Tumkur ದಕ್ಷಿಣ ಶೈಕ್ಷಣಿಕ ಜಿಲ್ಲೆಯ ಉಪನಿರ್ದೇಶಕರು ನಿಯಮ ಮೀರಿ ಅಮಾನತ್ತಾದ ಶಿಕ್ಷಕರನ್ನು ತುಮಕೂರು ತಾಲೂಕಿಗೆ ಸ್ಥಳ ನಿಯುಕ್ತಿಗೊಳಿಸಿದ್ದು, ಇವರ ವಿರುದ್ದ ತನಿಖೆ ನಡೆಸಿ, ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ದಲಿತ ಸೇನೆ ಜಿಲ್ಲಾಧ್ಯಕ್ಷ ಗೂಳೂರು ಸಿದ್ದರಾಜು ಒತ್ತಾಯಿಸಿದ್ದಾರೆ.
ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು,ವಿವಿಧ ಕಾರಣಗಳಿಂದ ಸರಕಾರಿ ಸೇವೆಯಿಂದ ಅಮಾನತ್ತಾಗಿದ್ದ ಸುಮಾರು 8 ಜನ ಶಿಕ್ಷಕರನ್ನು ಇಲಾಖೆಯ ನಿಯಮದಂತೆ ಶಿಕ್ಷಕರು ಹುದ್ದೆಗಳು ಹೆಚ್ಚು ಖಾಲಿ ಇರುವ ಸಿ.ವಲಯದ ಬ್ಲಾಕ್ಗಳಿಗೆ ನಿಯೋಜಿಸುವ ಬದಲು ಯಾವುದೇ ಕೊರತೆ ಇಲ್ಲದೆ ತುಮಕೂರು ತಾಲೂಕಿಗೆ ಸ್ಥಳ ನಿಯುಕ್ತಿಗೊಳಿಸುವ ಮೂಲಕ ಇಲಾಖೆಯ ಸಿ ಅಂಡ್ ಆರ್. ನಿಯಮಗಳನ್ನು ಗಾಳಿಗೆ ತೂರಿ ಕೆಲ ಶಿಕ್ಷಕರಿಗೆ ಅನುಕೂಲ ಮಾಡಿಕೊಟ್ಟಿದ್ದಾರೆ. ಹಾಗಾಗಿ ಇವರ ವಿರುದ್ದ ತನಿಖೆ ನಡೆಸಿ, ಸೂಕ್ತ ಕ್ರಮ ಕೈಗೊಳ್ಳಬೇಕೆಂಬುದು ದಲಿತ ಸೇನೆಯ ಒತ್ತಾಯವಾಗಿದೆ ಎಂದಿದ್ದಾರೆ.
ಈ ಹಿಂದೆ ಬಿ.ಆರ್.ಪಿ.ಯಾಗಿದ್ದ ಶಿಕ್ಷಕ ಜಗದೀಶ್.ಟಿ.ಎಸ್, ಅವರ ಬಿ.ಆರ್.ಪಿ ಸೇವೆ ಮುಗಿದ ನಂತರ ತುಮಕೂರು ತಾಲೂಕಿನಲ್ಲಿ ಸ್ಥಳವಿಲ್ಲದೆ ಕಾರಣ ದಕ್ಷಿಣ ಶೈಕ್ಷಣಿಕ ಜಿಲ್ಲೆಗೆ ಒಳಪಡುವ ತುರುವೇಕೆರೆ ತಾಲೂಕು ಮಾಸ್ತಿಗೊಂಡನಹಳ್ಳಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಸಹ ಶಿಕ್ಷಕರಾಗಿ ಸ್ಥಳ ನಿಯುಕ್ತಿಗೊಳಿಸಲಾಗಿತ್ತು.ಇವರ ಮೇಲೆ ಯಾವುದೇ ಗುರುತರ ಆರೋಪಗಳು ಇಲ್ಲಿದ್ದರೂ ಬೇಸಿಗೆ ರಜೆ ಇರುವ ಸಂದರ್ಭದಲ್ಲಿ ಅವರನ್ನು ಸೇವೆಯಿಂದ ಅಮಾನತ್ತು ಮಾಡಿದಂತೆ ಮಾಡಿ,ನಂತರ ಇಲಾಖೆಯ ನಿಯಮಗಳನ್ನು ಗಾಳಿಗೆ ತೂರಿ ತುಮಕೂರು ತಾಲೂಕಿಗೆ ಸ್ಥಳ ನಿಯುಕ್ತಿಗೊಳಿಸಲಾಗಿದೆ.ಇಲಾಖೆಯ ಸಿ.ಆಂಡ್ ಆರ್.ನಿಯಮಗಳ ಪ್ರಕಾರ ಹೊಸದಾಗಿ ಇಲಾಖೆಗೆ ಸೇರಿದಾಗ,ಮುಂಬಡ್ತಿ ಹೊಂದಿದಾಗ ಹಾಗೂ ಅಮಾನತ್ತಿನಂತಹ ಸಂದರ್ಭದಲ್ಲಿ ಸ್ಥಳ ನಿಯುಕ್ತಿಗೊಳಿಸುವ ಸಂದರ್ಭದಲ್ಲಿ ಶಿಕ್ಷಕರ ವರ್ಗಾವಣಾ ನಿಯಂತ್ರಣ ಕಾಯ್ದೆ-2020 ಸೆಕ್ಷನ್-3(1)ರ ಪ್ರಕಾರ ಮೊದಲು ಸಿ.ವಲಯ ಅಂದರೆ ಮಕ್ಕಳ ಸಂಖ್ಯೆ ಹೆಚ್ಚಿರುವ, ಶಿಕ್ಷಕರ ಕೊರತೆಯಿರುವ ಬ್ಲಾಕ್/ ತಾಲೂಕಿಗೆ ಮೊದಲು ಅದ್ಯತೆ ನೀಡಬೇಕೆಂಬ ನಿಯಮವಿದೆ
ತುಮಕೂರು ದಕ್ಷಿಣ ಶೈಕ್ಷಣಿಕ ಜಿಲ್ಲೆಯ ಡಿಡಿಪಿಐ ರವರು ಸುಮಾರು 8 ಜನ ಅಮಾನತ್ತಾದ ಶಿಕ್ಷಕರನ್ನು ನಿಯಮ ಮೀರಿ ತುಮಕೂರು ತಾಲೂಕಿಗೆ ನಿಯುಕ್ತಿಗೊಳಿಸಿದ್ದಾರೆ.ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಚುನಾವಣೆಗಾಗಿ ವರ್ಗಾವಣೆಯಲ್ಲಿ ಗೊಲ್ಮಾಲ್ ನಡೆದಿದೆ ಎಂಬ ಗುಮಾನಿ ಉಂಟಾಗಿದ್ದು,ಶಾಲಾ ಆಡಳಿತ ಇಲಾಖೆಯ ಆಯುಕ್ತರು ಸದರಿ ಪ್ರಕರಣದ ಕುರಿತು ಸೂಕ್ತ ತನಿಖೆ ನಡೆಸಿ, ತಪಿತಸ್ಥರ ವಿರುದ್ದ ಕ್ರಮ ಕೈಗೊಂಡು, ಅನ್ಯಾಯಕ್ಕೆ ಒಳಗಾಗಿರುವ ಶಿಕ್ಷಕರಿಗೆ ನ್ಯಾಯ ದೊರಕಿಸಿಕೊಡುವಂತೆ ದಲಿತ ಸೇನೆ ಜಿಲ್ಲಾಧ್ಯಕ್ಷ ಗೂಳೂರು ಸಿದ್ದರಾಜು ಒತ್ತಾಯಿಸಿದ್ದಾರೆ.
ನಿಯಮ ಮೀರಿ ಅಮಾನತ್ತಾದ ಶಿಕ್ಷಕರನ್ನು ತುಮಕೂರು ತಾಲೂಕಿಗೆ ಸ್ಥಳ ನಿಯುಕ್ತಿ
Leave a comment
Leave a comment