ನಾಡು ನುಡಿ ರಕ್ಷಣೆಯೊಂದಿಗೆ ದೇಶದ ರಕ್ಷಣೆಯೂ ನಮ್ಮದಾಗಿದೆ : ಶಿವಾನಂದ ಶಿವಾಚಾರ್ಯ ಸ್ವಾಮೀಜಿ
ತುಮಕೂರು : ಪ್ರಜಾಪ್ರಭುತ್ವ ರಕ್ಷಣಾ ವೇದಿಕೆಯನ್ನು ಎಂ.ಜಿ.ರಸ್ತೆಯಲ್ಲಿರುವ ಬಾಲಭವನದ ಸಭಾಂಗಣದಲ್ಲಿ ವಿದ್ಯುಕ್ತವಾಗಿ ಪ್ರಾರಂಭಿಸಲಾಯಿತು. ಕನ್ನಡ ರಾಜ್ಯೋತ್ಸವ ಆಚರಿಸುವುದರ ಮೂಲಕ ವೇದಿಕೆಯನ್ನು ಲೋಕಾರ್ಪಣೆ ಮಾಡಿದ್ದು ವಿಶೇಷವಾಗಿತ್ತು.
ಕರ್ನಾಟಕದ ನಾಡಧ್ವಜಾರೋಹಣವನ್ನು ಮಹಾನಗರ ಪಾಲಿಕೆ ಮಹಾಪೌರರಾದ ಪ್ರಭಾವತಿ ಸುಧೀಶ್ವರ್ ನೆರವೇರಿಸಿದರು. ಈ ಸಂದರ್ಭದಲ್ಲಿ ಮಹಾನಗರ ಪಾಲಿಕೆ ಆಯುಕ್ತರಾದ ಅಶ್ವಿಜ, ಕೌಶಲ್ಯ ಅಭಿವೃದ್ಧಿ ಮಾಜಿ ಅಧ್ಯಕ್ಷರಾದ ಮುರಳೀಧರ ಹಾಲಪ್ಪ, ಉಪಸ್ಥಿತರಿದ್ದರು. ನಾಡಧ್ವಜ ವಂದನೆ ಸಲ್ಲಿಸಿದ ಬಳಿಕ ಮಾತನಾಡಿದ ಪಾಲಿಕೆ ಆಯುಕ್ತರಾದ ಅಶ್ವಿಜರವರು ಇಂದಿನ ಮಕ್ಕಳು ನಮ್ಮ ಮುಂದಿನ ಭವಿಷ್ಯದ ಆಸ್ತಿಗಳು, ಕನ್ನಡ ಭಾಷೆಯನ್ನು ಉಳಿಸಿ- ಬೆಳೆಸುವ ಕಾರ್ಯ ಮಕ್ಕಳಿಂದ ಆಗಬೇಕಿದೆ, ಪೋಷಕರು ಮಕ್ಕಳಲ್ಲಿ ಕನ್ನಡ ನಾಡು ನುಡಿ ಕುರಿತಾಗಿ ತಿಳುವಳಿಕೆ ನೀಡುವಂತಹ ಕಾರ್ಯ ಆಗಬೇಕಿದೆ ಎಂದರು.

ಮುಖ್ಯ ಅತಿಥಿಗಳಾದ ಮುರಳೀದರ ಹಾಲಪ್ಪರವರು ಮಾತನಾಡಿ ನಿಮ್ಮ ಈ ವೇದಿಕೆಯು ಇತರೆ ವೇದಿಕೆಗಳಿಗೆ ಮಾದರಿಯಾಗುವಂತೆ ಆಗಲಿ ನಿಮ್ಮ ಧ್ಯೇಯೋದ್ದೇಶಗಳನ್ನು ಕೇಳಿ ತಿಳಿದು ಅತ್ಯಂತ ಸಂತೋಷವಾಗಿದ್ದು, ಮುಂದಿನ ದಿನಗಳಲ್ಲಿ ನಿಮ್ಮ ವೇದಿಕೆಯಿಂದ ಉತ್ತಮ ಸಮಾಜಸೇವೆ ಕೆಲಸಗಳನ್ನು ಅಪೇಕ್ಷಿಸುತ್ತಿದ್ದೇವೆಂದರು, ಜೊತೆಗೆ ನಮ್ಮ ಹಾಲಪ್ಪ ಸಂಸ್ಥಾನದ ವತಿಯಿಂದ ಬಡ ಮಕ್ಕಳಿಗೆ ನಿಮ್ಮ ವೇದಿಕೆಯ ಮೂಲಕ ಉಚಿತವಾಗಿ ಸೈಕಲ್ಗಳನ್ನು ವಿತರಿಸಲಾಗುವುದು ಎಂದರು.
ಹಿರೇಮಠದ ಡಾ. ಶ್ರೀ ಶ್ರೀ ಶ್ರೀ ಶಿವಾನಂದ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ ನಿಮ್ಮ ಪ್ರಜಾಪ್ರಭುತ್ವ ರಕ್ಷಣಾ ವೇದಿಕೆಯು ಉತ್ತಮವಾಗಿ ಬೆಳೆಯಲಿ, ನಿಮ್ಮಗಳಿಗೆ ಉಜ್ವಲ ಭವಿಷತ್ತು ಇದ್ದು, ನಿಮ್ಮಗಳಿಂದ ಸಮಾಜಕ್ಕೆ ಉತ್ತಮ ಕೆಲಸ ಕಾರ್ಯಗಳು ನಡೆಯಲಿ ಎಂದು ಶುಭ ಹಾರೈಸಿದರು. ನಮ್ಮ ಕನ್ನಡ ಭಾಷೆಗೆ ಅತ್ಯಧಿಕ ಜ್ಞಾನಪೀಠ ಪ್ರಶಸ್ತಿ ಲಭಿಸಿದ್ದು, ನಮ್ಮ ಕನ್ನಡ ಭಾಷೆಗೆ ಸುಮಾರು ೨೫೦೦ ವರ್ಷಗಳಷ್ಟು ಇತಿಹಾಸವಿದ್ದು ಅದನ್ನು ಉಳಿಸಿ ಬೆಳೆಸುವ ಕಾರ್ಯ ಆಗಬೇಕಿದೆ ಎಂದರು.