲಾಸ್ಟಿಕ್ ತ್ಯಾಜ್ಯಗಳು ಜಲಚರ ಹಾಗೂ ಮೂಕ ಪ್ರಾಣಿಗಳಿಗೆ ಮಾರಕವಾಗಿವೆ, ನಾವು ಆಹಾರ ತಿಂದು ಬಿಸಾಡುವ ಪ್ಲಾಸ್ಟಿಕ್ ಚೀಲಗಳಲ್ಲಿ ಸ್ವಲ್ಪ ಆಹಾರವು ಸಾಮಾನ್ಯವಾಗಿ ಉಳಿದಿರುತ್ತದೆ. ಇಂತಹ ಆಹಾರವನ್ನು ತಿನ್ನುವ ಮೂಕ ಪ್ರಾಣಿಗಳು ಆಹಾರದ ಜೊತೆಗೆ ಪ್ಲಾಸ್ಟಿಕ್ಅನ್ನು ಸೇವಿಸುತ್ತವೆ. ಪ್ಲಾಸ್ಟಿಕ್ ೨೫೦ ವರ್ಷಗಳು ಮಾರ್ಪಾಡಾಗುವುದಿಲ್ಲ. ಪುನರ್ ಬಳಕೆಯಂತ ಪ್ಲಾಸ್ಟಿಕ್ ವಸ್ತುಗಳನ್ನು ಮರುಬಳಕೆ ಮಾಡಬೇಕು. ಪ್ಲಾಸ್ಟಿಕ್ನಿಂದ ಹಲವಾರು ಹಾನಿಗಳುಂಟಾಗುತ್ತಿದ್ದು, ಒಂದು ಬಾರಿ ಬಳಸುವಂತಹ ಪ್ಲಾಸ್ಟಿಕ್ಗಳನ್ನು ಎಲ್ಲರೂ ತ್ಯಜಿಸಬೇಕೆಂದು ಕರೆ ನೀಡಿದರು.
ಗಿಡಮರಗಳನ್ನು ಬೆಳೆಸುವುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ. ಇಂದು ದೃಢ ಸಂಕಲ್ಪ ಮಾಡಿ ಕನಿಷ್ಠ ಒಂದು ಕುಟುಂಬದಿAದ ಒಂದು ಗಿಡ ನೆಟ್ಟು ಬೆಳೆಸಬೇಕು. ಎಲ್ಲಾ ವಿದ್ಯಾರ್ಥಿಗಳು ವಿದ್ಯಾಭ್ಯಾಸದ ಜೊತೆಗೆ ಪರಿಸರ ರಕ್ಷಣೆಗೆ ಸಮಯ ಮೀಸಲಿಟ್ಟು ಮಾದರಿಯಾಗಬೇಕು. ಅಭಿವೃದ್ಧಿ ಹೆಸರಿನಲ್ಲಿ ಗಿಡಮರ ಕಡಿಯಲಾಗುತ್ತಿದೆ. ನಮ್ಮ ಅಭಿವೃದ್ಧಿ ಚಿಂತನೆ, ಬದುಕಿನ ಶೈಲಿ, ಹವ್ಯಾಸಗಳು ಬದಲಾಗಬೇಕು. ನಾವು ಪರಿಸರ ಪ್ರೀಯರಾಗಿ ಬದುಕಿದರೆ ಮಾತ್ರ ಮುಂದಿನ ಭವಿಷ್ಯ ಸುಂದರವಾಗಿರುತ್ತದೆ ಎಂದು ಅವರು ಹೇಳಿದರು.
ತುಮಕೂರು ವಿ.ವಿ ಕುಲಪತಿ ಶಿವಲಿಂಗಸ್ವಾಮಿ ಮಾತನಾಡಿ, ತುಮಕೂರು ಜಿಲ್ಲೆಯು ಹಲವಾರು ಪರಿಸರ ತಾಣಗಳನ್ನು ಹೊಂದಿದ್ದು, ಪ್ರವಾಸಿಗರು ಈ ತಾಣಗಳಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಎಲ್ಲೆಂದರಲ್ಲಿ ಪ್ಲಾಸ್ಟಿಕ್ ತ್ಯಾಜ್ಯಗಳನ್ನು ಎಸೆಯಬಾರದು. ಪರಿಸರವನ್ನು ವಿರೂಪಗೊಳಿಸಬಾರದು. ಮುಂದಿನ ಪೀಳಿಗೆಗಾಗಿ ಪರಿಸರವು ಸಂರಕ್ಷಿಸುವುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ. ವಿದ್ಯಾರ್ಥಿಗಳು ಪರಿಸರ ಸಂರಕ್ಷಿಸುವ ಬಗ್ಗೆ ಕಾಳಜಿ ಬೆಳೆಸಿಕೊಳ್ಳಬೇಕು ಎಂದು ಕರೆ ನೀಡಿದರು.
ಇದೇ ಸಂದರ್ಭದಲ್ಲಿ ತುಮಕೂರು ವಿ.ವಿ.ಯ ಆವರಣಲ್ಲಿ ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಗಿಡ ನೆಟ್ಟು, ನೀರೆರೆಯಲಾಯಿತು. ವೇದಿಕೆಯಲ್ಲಿ ವಿಶ್ವ ಪರಿಸರ ದಿನಾಚರಣೆಯ ಪ್ರತಿಜ್ಞಾ ವಿಧಿ ಬೋಧಿಸಲಾಯಿತು.
ಕಾರ್ಯಕ್ರಮದಲ್ಲಿ ಹಿರಿಯ ಸಿವಿಲ್ ನ್ಯಾಯಾಧೀಶರು ಮತ್ತು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳಾದ ನ್ಯಾ. ನೂರುನ್ನೀಸ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ಕೆ.ವಿದ್ಯಾಕುಮಾರಿ, ಅಪರ ಜಿಲ್ಲಾಧಿಕಾರಿ ಶಿವಾನಂದ ಬಿ ಕರಾಳೆ, ಕುಲಸಚಿವೆ ನಾಹಿದಾ ಜಂ ಜಂ, ಉಪ ಅರಣ್ಯ ಸಂರಕ್ಷಣಾಧಿಕಾರಿ ಅನುಪಮ ಹೆಚ್,, ನ್ಯಾಯಾಧೀಶರಾದ ರಾಮಲಿಂಗೇಗೌಡ, ರೂಪ ಕೆ. ಸೇರಿದಂತೆ ವಿವಿಧ ನ್ಯಾಯಾಧೀಶರು, ನ್ಯಾಯವಾದಿಗಳು, ತುಮಕೂರು ವಿ.ವಿಯ ವಿಧ್ಯಾರ್ಥಿಗಳು ಸಿಬ್ಬಂದಿಗಳು ಭಾಗವಹಿಸಿದ್ದರು.